ಜಿಬಿಎ ಲ್ಯಾಬ್‌ಗೆ ಅಂಟಿದ ಗ್ರಹಣ: ಬೆಂಕಿ ಅವಘಡದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!

ಬೆಂಗಳೂರು ಬಿಬಿಎಂಪಿ (GBA) ಕೇಂದ್ರ ಕಚೇರಿಯ ಬೆಂಕಿ ಅವಘಡದ ನಂತರವೂ ಗುಣನಿಯಂತ್ರಣ ಪ್ರಯೋಗಾಲಯದ ಪುನಶ್ಚೇತನ ಕಾರ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಇಂದಿಗೂ ಧೂಳು ಹಿಡಿಯುತ್ತಿದ್ದು, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಈಗ ಸಂಶಯ ಮೂಡಿದೆ.

ಜಿಬಿಎ ಲ್ಯಾಬ್‌ಗೆ ಅಂಟಿದ ಗ್ರಹಣ: ಬೆಂಕಿ ಅವಘಡದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಕ್ವಾಲಿಟಿ ಕಂಟ್ರೋಲ್ ಲ್ಯಾಬ್
Image Credit source: The Hindu

Updated on: Apr 29, 2026 | 8:37 AM

ಬೆಂಗಳೂರು, ಏಪ್ರಿಲ್ 29: ಸಿಲಿಕಾನ್ ಸಿಟಿಯ ಅಭಿವೃದ್ಧಿ ಕಾಮಗಾರಿಗಳ ಬೆನ್ನೆಲುಬಾಗಬೇಕಿದ್ದ ಬಿಬಿಎಂಪಿ ಗುಣನಿಯಂತ್ರಣ ಪ್ರಯೋಗಾಲಯವು (Quality Control Lab) ಸದ್ಯ ಅನಾಥ ಸ್ಥಿತಿಯಲ್ಲಿದೆ. ಎರಡು ವರ್ಷಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿದ್ದ ಲ್ಯಾಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡ ಹಲವರನ್ನು ಬಲಿ ಪಡೆದಿತ್ತು. ಆ ಘಟನೆಯ ನಂತರವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮತ್ತು ಜಿಬಿಎ (GBA), ಪ್ರಯೋಗಾಲಯದ ಪುನಶ್ಚೇತನಕ್ಕೆ ಆಸಕ್ತಿ ತೋರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸ ಲ್ಯಾಬ್ ನಿರ್ಮಾಣಕ್ಕಿನ್ನೂ ಬಂದಿಲ್ಲ ಮುಹೂರ್ತ!

ದುರಂತದ ನಂತರ ಸುಸಜ್ಜಿತವಾದ ಹೊಸ ಲ್ಯಾಬ್ ನಿರ್ಮಿಸುವುದಾಗಿ ಪಾಲಿಕೆ ನೀಡಿದ್ದ ಭರವಸೆ ಕೇವಲ ಕಾಗದದ ಮೇಲೆಯೇ ಉಳಿದಿದೆ. ಪರಿಣಾಮವಾಗಿ, ಸಾರ್ವಜನಿಕ ತೆರಿಗೆ ಹಣದಲ್ಲಿ ಖರೀದಿಸಲಾದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಧುನಿಕ ಯಂತ್ರೋಪಕರಣಗಳು ಬಳಕೆಯಿಲ್ಲದೆ ಧೂಳು ಹಿಡಿಯುತ್ತಿವೆ. ನಗರದಲ್ಲಿ ನಡೆಯುತ್ತಿರುವ ಕೋಟ್ಯಂತರ ರೂಪಾಯಿ ವೆಚ್ಚದ ಕಾಮಗಾರಿಗಳ ಗುಣಮಟ್ಟವನ್ನು ಪರೀಕ್ಷಿಸಲು ಈ ಲ್ಯಾಬ್ ಅತ್ಯಗತ್ಯವಾಗಿತ್ತು. ಆದರೆ ಪ್ರಸ್ತುತ ಇದು ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ, ರಸ್ತೆ ಹಾಗೂ ಕಟ್ಟಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್, ಅಧಿಕಾರಿಗಳು ತಮ್ಮ ಭ್ರಷ್ಟಾಚಾರ ಮತ್ತು ಕಳ್ಳಾಟವನ್ನು ಮುಚ್ಚಿಡಲು ಉದ್ದೇಶಪೂರ್ವಕವಾಗಿ ಲ್ಯಾಬ್ ಕಾರ್ಯನಿರ್ವಹಿಸದಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಬೆಂಕಿ ಅವಘಡದಂತಹ ಪಾಠ ಕಲಿತ ಮೇಲೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಶೋಚನೀಯವಾಗಿದೆ. ಗುಣಮಟ್ಟದ ತಪಾಸಣೆಯಿಲ್ಲದೆ ನಗರದ ಮೂಲಸೌಕರ್ಯಗಳು ಹಳ್ಳ ಹಿಡಿಯುವ ಭೀತಿ ಎದುರಾಗಿದೆ.

ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us