ಬೆಂಗಳೂರಿಗಾಗಿ ದಿನಕ್ಕೆ 100 ಕೋಟಿ ಖರ್ಚು!: ಇಷ್ಟೊಂದು ಖರ್ಚಾದರೂ ಸಮಸ್ಯೆಗಳೇಕೆ ತಪ್ಪುತ್ತಿಲ್ಲ? ಈ ಹಣ ಎಲ್ಲಿಗೆ ಹೋಗುತ್ತಿದೆ?
ಬೆಂಗಳೂರು ನಗರದ ಅಭಿವೃದ್ಧಿ ಮತ್ತು ನಿರ್ವಹಣೆಗೆ ಪ್ರತಿದಿನ ಸರಾಸರಿ 100 ಕೋಟಿ ರೂ.ಗೂ ಹೆಚ್ಚು ಹಣ ಖರ್ಚಾಗುತ್ತಿದೆ. ಆದರೂ ರಸ್ತೆ ಗುಂಡಿ, ಟ್ರಾಫಿಕ್, ನೀರಿನ ಸಮಸ್ಯೆಗಳು ಬಗೆಹರಿಯುತ್ತಿಲ್ಲ. 'ಜನಾಗ್ರಹ' ವರದಿ ಪ್ರಕಾರ, 2021-22ರಲ್ಲಿ ಒಟ್ಟು 38,455 ಕೋಟಿ ರೂ. ವೆಚ್ಚವಾಗಿದೆ. ಪಾರದರ್ಶಕತೆ, ಜವಾಬ್ದಾರಿ ಕೊರತೆ ಹಾಗೂ ಏಕೀಕೃತ ವ್ಯವಸ್ಥೆಯಿಲ್ಲದಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಬೆಂಗಳೂರು, ಏ.13: ಬೆಂಗಳೂರಿನಲ್ಲಿ ದಿನಕ್ಕೊಂದು ನಡೆಯುವ ಅಭಿವೃದ್ಧಿ ಕೆಲಸಕ್ಕಾಗಿ ದೊಡ್ಡ ಮಟ್ಟದ ಹಣಗಳು ವ್ಯಯವಾಗುತ್ತದೆ. ಈ ಬಗ್ಗೆ ಶಾಕಿಂಗ್ ವರದಿಯೊಂದು ಕೇಳಿ ಬಂದಿದೆ. ನಗರದ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮತ್ತು ವಿವಿಧ ಸಾರ್ವಜನಿಕ ಸಂಸ್ಥೆಗಳು ಪ್ರತಿದಿನ ಸರಾಸರಿ 100 ಕೋಟಿ ರೂಪಾಯಿಗಿಂತಲೂ ಅಧಿಕ ಹಣವನ್ನು ಖರ್ಚು ಮಾಡುತ್ತಿವೆ. ‘ಜನಾಗ್ರಹ’ ಸಂಸ್ಥೆಯು 2021-22ನೇ ಸಾಲಿನ 13 ವಿವಿಧ ಪ್ರಾಧಿಕಾರಗಳ ಸುಮಾರು 70 ಹಣಕಾಸು ದಾಖಲೆಗಳನ್ನು ಪರಿಶೀಲಿಸಿ ಈ ವರದಿಯನ್ನು ನೀಡಿದೆ. ಒಂದು ವರ್ಷದಲ್ಲಿ ಒಟ್ಟು ಸಾರ್ವಜನಿಕ ವೆಚ್ಚ 38,455 ಕೋಟಿ ರೂಪಾಯಿ ತಲುಪಿದೆ ಎಂದು ಅಚ್ಚರಿಯ ವರದಿಯನ್ನು ನೀಡಿದೆ.
ಬೆಂಗಳೂರಿನ ಒಟ್ಟು ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಪಾಲು ಕೇವಲ ಶೇ. 20ರಷ್ಟು ಮಾತ್ರ. ಉಳಿದ ಶೇ. 80ರಷ್ಟು ಹಣದ ಮೇಲೆ ಈ ಕೆಳಗಿನ ಏಜೆನ್ಸಿಗಳು ನಿಯಂತ್ರಣ ಹೊಂದಿವೆ.
ಬೆಸ್ಕಾಂ (BESCOM): ವಿದ್ಯುತ್ ಸರಬರಾಜು.
ಬಿಎಂಆರ್‌ಸಿಎಲ್ (BMRCL): ನಮ್ಮ ಮೆಟ್ರೋ ಯೋಜನೆ.
ಬೆಮಜಮಂ (BWSSB): ನೀರು ಸರಬರಾಜು ಮತ್ತು ಒಳಚರಂಡಿ.
ಬಿಎಂಟಿಸಿ (BMTC): ಸಾರಿಗೆ ಸೇವೆ.
ಇದನ್ನೂ ಓದಿ: ಮುಜರಾಯಿ ಇಲಾಖೆಗೆ ಲಕ್ಷ ಲಕ್ಷ ಆದಾಯ ತಂದ ದೇಗುಲ, ಸಮುದಾಯ ಭವನಗಳಲ್ಲಿನ ಶೂಟಿಂಗ್!

ಇಷ್ಟೊಂದು ಖರ್ಚಾದರೂ ಸಮಸ್ಯೆಗಳೇಕೆ ತಪ್ಪುತ್ತಿಲ್ಲ?
ಸಾವಿರಾರು ಕೋಟಿ ರೂಪಾಯಿ ಖರ್ಚಾಗುತ್ತಿದ್ದರೂ, ಬೆಂಗಳೂರಿನ ರಸ್ತೆ ಗುಂಡಿಗಳು, ಟ್ರಾಫಿಕ್ ಕಿರಿಕಿರಿ ಮತ್ತು ನೀರಿನ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ. ಇದಕ್ಕೆ ಕೆಲವೊಂದು ಪ್ರಮುಖ ಕಾರಣಗಳನ್ನು ಕೂಡ ನೀಡಲಲಾಗಿದೆ.
ಜವಾಬ್ದಾರಿಯ ಕೊರತೆ: ಹಣವು ವಿವಿಧ ಏಜೆನ್ಸಿಗಳ ನಡುವೆ ಹಂಚಿಹೋಗಿರುವುದರಿಂದ, ಹಣ ಎಲ್ಲಿ ಮತ್ತು ಹೇಗೆ ಬಳಕೆಯಾಯಿತು ಎಂಬ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿ: 2020ರಿಂದ ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಸಾರ್ವಜನಿಕರ ನೇರ ನಿಗಾ ಕಡಿಮೆಯಾಗಿದೆ.
ಏಕೀಕೃತ ವ್ಯವಸ್ಥೆಯ ಕೊರತೆ: ನಗರಕ್ಕೆ ಸಮಗ್ರವಾದ ಏಕೈಕ ಹಣಕಾಸು ವ್ಯವಸ್ಥೆ ಇಲ್ಲದಿರುವುದು ಆಡಳಿತಾತ್ಮಕ ಗೊಂದಲಕ್ಕೆ ಕಾರಣವಾಗಿದೆ.
ವರದಿಯ ಪ್ರಕಾರ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇಲ್ಲದಿದ್ದರೆ ಎಷ್ಟು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದರೂ ಅದು ಸಾರ್ವಜನಿಕರಿಗೆ ಗುಣಮಟ್ಟದ ಸೇವೆಯಾಗಿ ಬದಲಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




