ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ತೆರಿಗೆ ಬಾಕಿ ಮೇಲಿನ ದಂಡ ಶೇ.50ರಷ್ಟು ಇಳಿಕೆ

| Updated By: ರಮೇಶ್ ಬಿ. ಜವಳಗೇರಾ

Updated on: Feb 20, 2024 | 9:46 PM

BBMP Amendment Bill 2024: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ದಾರರು ತಪ್ಪು ಮಾಹಿತಿ ನೀಡಿದವರಿಗೆ ಹಾಗೂ ತೆರಿಗೆ ಬಾಕಿ ಉಳಿಸಿಕೊಂಡಿರುವರಿಗೆ ವಿಧಿಸುವ ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ 2024 ಅಂಗೀಕರಾವಾಗಿದೆ. ಆಸ್ತಿ ತೆರಿಗೆ ಬಾಕಿದಾರರಿಗೆ ವಿಧಿಸಿರುವ ದಂಡ ಮತ್ತು ಬಡ್ಡಿ ಮನ್ನಾ ಮಾಡಲು ಈ ವಿಧೇಯಕದಲ್ಲಿ ಅವಕಾಶವಿದೆ. ಹಾಗಾದ್ರೆ, ಇದು ಯಾರಿಗೆಲ್ಲಾ ಲಾಭವಾಗಲಿದೆ?

ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕ ಅಂಗೀಕಾರ: ತೆರಿಗೆ ಬಾಕಿ ಮೇಲಿನ ದಂಡ  ಶೇ.50ರಷ್ಟು ಇಳಿಕೆ
ಬಿಬಿಎಂಪಿ
Follow us on

ಬೆಂಗಳೂರು, (ಫೆಬ್ರವರಿ.20): ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಮೇಲಿನ ದಂಡದ ಪ್ರಮಾಣ ಶೇಕಡ 50 ರಷ್ಟು ಕಡಿತ ಸೇರಿದಂತೆ ತೆರಿಗೆದಾರರ ಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 (BBMP Amendment Bill 2024)ಅನ್ನು ವಿಧಾನಸಭೆಯಲ್ಲಿ ಇಂದು(ಬುಧವಾರ) ಅಂಗೀಕರಿಸಲಾಯಿತು. ವಿಧಾನಸಭೆಯಲ್ಲಿ ಭೋಜನ ವಿರಾಮದ ನಂತರ ನಡೆದ ಕಲಾಪದಲ್ಲಿ ಬೆಂಗಳೂರು ನಗರಾಭಿವೃದ್ದಿ ಖಾತೆಯನ್ನೂ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್  (DK Shivakumar) ಅವರು ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.

ಈ ವಿಧೇಯಕದಿಂದ ಬೆಂಗಳೂರಿನ ನಾಗರಿಕರಿಗೆ ತೆರಿಗೆ ಬಾಬತ್ತು, ದಂಡ ವಿನಾಯಿತಿ ಸೇರಿ ಸುಮಾರು ರೂ. 2,700 ಕೋಟಿ ರೂಪಾಯಿಯಷ್ಟು ಅನುಕೂಲವಾಗಲಿದೆ. ಜತೆಗೆ ಪಾಲಿಕೆಗೆ ಸುಮಾರು 1,000 ಕೋಟಿ ರೂಪಾಯಿಯಷ್ಟು ಆಸ್ತಿ ತೆರಿಗೆ ಬರಲಿದೆ. ಸುಮಾರು 5.51 ಲಕ್ಷ ತೆರಿಗೆ ಬಾಕಿದಾರರು, ಸುಮಾರು 5- 7 ಲಕ್ಷ ತೆರಿಗೆ ವ್ಯಾಪ್ತಿಗೆ ಬಾರದವರು ಹಾಗೂ 3 ಲಕ್ಷದಷ್ಟು ಮಂದಿ ಭಾಗಶಃ ತೆರಿಗೆ ಪಾವತಿದಾರರಿಗೆ ಒಟ್ಟಾರೆ 13 ರಿಂದ 15 ಲಕ್ಷ ಜನರಿಗೆ ಅನುಕೂಲವಾಗಲಿದೆ.

