ಬೆಂಗಳೂರು, ನವೆಂಬರ್ 18: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಮಾಡಿಸುವ ಬಗ್ಗೆ ಸದ್ಯ ಬೆಂಗಳೂರಿನ ಜನರು ತಲೆಕೆಡಿಸಿಕೊಂಡಿದ್ದಾರೆ. ಇ-ಖಾತಾ ಮಾಡಿಸಲು ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೂಡ ಅವಕಾಶ ಕೊಡಲಾಗಿದ್ದು, 45 ರೂಪಾಯಿ ಶುಲ್ಕ ಪಾವತಿಸಿ ಇ-ಖಾತಾ ಪಡೆಯಲು ಪಾಲಿಕೆ ಅವಕಾಶ ಕೊಟ್ಟಿದೆ. ಆದರೆ, ಇದೀಗ ಇ-ಖಾತಾ ಪಡೆಯಲು ಬಂದವರಿಗೆ ಕೆಲ ಗೊಂದಲಗಳ ಜೊತೆಗೆ ಅರ್ಜಿ ಸಲ್ಲಿಸುವಾಗ ಕೆಲವು ಸಮಸ್ಯೆಗಳು ಎದುರಾಗ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇತ್ತ ಬೆಂಗಳೂರು ಒನ್ ಕೇಂದ್ರದಲ್ಲಿ ಇ-ಖಾತಾ ಪಡೆಯಲು ಅವಕಾಶ ಕೊಟ್ಟರೂ ಕೂಡ ಅರ್ಜಿ ಸಲ್ಲಿಸಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಬಿಬಿಎಂಪಿಗೆ ತಲೆನೋವು ತಂದಿಟ್ಟಿದೆ.
ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 21 ಲಕ್ಷ ಆಸ್ತಿಗಳು ನೋಂದಣಿಯಾಗಿದೆ. ಆದರೆ ಇಷ್ಟೆಲ್ಲ ಆಸ್ತಿಗೆ ಇ-ಖಾತಾ ಮಾಡಿಸಲು ಸಾಕಷ್ಟು ಸಮಯ ಹಿಡಿಯುವುದರಿಂದ ಇ-ಖಾತಾ ಹೊಣೆಯನ್ನು ಖಾಸಗಿ ಕಂಪನಿಗೆ ವಹಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಸದ್ಯ ಬೆಂಗಳೂರು ಒನ್ ಸೆಂಟರ್, ಪಾಲಿಕೆಯ ಕಚೇರಿಗಳಲ್ಲಿ ಇ-ಖಾತಾ ಮಾಡಿಕೊಡಲಾಗುತ್ತಿದೆ. ಇವುಗಳಲ್ಲಿ ದಿನಕ್ಕೆ ಕೇವಲ 30 ರಿಂದ 40 ಇ-ಖಾತಾ ಮಾಡಿಕೊಡಲೂ ಸಾಧ್ಯವಾಗುತ್ತಿಲ್ಲ.
ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಖಾಸಗಿ ಕಂಪನಿಗೆ ಇಂತಿಷ್ಟು ಹಣ ಅಂತಾ ನಿಗದಿ ಮಾಡಿ ಪ್ರತಿ ವಾರ್ಡ್ನಲ್ಲಿ ತಾತ್ಕಾಲಿಕ ಕಚೇರಿ ತೆರೆದು ಇ-ಖಾತಾ ಹಂಚಿಕೆಗೆ ಯೋಜನೆ ರೂಪಿಸಲಾಗುತ್ತಿದೆ. ಪಾಸ್ಪೋರ್ಟ್ ಕಚೇರಿ ಮಾದರಿಯಲ್ಲಿ ಖಾಸಗಿ ಕಂಪನಿ ಮೂಲಕ ಇ-ಖಾತಾ ಹಂಚಿಕೆಗೆ ತಯಾರಿ ನಡೆಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈಗಾಗಲೇ ಕೆಲ ಖಾಸಗಿ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಚಿಂತನೆ ನಡೆಸಿರುವ ಪಾಲಿಕೆ, ಸೂಕ್ತ ಕಂಪನಿಯನ್ನು ಆಯ್ಕೆ ಮಾಡಲು ತಯಾರಿ ನಡೆಸುತ್ತಿದೆ. ಸದ್ಯ ಪಾಲಿಕೆಯ ಈ ಪ್ಲಾನ್ ಜಾರಿಯಾದರೆ ಪ್ರತಿ ವಾರ್ಡ್ನಲ್ಲೂ ಬಿಬಿಎಂಪಿಯ ಸಿಬ್ಬಂದಿ ಹಾಗೂ ಖಾಸಗಿ ಕಂಪನಿ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು, ಇ-ಖಾತಾಗಳಿಗೆ ಮತ್ತಷ್ಟು ವೇಗ ಸಿಗೋ ನಿರೀಕ್ಷೆಯಿದೆ.
ಸದ್ಯ ಬಿಬಿಎಂಪಿಯ ಎಂಟು ವಲಯಗಳಲ್ಲಿ ಇ-ಖಾತಾ ಹಂಚಿಕೆ ಮಾಡಲಾಗುತ್ತಿದೆ. ಇತ್ತ ಇ-ಖಾತಾ ಜೊತೆಗೆ ಆಸ್ತಿಗಳನ್ನ ಡಿಜೀಟಲೀಕರಣ ಮಾಡಲು ಕೂಡ ವೇಗ ನೀಡುತ್ತಿರುವ ಬಿಬಿಎಂಪಿ, ಬೆಂಗಳೂರಿನ ಆಸ್ತಿ ತೆರಿಗೆ ವಂಚಕರ ಮೇಲೂ ನಿಗಾ ಇಡಲು ಸಜ್ಜಾಗಿದೆ.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಸುಸ್ತಾದವರಿಗೆ ಪಾಲಿಕೆ ಗುಡ್ ನ್ಯೂಸ್
ಸದ್ಯದ ವ್ಯವಸ್ಥೆಯಲ್ಲಿ ಇ-ಖಾತಾ ಪಡೆಯಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಂಗಳೂರು ಮಂದಿಗೆ, ಪಾಲಿಕೆಯ ಈ ಹೊಸ ಯೋಜನೆಯಿಂದ ಸಹಕಾರವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