AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಕಂಪನಿಗೆ ಇ-ಖಾತಾ ಹೊಣೆ: ಪಾಸ್​ಪೋರ್ಟ್ ಕಚೇರಿ ಮಾದರಿಯಲ್ಲಿ ತಾತ್ಕಾಲಿಕ ಆಫೀಸ್ ತೆರೆಯಲು ಬಿಬಿಎಂಪಿ ಚಿಂತನೆ

ಬೆಂಗಳೂರಿನಲ್ಲಿ ಇ ಖಾತಾ ಪಡೆಯುವುದಕ್ಕೆ ಪಾಲಿಕೆ ಇತ್ತೀಚೆಗಷ್ಟೇ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ. ಬಿಬಿಎಂಪಿಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ ಇ-ಖಾತಾಗಾಗಿ ಕೌಂಟರ್ ತೆರೆದರೂ, ಬೆಂಗಳೂರು ಒನ್ ಕೇಂದ್ರಗಳಲ್ಲೂ ಅವಕಾಶ ಮಾಡಿ ಕೊಟ್ಟರೂ ಹಲವು ದೂರುಗಳು ಬಂದಿದ್ದವು. ಹೀಗಾಗಿ ಪರ್ಯಾಯ ಮಾರ್ಗ ಹುಡುಕಲು ಬಿಬಿಎಂಪಿ ಮುಂದಾಗಿದೆ.

ಖಾಸಗಿ ಕಂಪನಿಗೆ ಇ-ಖಾತಾ ಹೊಣೆ: ಪಾಸ್​ಪೋರ್ಟ್ ಕಚೇರಿ ಮಾದರಿಯಲ್ಲಿ ತಾತ್ಕಾಲಿಕ ಆಫೀಸ್ ತೆರೆಯಲು ಬಿಬಿಎಂಪಿ ಚಿಂತನೆ
ಖಾಸಗಿ ಕಂಪನಿಗೆ ಇ-ಖಾತಾ ಹೊಣೆ: ಪಾಸ್​ಪೋರ್ಟ್ ಕಚೇರಿ ಮಾದರಿಯಲ್ಲಿ ತಾತ್ಕಾಲಿಕ ಆಫೀಸ್ ಸ್ಥಾಪನೆಗೆ ಬಿಬಿಎಂಪಿ ಚಿಂತನೆ
ಶಾಂತಮೂರ್ತಿ
| Edited By: |

Updated on: Nov 18, 2024 | 7:03 AM

Share

ಬೆಂಗಳೂರು, ನವೆಂಬರ್ 18: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಮಾಡಿಸುವ ಬಗ್ಗೆ ಸದ್ಯ ಬೆಂಗಳೂರಿನ ಜನರು ತಲೆಕೆಡಿಸಿಕೊಂಡಿದ್ದಾರೆ. ಇ-ಖಾತಾ ಮಾಡಿಸಲು ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೂಡ ಅವಕಾಶ ಕೊಡಲಾಗಿದ್ದು, 45 ರೂಪಾಯಿ ಶುಲ್ಕ ಪಾವತಿಸಿ ಇ-ಖಾತಾ ಪಡೆಯಲು ಪಾಲಿಕೆ ಅವಕಾಶ ಕೊಟ್ಟಿದೆ. ಆದರೆ, ಇದೀಗ ಇ-ಖಾತಾ ಪಡೆಯಲು ಬಂದವರಿಗೆ ಕೆಲ ಗೊಂದಲಗಳ ಜೊತೆಗೆ ಅರ್ಜಿ ಸಲ್ಲಿಸುವಾಗ ಕೆಲವು ಸಮಸ್ಯೆಗಳು ಎದುರಾಗ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇತ್ತ ಬೆಂಗಳೂರು ಒನ್ ಕೇಂದ್ರದಲ್ಲಿ ಇ-ಖಾತಾ ಪಡೆಯಲು ಅವಕಾಶ ಕೊಟ್ಟರೂ ಕೂಡ ಅರ್ಜಿ ಸಲ್ಲಿಸಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಬಿಬಿಎಂಪಿಗೆ ತಲೆನೋವು ತಂದಿಟ್ಟಿದೆ.

