ಸಿಎಂ ನಗರ ಪ್ರದಕ್ಷಿಣೆ ಫೋಟೊ ಸೆಷನ್ ಆಗಬಾರದು: ಎಚ್ಡಿ ಕುಮಾರಸ್ವಾಮಿ ತಾಕೀತು
ಮೊದಲು ಡಕಾಯಿತರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿತ್ತು. ಆದರೆ ಈಗ ಇಲ್ಲೇ ಡಕಾಯಿತರನ್ನು ನೋಡಬಹುದು ಎಂದು ವ್ಯಂಗ್ಯವಾಡಿದರು.
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಲ್ಕನೇ ದಿನ ನಗರ ಸಂಚಾರ ಮಾಡುತ್ತಿದ್ದಾರೆ.. ಅವರಿಗೆ ನಿಜವಾಗಿಯೂ ಸಮಸ್ಯೆಗಳ ಅರಿವಾಗಿದ್ದರೆ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ಅದು ಬಿಟ್ಟು ಸಿಎಂ ನಗರ ಸಂಚಾರ ಎನ್ನುವುದು ಫೊಟೊ ಸೆಷನ್ ಆಗಬಾರದು ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮಳೆಯಿಂದ ಹಾನಿಗೊಳಗಾದ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಜನರೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದ ಅವರು, ಸರ್ಕಾರದಲ್ಲಿ ಕೆಲವರಾದರೂ ಪ್ರಾಮಾಣಿಕ ಅಧಿಕಾರಿಗಳು ಇರುತ್ತಾರೆ. ಅಂಥವರಿಗೆ ಜವಾಬ್ದಾರಿ ಕೊಟ್ಟು ಸರ್ಕಾರ ಕೆಲಸ ಮಾಡಿಸಬೇಕು. ಎಲ್ಲದರಲ್ಲಿಯೂ ಹಣ ಹೊಡೆಯುವ ಡಕಾಯಿತರನ್ನು ದೂರ ತಳ್ಳಬೇಕು. ಮೊದಲು ಡಕಾಯಿತರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿತ್ತು. ಆದರೆ ಈಗ ಇಲ್ಲೇ ಡಕಾಯಿತರನ್ನು ನೋಡಬಹುದು ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ ಅಂಥ ಡಕಾಯಿತ ಅಧಿಕಾರಿಗಳಿದ್ದಾರೆ. ರಾಜಕಾಲುವೆ ಒತ್ತುವರಿಯಾಗಿದೆ ಎಂದು ಎಷ್ಟೋ ವರ್ಷಗಳಿಂದ ಹೇಳುತ್ತಿದ್ದಾರೆ. ರಾಜಕಾಲುವೆ ಸಮಸ್ಯೆ ಪರಿಹರಿಸಲು ಇಷ್ಟು ವರ್ಷಗಳು ಬೇಕಿತ್ತೇ? ಸಿಎಂ ಸಿಟಿ ರೌಂಡ್ಸ್ ಮಾಡುವ ಅವಶ್ಯಕತೆ ಏನೇನೂ ಇಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ನೋಡಿ ಕ್ರಮ ಕೈಗೊಂಡರೆ ಸಾಕು. ಕಾಟಾಚಾರದ ಸಿಟಿ ರೌಂಡ್ಸ್ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಮಳೆಯಿಂದ ನಷ್ಟ ಅನುಭವಿಸುವವರಿಗೆ ಸರ್ಕಾರ ಸಮರ್ಪಕ ಪರಿಹಾರ ಒದಗಿಸಬೇಕು. ತೋರಿಕೆಗೆಂದು ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು. ಜನರು ಅನುಭವಿಸಿರುವ ನಷ್ಟದ ಪ್ರಮಾಣದ ಶೇ 75ರಷ್ಟು ಮೊತ್ತವನ್ನು ಪರಿಹಾರವಾಗಿ ನೀಡಬೇಕು. ಅಧಿಕಾರಿಗಳು ಎಲ್ಲದರಲ್ಲಿಯೂ ದುಡ್ಡು ಹೊಡೆಯಲು ನೋಡುತ್ತಾರೆ. ಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು. ಸಿಎಂ ನಗರ ಪ್ರದಕ್ಷಿಣೆಯು ಕೇವಲ ಫೋಟೊ ಸೆಷನ್ ಅಷ್ಟೇ ಆಗಬಾರದು. ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ದಾಸರಹಳ್ಳಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದೆ. ಇವರು ಅಧಿಕಾರಕ್ಕೆ ಬಂದ ನಂತರ ನಾವು ಕೊಟ್ಟ ಅನುದಾನ ತಡೆಹಿಡಿದರು ಎಂದು ಬಸಪ್ಪನಕಟ್ಟೆಯಲ್ಲಿ ಹೇಳಿದರು. ಇಷ್ಟು ವರ್ಷಗಳಾದರೂ ದಾಸರಹಳ್ಳಿ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಬೆಂಗಳೂರಿನ 28 ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ. 15 ವರ್ಷದಲ್ಲಿ ಎಷ್ಟು ಹಣ ಕೊಟ್ಟಿದ್ದಾರೆಂದು ಮಾಹಿತಿ ಪಡೆಯುವೆ ಎಂದರು.
ಮನೆಗಳಿಗೆ ನೀರು ನುಗ್ಗಿದರೆ ಸಣ್ಣ ಮಕ್ಕಳನ್ನಿಟ್ಟುಕೊಂಡವರು ಹೇಗೆ ಜೀವನ ಮಾಡಬೇಕು? ಬಿಜೆಪಿ ಶಾಸಕರು ಅಧಿಕಾರದಲ್ಲಿರುವ ಕ್ಷೇತ್ರಗಳಿಗೆ ಮಾತ್ರ ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ. ಬೊಮ್ಮಾಯಿ ಅವರೇ ನೀವು ಇನ್ನೆಷ್ಟು ಮುಖ್ಯಮಂತ್ರಿಯಾಗಿ ಇರುತ್ತೀರೋ ಗೊತ್ತಿಲ್ಲ. ಆದರೆ ಜನರ ಜೀವನದ ಜೊತೆಗೆ ಚೆಲ್ಲಾಟ ಆಡಬೇಡಿ ಎಂದು ಹೇಳಿದರು.
ಬಾಣವಾರದ ಬಿಟಿಎಸ್ ಲೇಔಟ್, ದಾಸರಹಳ್ಳಿ ಕ್ಷೇತ್ರದ ರುಕ್ಮಿಣಿನಗರದಲ್ಲಿಯೂ ಎಚ್.ಡಿ.ಕುಮಾರಸ್ವಾಮಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದರು. ಈ ವೇಳೆ ಶಾಸಕ ಮಂಜುನಾಥ್, ಮಾಜಿ ಎಂಎಲ್ಸಿ ಶರವಣ ಜೊತೆಗಿದ್ದರು.
ತಾಜಾ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Fri, 20 May 22