
ಬೆಂಗಳೂರು, (ಆಗಸ್ಟ್ 14): ಬಿಬಿಎಂಪಿಯಲ್ಲಿ (BBMP) ಆಧಾರ್ ಆಧಾರಿತ ಸ್ವಯಂಚಾಲಿತ ಆಸ್ತಿ ತಿದ್ದುಪಡಿಗಳ ಕುರಿತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಹತ್ವದ ಸೂಚನೆ ಹೊರಡಿಸಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ ಕೆ ಶಿವಕುಮಾರ್ (DK Shivakumar) ಅವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೂರದೃಷ್ಟಿಯಿಂದ ಆಧಾರ್ ಆಧಾರಿತ ಸ್ವಯಂಚಾಲಿತ ಆಸ್ತಿ ವರ್ಗಾವಣೆ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಆಸ್ತಿಯ ಬಾಕಿ ಇರುವ ಖಾತೆ ವರ್ಗಾವಣೆಗಳನ್ನು ಆನ್‌ಲೈನ್ ಮೂಲಕ ಈ ಕೆಳಗಿನಂತೆ ಸ್ವಯಂಚಾಲಿತ ಆಸ್ತಿ ತಿದ್ದುಪಡಿಗಳನ್ನು ಪಡೆಯಬಹುದು.
ಕಳೆದ ಕೆಲವು ದಿನಗಳಿಂದ ಇ – ಖಾತಾ ಹಾಗೂ ಸ್ವಯಂ ಆಸ್ತಿ ಘೋಷಣೆಯಲ್ಲಿ ಲೋಪ ಮಾಡಿರುವ ಬೆಂಗಳೂರಿನ ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನೋಟಿಸ್ ಜಾರಿ ಮಾಡುತ್ತಿದ್ದರು. ಸ್ವಯಂ ಆಸ್ತಿ ಘೋಷಣೆ ಲೋಪ ಹಿನ್ನಲೆಯಲ್ಲಿ ದಂಡ ಪಾವತಿ ಮಾಡಬೇಕು ಎಂದೂ ಸೂಚನೆ ನೀಡಲಾಗಿತ್ತು. ಆದ್ರೆ, ಇದೀಗ ಬೆಂಗಳೂರಿನ ಆಸ್ತಿದಾರರಿಗೆ ಆಧಾರ್ ಆಧಾರಿತ ಸ್ವಯಂಚಾಲಿತ ಆಸ್ತಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ನಾಗರಿಕರು ತಮ್ಮ ಆಸ್ತಿ ಬಾಕಿಯಿರುವ ಖಾತೆ ವರ್ಗಾವಣೆಗಳನ್ನು ಆನ್‌ಲೈನ್ ಮೂಲಕ ಸ್ವಯಂಚಾಲಿತ ಆಸ್ತಿಯಾಗಿ ತಿದ್ದುಪಡಿ ಮಾಡಿಕೊಳ್ಳಬಹುದು. ಮಾರಾಟಗಾರರ ಆಧಾರ್ ಮತ್ತು ಇ-ಖಾತೆ ಹೊಂದಿರುವ ಮಾಲೀಕರ ಆಧಾರ್‌ನಲ್ಲಿನ ಹೆಸರಿನೊಂದಿಗೆ ಹೊಂದಾಣಿಕೆಯಾದರೆ, 7 ದಿನಗಳ ಆಕ್ಷೇಪಣಾ ಅವಧಿಯ ನಂತರ ವಿವಾದರಹಿತ ಮ್ಯುಟೇಷನ್ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತದೆ.
1. ಪಾಲಿಕೆ ಜಾಲತಾಣ https://bbmpeaasthi.karnataka.gov.in ಕ್ಕೆ ಭೇಟಿ ನೀಡಿ.
2. “ಪ್ರಮುಖ ಸೂಚನೆಗಳು” ಅಡಿಯಲ್ಲಿ “ekhata Automatic Mutations – Get Your Mutation” ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಇ.ಪಿ.ಐ.ಡಿ ಸಂಖ್ಯೆಯ ಮೂಲಕ ಬಾಕಿ ಇರುವ ನಿಮ್ಮ ಇ-ಖಾತಾ ಮ್ಯುಟೇಷನ್ನು ಎನ್ನುವ ಆಯ್ಕೆಯನ್ನು ಹುಡುಕಿ.
4. ಮಾರಾಟಗಾರರ/ನೀಡುವವರ ಮತ್ತು ಖರೀದಿದಾರರ/ಸ್ವೀಕರಿಸುವವರ ಆಧಾರ್ ಇ-ಕೆವೈಸಿ ದೃಢೀಕರಣವನ್ನು ಮಾಡಿ.
5. ಮಾರಾಟಗಾರರ/ನೀಡುವವರ ಆಧಾರ್ ಮತ್ತು ಇ-ಖಾತೆ ಹೊಂದಿರುವ ಮಾಲೀಕರ ಆಧಾರ್‌ನೊಂದಿಗೆ ಹೆಸರಿನೊಂದಿಗೆ ಹೊಂದಾಣಿಕೆಯಾದರೆ, 7 ದಿನಗಳ ಆಕ್ಷೇಪಣಾ ಅವಧಿಯ ನಂತರ ವಿವಾದರಹಿತ ಮ್ಯುಟೇಷನ್ ಸ್ವಯಂಚಾಲಿತವಾಗಿ ಅನುಮೋದನೆಗೊಳ್ಳುತ್ತದೆ.
6. ಸೂಚನೆ: ಯಾವುದೇ ವಿವಾದಿತ ಪ್ರಕರಣವನ್ನು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಯಿಂದ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗುವುದು ಎಂದೂ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.