BBMP Election 2022: ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಸೂಚನೆ, ಕಾಲಮಿತಿ ನಿಗದಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ವಿಂಗಡನೆ ಮತ್ತು ಮೀಸಲಾತಿಯನ್ನೂ ಕಾಲಮಿತಿಯೊಳಗೆ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಲಾಗಿದೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಚುನಾವಣೆಗೆ ಕೊನೆಗೂ ಕಾಲಮಿತಿ ನಿಗದಿಯಾಗಿದೆ. ಎರಡು ತಿಂಗಳೊಳಗೆ (8 ವಾರ) ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಕರ್ನಾಟಕ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಸಂಬಂಧ ವಾರ್ಡ್ ಪುನರ್ವಿಂಗಡನೆ ಮತ್ತು ಮೀಸಲಾತಿಯನ್ನೂ ಕಾಲಮಿತಿಯೊಳಗೆ ನಿಗದಿಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಲಾಗಿದೆ.
ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆಗೆ ಯಾವುದೇ ಸಬೂಬು ಹೇಳಬಾರದು. ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು. ಬಾಕಿ ಇರುವ ಸ್ಥಳೀಯ ಸಂಸ್ಥೆಗಳಿಗೆ ಎರಡು ವಾರಗಳೊಳಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕು ಎಂದು ಈ ಹಿಂದೆ ಸೂಚನೆ ನೀಡಿತ್ತು.
ಸುಪ್ರೀಂಕೋರ್ಟ್ ಈ ತೀರ್ಪು ನೀಡಿದ ನಂತರ ಕರ್ನಾಟಕ ರಾಜಕಾರಣದಲ್ಲಿಯೂ ಸಂಚಲನ ಮೂಡಿತ್ತು. ಒಂದೂವರೆ ವರ್ಷಗಳಿಂದ ಚುನಾವಣೆ ಬಾಕಿ ಇರುವ ಬಿಬಿಎಂಪಿಗೆ ಇನ್ನು ಎರಡು ವಾರದೊಳಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬಹುದು ಎಂದು ಈ ಹಿಂದೆಯೂ ಅಂದಾಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದಾಗಿ ಬಿಬಿಎಂಪಿ ಚುನಾವಣೆಗೆ ಸುಪ್ರೀಂಕೋರ್ಟ್ ಈ ಮೊದಲು ತಡೆಯಾಜ್ಞೆ ನೀಡಿದ್ದ ಕಾರಣ, ಮಧ್ಯಪ್ರದೇಶದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಬಿಬಿಎಂಪಿಗೆ ಅನ್ವಯಿಸುವುದಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು.
ಆದರೆ ಇದೀಗ ಸುಪ್ರೀಂಕೋರ್ಟ್ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದೆ. ಇನ್ನು 8 ವಾರಗಳ ಒಳಗೆ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡುವ ಮೂಲಕ ಹಿಂದಿನ ಎಲ್ಲ ಗೊಂದಲಗಳನ್ನೂ ಪರಿಹರಿಸಿದೆ.
ಬಿಬಿಎಂಪಿಗೆ ಚುನಾವಣೆ ನಡೆಸುವ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪನ್ನು ರಾಜ್ಯ ಸರ್ಕಾ ಸುಪ್ರೀಂಕೋರ್ಟ್ನಲ್ಲಿ ಈ ಮೊದಲು ಪ್ರಶ್ನಿಸಿ ತಡೆಯಾಜ್ಞೆ ಪಡೆದುಕೊಂಡಿತ್ತು. ಈ ಪ್ರಕರಣವು ವಿಚಾರಣೆಗೆಂದು ಏಪ್ರಿಲ್ 25ರಂದು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಖಾನ್ವಿಲ್ಕರ್ ಅವರಿದ್ದ ನ್ಯಾಯಪೀಠದ ಎದುರು ಬಂದಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ನಾನೇ ನೀಡಿದ್ದ ತೀರ್ಪನ್ನು ಮತ್ತೆ ನಾನೇ ಮರುಪರಿಶೀಲನೆ ಮಾಡಲು ಬರುವುದಿಲ್ಲ ಎಂದು ಓಕಾ ಅವರು ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಓಕಾ ಅವರು ಹಿಂದೆ ಸರಿದ ನಂತರ ಮತ್ತೊಂದು ನ್ಯಾಯಪೀಠಕ್ಕೆ ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆಯನ್ನು ವರ್ಗಾಯಿಸಲಾಯಿತು. ಮೇ 21ರಿಂದ ಸುಪ್ರೀಂಕೋರ್ಟ್ಗೆ ಬೇಸಿಗೆ ರಜೆ ಆರಂಭವಾಗುವ ಕಾರಣ, ರಜೆ ನಂತರ ಅಂದರೆ ಜೂನ್ 12ರ ನಂತರವೇ ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆ ಆರಂಭವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಈ ನಡುವೆ ನ್ಯಾಯಮೂರ್ತಿ ಓಕಾ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ಮಧ್ಯಪ್ರದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದೊಳಗೆ ಖಾಲಿ ಇರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ತೀರ್ಪು ನೀಡಿತ್ತು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆಯೂ ಈ ತೀರ್ಪು ಊರ್ಜಿತವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಬೇಸಿಗೆ ರಜೆಗೆ ಒಂದು ದಿನ ಮೊದಲು (ಮೇ 20) ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕಾರಣ ಇಂದು ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಸ್ಪಷ್ಟನಿಲುವು ವ್ಯಕ್ತವಾಗಿದೆ.
ತಾಜಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Fri, 20 May 22