ಏ 30 ರೊಳಗೆ ಆಸ್ತಿ ತೆರಿಗೆ ಪಾವತಿಸುವವರಿಗೆ ಬಿಬಿಎಂಪಿ ಶುಭಸುದ್ದಿ: 5% ರಿಯಾಯಿತಿ ನೀಡಿದ ಬಿಬಿಎಂಪಿ
ಬಿಬಿಎಂಪಿ 2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಏಪ್ರಿಲ್ 30ರೊಳಗೆ ಪಾವತಿಸಿದರೆ ಶೇ.5 ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದೆ. ಬಿಬಿಎಂಪಿ 2025-26ರಲ್ಲಿ 6,000 ಕೋಟಿ ರೂ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದೆ. ಬಿಬಿಎಂಪಿ 2024-25ನೇ ಸಾಲಿನಲ್ಲಿ ಬರೋಬ್ಬರಿ 4,930 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿತ್ತು.

ಬೆಂಗಳೂರು, ಏಪ್ರಿಲ್ 17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2024-25ನೇ ಸಾಲಿನಲ್ಲಿ ಬರೋಬ್ಬರಿ 4,930 ಕೋಟಿ ರೂ. ಆಸ್ತಿ ತೆರಿಗೆ (Property tax) ಸಂಗ್ರಹಿಸಿತ್ತು. ಇದು ಕಳೆದ ವರ್ಷಗಿಂತ ಸರಿಸುಮಾರು ಶೇ. 25 ರಷ್ಟು ಹೆಚ್ಚಳವಾಗಿದೆ. 2023-24ನೇ ಸಾಲಿನಲ್ಲಿ 3,918 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಇದೀಗ ಮುಂದಿನ ವರ್ಷದ ಅಂದರೆ 2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿಸಲು ಬಿಬಿಎಂಪಿ ಅವಕಾಶ ನೀಡಿದ್ದು, ಭರ್ಜರಿ ಆಫರ್ ಕೂಡ ನೀಡಿದೆ.
ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ, 2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡಿಯಿರಿ ಎಂದು ತಿಳಿಸಿದೆ. ಆ ಮೂಲಕ ಆಸ್ತಿ ತೆರಿಗೆದಾರರಿಗೆ ಬಿಬಿಎಂಪಿ ಗುಡ್ ನ್ಯೂಸ್ ನೀಡಿದೆ. ಬಿಬಿಎಂಪಿ 2025-26ನೇ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಆರು ಸಾವಿರ ಕೋಟಿ ರೂ ದಾಟುವ ಗುರಿ ಹೊಂದಿದೆ.
ಬಿಬಿಎಂಪಿ ಟ್ವೀಟ್
Pay your full property tax of 2025-26 by 30.04.2025 and avail 5% rebate.
2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 30.04.2025 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡಿಯಿರಿ.#BBMP #BBMPCares #propertytax #property #tax #bbmpchiefcommissioner pic.twitter.com/62CuE5EIZG
— Bruhat Bengaluru Mahanagara Palike (@BBMPofficial) April 16, 2025
2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 4,930 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಇದು 2023-24ರಲ್ಲಿ ಸಂಗ್ರಹವಾಗಿದ್ದ 3,918 ಕೋಟಿಗಿಂತ ಸರಿಸುಮಾರು ಶೇ.25 ರಷ್ಟು ಹೆಚ್ಚಳವಾಗಿತ್ತು. ಆ ಮೂಲಕ ಬಿಬಿಎಂಪಿ 2024-25ನೇ ಆರ್ಥಿಕ ವರ್ಷದಲ್ಲಿ ಶೇ.94 ರಷ್ಟು ಆದಾಯ ಗುರಿ ಸಾಧಿಸಿತ್ತು.
ಇದನ್ನೂ ಓದಿ: BBMP Property tax: ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಬರೋಬ್ಬರಿ ಸಾವಿರ ಕೋಟಿ ರೂ. ಹೆಚ್ಚಳ
ಬಿಬಿಎಂಪಿಯ ಎಂಟು ವಲಯಗಳ ಪೈಕಿ, ಯಲಹಂಕ 464.66 ಕೋಟಿ ರೂ. ಸಂಗ್ರಹಿಸುವ ಮೂಲಕ ನಿಗದಿತ ಗುರಿಗಿಂತ 19 ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹಿಸಿತ್ತು. ಅದೇ ರೀತಿಯಾಗಿ ಮಹದೇವಪುರ 1,310.58 ಕೋಟಿ ರೂ. ಸಂಗ್ರಹಿಸಿತ್ತು. ಆ ಮೂಲಕ ಯಲಹಂಕ ಮತ್ತು ಮಹದೇವಪುರ ಹೆಚ್ಚು ತೆರಿಗೆ ಸಂಗ್ರಹಿಸಿದ ವಲಯಗಳಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:18 am, Thu, 17 April 25