ದಿನಕ್ಕೆ ಕೇವಲ 30 – 40 ಇ-ಖಾತಾ ವಿತರಣೆ

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 21 ಲಕ್ಷ ಆಸ್ತಿಗಳು ನೋಂದಣಿಯಾಗಿದೆ. ಆದರೆ ಇಷ್ಟೆಲ್ಲ ಆಸ್ತಿಗೆ ಇ-ಖಾತಾ ಮಾಡಿಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಇ-ಖಾತಾ ಹೊಣೆಯನ್ನು ಖಾಸಗಿ ಕಂಪನಿಗೆ ವಹಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಸದ್ಯ ಬೆಂಗಳೂರು ಒನ್ ಸೆಂಟರ್, ಪಾಲಿಕೆಯ ಕಚೇರಿಗಳಲ್ಲಿ ಇ-ಖಾತಾ ಮಾಡಿಕೊಡಲಾಗುತ್ತಿದೆ. ಇವುಗಳಲ್ಲಿ ದಿನಕ್ಕೆ ಕೇವಲ 30 ರಿಂದ 40 ಇ-ಖಾತಾ ಮಾಡಿಕೊಡಲೂ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಖಾಸಗಿ ಕಂಪನಿಗೆ ಇಂತಿಷ್ಟು ಹಣ ಅಂತಾ ನಿಗದಿ ಮಾಡಿ ಪ್ರತಿ ವಾರ್ಡ್​ನಲ್ಲಿ ತಾತ್ಕಾಲಿಕ ಕಚೇರಿ ತೆರೆದು ಇ-ಖಾತಾ ಹಂಚಿಕೆಗೆ ಯೋಜನೆ ರೂಪಿಸಲಾಗುತ್ತಿದೆ. ಪಾಸ್​ಪೋರ್ಟ್ ಕಚೇರಿ ಮಾದರಿಯಲ್ಲಿ ಖಾಸಗಿ ಕಂಪನಿ ಮೂಲಕ ಇ-ಖಾತಾ ಹಂಚಿಕೆಗೆ ತಯಾರಿ ನಡೆಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಖಾಸಗಿ ಕಂಪನಿಗಳ ಜತೆ ಒಡಂಬಡಿಕೆಗೆ ಚಿಂತನೆ

ಈಗಾಗಲೇ ಕೆಲ ಖಾಸಗಿ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಚಿಂತನೆ ನಡೆಸಿರುವ ಪಾಲಿಕೆ, ಸೂಕ್ತ ಕಂಪನಿಯನ್ನು ಆಯ್ಕೆ ಮಾಡಲು ತಯಾರಿ ನಡೆಸುತ್ತಿದೆ. ಸದ್ಯ ಪಾಲಿಕೆಯ ಈ ಪ್ಲಾನ್ ಜಾರಿಯಾದರೆ ಪ್ರತಿ ವಾರ್ಡ್​ನಲ್ಲೂ ಬಿಬಿಎಂಪಿಯ ಸಿಬ್ಬಂದಿ ಹಾಗೂ ಖಾಸಗಿ ಕಂಪನಿ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು, ಇ-ಖಾತಾಗಳಿಗೆ ಮತ್ತಷ್ಟು ವೇಗ ಸಿಗೋ ನಿರೀಕ್ಷೆಯಿದೆ.

ಆಸ್ತಿ ತೆರಿಗೆ ವಂಚಕರ ಮೇಲೆ ನಿಗಾಕ್ಕೆ ಕ್ರಮ

ಸದ್ಯ ಬಿಬಿಎಂಪಿಯ ಎಂಟು ವಲಯಗಳಲ್ಲಿ ಇ-ಖಾತಾ ಹಂಚಿಕೆ ಮಾಡಲಾಗುತ್ತಿದೆ. ಇತ್ತ ಇ-ಖಾತಾ ಜೊತೆಗೆ ಆಸ್ತಿಗಳನ್ನ ಡಿಜೀಟಲೀಕರಣ ಮಾಡಲು ಕೂಡ ವೇಗ ನೀಡುತ್ತಿರುವ ಬಿಬಿಎಂಪಿ, ಬೆಂಗಳೂರಿನ ಆಸ್ತಿ ತೆರಿಗೆ ವಂಚಕರ ಮೇಲೂ ನಿಗಾ ಇಡಲು ಸಜ್ಜಾಗಿದೆ.

ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್

ಸದ್ಯದ ವ್ಯವಸ್ಥೆಯಲ್ಲಿ ಇ-ಖಾತಾ ಪಡೆಯಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಂಗಳೂರು ಮಂದಿಗೆ, ಪಾಲಿಕೆಯ ಈ ಹೊಸ ಯೋಜನೆಯಿಂದ ಸಹಕಾರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