ಈ ವಿಧೇಯಕದಲ್ಲಿ ಬಡ ಹಾಗೂ ದುರ್ಬಲ ವರ್ಗದವರಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಸರ್ಕಾರದ ವಸತಿ ಯೋಜನೆಯ ಆಸ್ತಿಗಳು ಹಾಗೂ ಕೊಳೆಗೇರಿ ಪ್ರದೇಶದ ಕಟ್ಟಡಗಳಿಗೆ ಬಡ್ಡಿ ಮೇಲಿನ ದಂಡ ಇರುವುದಿಲ್ಲ. 1 ಸಾವಿರ ಚದರ ಅಡಿ ವರೆಗಿನ ಸ್ವಯಂ ಬಳಕೆ ಆಸ್ತಿದಾರರಿಗೆ ಸಂಪೂರ್ಣ ದಂಡ ವಿನಾಯಿತಿ ನೀಡಲಾಗಿದೆ.

ವಸತಿ ಮತ್ತು ಮಿಶ್ರ ಆಸ್ತಿದಾರರ (ವಸತಿ ಮತ್ತು ವಾಣಿಜ್ಯ) ಬಾಕಿಯನ್ನು ಎಷ್ಟೇ ವರ್ಷದಿಂದ ಉಳಿಸಿಕೊಂಡಿದ್ದರೂ ಹಿಂದಿನ 5 ವರ್ಷಕ್ಕೆ ಮಾತ್ರ ಲೆಕ್ಕಾಚಾರ ಹಾಕಲು ನಿರ್ಧರಿಸಲಾಗಿದೆ. 5 ವರ್ಷಕ್ಕಿಂತ ಹಿಂದಿನ ಅವಧಿಗೆ ಬಡ್ಡಿ ಮನ್ನಾ ಮಾಡಲಾಗಿದೆ.

“ಇದೊಂದು ಜನಸ್ನೇಹಿ ತಿದ್ದುಪಡಿಯಾಗಿದ್ದು, ಸರ್ಕಾರಕ್ಕೆ ನಷ್ಟವಾದರೂ ಪರವಾಗಿಲ್ಲ, ಜನರಿಗೆ ಅನುಕೂಲವಾಗಲಿ ಎಂದು ಈ ಕಾನೂನನ್ನು ಜಾರಿಗೆ ತರಲಾಗಿದೆ” ಎಂದು ಶಿವಕುಮಾರ್ ಅವರು ಸದನದಲ್ಲಿ ತಿಳಿಸಿದರು.

ಹಿಂದಿನ ಬಿಜೆಪಿ ಸರಕಾರ ತಂದಿದ್ದ ತಿದ್ದುಪಡಿ ವಿಧೇಯಕ ಅಂಗೀಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡ ತೆರಿಗೆ ಮೇಲೆ ದುಪ್ಪಟ್ಟು ದಂಡ ಪಾವತಿಸಬೇಕಾಗಿ ಬಂದು ಬೆಂಗಳೂರು ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಕ್ಕಿದ್ದರು. ತೆರಿಗೆ ಮೊತ್ತಕ್ಕಿಂತ ದಂಡದ ಪ್ರಮಾಣವೇ ಸಿಕ್ಕಾಪಟ್ಟೆ ಹೆಚ್ಚಾಗಿತ್ತು. ಈಗ ಸರಕಾರವು ಹಿಂದಿನ ಸರಕಾರ ಅಂಗೀಕರಿಸಿದ್ದ ಕಾಯ್ದೆಗೆ ತಿದ್ದುಪಡಿ ತಂದು ನಾಗರಿಕರ ತೆರಿಗೆ ಹೊರೆ ಕಡಿಮೆ ಮಾಡಿದೆ.

ಬೊಮ್ಮಾಯಿ ಕಿಡಿ

2024ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಿದ್ದುಪಡಿ ವಿಧೇಯಕ 2020ರ ಮೇಲೆ ಮಾತನಾಡಿದ ಅವರು, ಈ ಕಾಯ್ದೆ ತಿದ್ದುಪಡಿಯಿಂದ ಈಗಿರುವ ಬಿಲ್ಡರ್’ಗಳಿಗೆ ಅಕ್ರಮ ಮಾಡಲು ಅವಕಾಶ ಕೊಟ್ಟಂತಾಗುತ್ತದೆ. ಇದು ಶ್ರೀಮಂತ ಬಿಲ್ಡರ್ ಪರವಾಗಿದೆ. ಇದರಲ್ಲಿ ಬಹಳ ದೊಡ್ಡ ಅವ್ಯವಹಾರ ನಡೆಯುತ್ತದೆ. ಇದನ್ನು ನಾವು ವಿರೋಧ ಮಾಡುತ್ತೇವೆ. ಇದನ್ನು ಉಪ ಮುಖ್ಯಮಂತ್ರಿ ಪುನರ್ ಪರಿಶೀಲನೆ ಮಾಡಬೇಕು. ಇದರಿಂದ ರೈತರಿಗೂ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕಿಡಿಕಾರಿದರು.