
ಬೆಂಗಳೂರು, ಫೆಬ್ರವರಿ 22: ಕಳೆದ ಬಾರಿಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಿಂತ ಮುನ್ನವೇ ಬಿಬಿಎಂಪಿ ಚುನಾವಣೆ ನಡೆಯಬೇಕಿತ್ತು. ಆದರೆ ಪಾಲಿಕೆ ಚುನಾವಣೆ ವಿವಾದ ವಿಚಾರ ಕೋರ್ಟ್ನಲ್ಲಿದೆ. ಸದ್ಯದ ಬೆಳವಣಿಗೆಗಳನ್ನ ಗಮನಿಸಿದರೆ, ಮುಂದಿನ ಎರಡು, ಮೂರು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ನಿರೀಕ್ಷೆ ಇದೆ. ಮೀಸಲಾತಿ, ಕ್ಷೇತ್ರ ಪುನರ್ ವಿಂಗಡಣೆ ಕೆಲಸ ಸೇರಿದಂತೆ ಹಲವು ವಿಚಾರಗಳಿಂದ ಬಿಬಿಎಂಪಿ ಚುನಾವಣೆಗೆ ಹಿನ್ನೆಡೆಯಾಗುತ್ತಿದೆ.
ಗ್ರೇಟರ್ ಬೆಂಗಳೂರು ಯೋಜನೆಯಡಿ ಬೆಂಗಳೂರು ನಗರವನ್ನು 5 ಭಾಗಗಳಾಗಿ ವಿಂಗಡಿಸಲು ಸರ್ಕಾರ ಮುಂದಾಗಿದೆ. ಬಿಬಿಎಂಪಿ ವಿಚಾರವಾಗಿ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸಮಿತಿ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಸದ್ಯ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ. ಮಹಿಳೆಯರಿಗೆ ಶೇ 50 ಮೀಸಲಾತಿ ನೀಡಲಾಗುವ ವಿಚಾರ ಪ್ರಸ್ತಾಪಿಸಿದ್ದಾರೆ. ನಾವು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನ್ಯಾಯಾಲಯಕ್ಕೆ ನಾವು ಅಫಿಡವಿಟ್ ಸಲ್ಲಿಕೆ ಮಾಡಿದ್ದೇವೆ ಎಂದಿದ್ದಾರೆ.
ಈ ಮಧ್ಯೆ, ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯ ಸಾಧಕಬಾಧಕಗಳನ್ನು ಚರ್ಚಿಸಲು ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಲಾಗಿದೆ. ಸಭೆಯಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ಡಾ.ಸಿ.ಎನ್ ಅಶ್ವಥ್ ನಾರಾಯಣ, ಶಾಸಕ ಮುನಿರತ್ನ ಸೇರಿದಂತೆ ಮಾಜಿ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು. ಈ ಮಸೂದೆ ವಿರೋಧಿಸಿ ಹೋರಾಟ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಯಾವುದೇ ಕಾರಣಕ್ಕೂ ಬೆಂಗಳೂರು ವಿಭಜನೆ ಬೇಡ ಅಂತ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.
ಹಲವು ಕಾರಣಗಳಿಂದ ವಿಪಕ್ಷ ಬಿಜೆಪಿ ಗ್ರೇಟರ್ ಬೆಂಗಳೂರು ಯೋಜನೆಯನ್ನ ವಿರೋಧ ಮಾಡುತ್ತಿದೆ.
ಇದನ್ನೂ ಓದಿ: ಬಿಎಂಟಿಸಿಯ ಹೊಸ ಎಲೆಕ್ಟ್ರಿಕ್ ಬಸ್ಗಳಿಗೆ ಶಾಕ್! ಸಂಚಾರವೇ ಸ್ಥಗಿತ: ಕಾರಣವೇನು ಗೊತ್ತಾ?
ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರು ನಗರವನ್ನ ವಿಭಜಿಸುವುದರ ಜೊತೆಗೆ ಬೆಂಗಳೂರಿನ ಆಸುಪಾಸಿನ ವಲಯಗೂ ಬೆಂಗಳೂರು ವ್ಯಾಪ್ತಿಗೆ ಬರಲಿದೆ. ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ, ಎಲ್ಲ ವಲಯಗಳಲ್ಲೂ ಅವರೇ ಗೆಲುವು ಸಾಧಿಸಬಹುದೆಂಬ ಕಾರಣದಿಂದ ಬಿಜೆಪಿ ವಿರೋಧ ಮಾಡುತ್ತಿದೆ ಎಂಬ ಮಾತು ಹೆಚ್ಚಾಗಿ ಚರ್ಚೆ ಆಗುತ್ತಿದೆ.
Published On - 1:16 pm, Sat, 22 February 25