ಬಿಬಿಎಂಪಿಯಿಂದ ಗುಡ್ ನ್ಯೂಸ್: ಶೇ 5ರ ಆಸ್ತಿ ತೆರಿಗೆ ರಿಯಾಯಿತಿ ಜುಲೈ ವರೆಗೆ ವಿಸ್ತರಣೆ
BBMP Property Tax: ಆಸ್ತಿ ತೆರಿಗೆ ಪಾವತಿಸುವವರಿಗೆ ಬಿಬಿಎಂಪಿ ಶುಭ ಸುದ್ದಿ ನೀಡಿದೆ. ಸಾಮಾನ್ಯವಾಗಿ ಹಣಕಾಸು ವರ್ಷದ ಮೊದಲ 2 ತಿಂಗಳು ನೀಡಲಾಗುವ ಶೇ 5ರ ರಿಯಾಯಿತಿಯನ್ನು ಜುಲೈ ಅಂತ್ಯದ ವರೆಗೆ ವಿಸ್ತರಣೆ ಮಾಡಿದೆ. ಬಿಬಿಎಂಪಿಯ ಈ ನಿರ್ಧಾರದಿಂದ ಅನೇಕ ತೆರಿಗೆ ಪಾವತಿದಾರರಿಗೆ ಪ್ರಯೋಜನವಾಗಲಿದೆ.
ಬೆಂಗಳೂರು, ಮಾರ್ಚ್ 15: ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಸಾಮಾನ್ಯವಾಗಿ ಎರಡು ತಿಂಗಳ ಅವಧಿಗೆ ಆಸ್ತಿ ತೆರಿಗೆ (Property Tax) ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿಯನ್ನು ಬಿಬಿಎಂಪಿ (BBMP) ನೀಡುತ್ತಾ ಬಂದಿದೆ. ಆದರೆ, ಈ ವರ್ಷ ಶೇ 5ರ ರಿಯಾಯಿತಿ ಜುಲೈ ಅಂತ್ಯದ ವರೆಗೆ ಜಾರಿಯಲ್ಲಿರಲಿದೆ. ಈ ಸಂಬಂಧ ಬಿಬಿಎಂಪಿ ಗುರುವಾರ ಸುತ್ತೋಲೆ ಹೊರಡಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ. ರಿಯಾಯಿತಿಯು 2024 ರ ಜುಲೈ 31ರ ವರೆಗೆ ಇರುತ್ತದೆ ಎಂದಿದೆ.
ಬಿಬಿಎಂಪಿ ಕಾಯ್ದೆಯ 2020 ರ ಸೆಕ್ಷನ್ 144 (8) ರ ಅಡಿಯಲ್ಲಿ, ಹಣಕಾಸಿನ ವರ್ಷದ ಆರಂಭದಲ್ಲಿ ತೆರಿಗೆ ಪಾವತಿ ಮಾಡುವ ಆಸ್ತಿ ಮಾಲೀಕರಿಗೆ ಸಂಸ್ಥೆಯು ಶೇ 5ರ ರಿಯಾಯಿತಿಯನ್ನು ನೀಡಲು ಅವಕಾಶವಿದೆ.
ರಾಜ್ಯ ಸರ್ಕಾರವು ಕಳೆದ ತಿಂಗಳು ಹೊಸ ಆಸ್ತಿ ತೆರಿಗೆ ವ್ಯವಸ್ಥೆಯ ಬಗ್ಗೆ ಇನ್ನಷ್ಟೇ ಅಧಿಕೃತ ಅಧಿಸೂಚನೆ ಬರಬೇಕಿದೆ. ಹೀಗಾಗಿ ಸ್ವಯಂ-ಮೌಲ್ಯಮಾಪನ ಯೋಜನೆಯ ಮೂಲಕ ಆಸ್ತಿ ತೆರಿಗೆ ಲೆಕ್ಕಾಚಾರವನ್ನು ಮುಂದುವರಿಸಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ವಾರ್ಷಿಕ ತೆರಿಗೆಯಲ್ಲಿ ಗಣನೀಯ ಹೆಚ್ಚಳದ ಬಗ್ಗೆ ನಿವಾಸಿಗಳು, ರಾಜಕೀಯ ಪಕ್ಷಗಳು ಮತ್ತು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ ನಂತರ ಹೊಸ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ತಡೆಹಿಡಿದಿದೆ.
ಮಾಲೀಕರು ಖಾತಾ ಪ್ರಮಾಣಪತ್ರವನ್ನು ಪಡೆಯುವ ಮೊದಲು ಆಸ್ತಿ ತೆರಿಗೆಯನ್ನು ಪಾವತಿಸಬಹುದಾದ ಹೊಸ ಯೋಜನೆಯನ್ನು ಈ ವಾರದ ಆರಂಭದಲ್ಲಿ ಬಿಬಿಎಂಪಿ ಪ್ರಾರಂಭಿಸಿದೆ. ಈ ಯೋಜನೆಯು ಅಧಿಕೃತವಾಗಿ ಮಾರ್ಚ್ 20 ರಂದು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024-25ನೇ ಸಾಲಿಗೆ 3,800 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ.
ಇದನ್ನೂ ಓದಿ: ಮನೆ ಕಟ್ಟುವವರಿಗೆ ‘ನಂಬಿಕೆ ರಕ್ಷೆ’ ವಿತರಣೆ: ಬಿಬಿಎಂಪಿ ಹೊಸ ಆಸ್ತಿ ತೆರಿಗೆ ಪದ್ಧತಿ ಜಾರಿ
ಸ್ವಂತ ಮನೆಗಳನ್ನು ಕಟ್ಟುವವರಿಗೆ ಅನುಕೂಲವಾಗಲು ನಂಬಿಕೆ ರಕ್ಷೆ ಯೋಜನೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೆಲವು ದಿನಗಳ ಹಿಂದೆ ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು. ಇದೇ ವೇಳೆ ಹೊಸ ತೆರಿಗೆ ಪದ್ಧತಿ ಬಗ್ಗೆ ಅವರು ಘೋಷಣೆ ಮಾಡಿದ್ದರು. 2008ರಲ್ಲಿ ಜಾರಿ ಮಾಡಲಾಗಿದ್ದ ಆಸ್ತಿ ತೆರಿಗೆ ಪದ್ಧತಿಯಲ್ಲಿ ಆಸ್ತಿಗಳನ್ನು ಒಟ್ಟು 18 ವರ್ಗೀಕರಣ ಮಾಡಲಾಗಿತ್ತು. ಇದರಿಂದ ತೆರಿಗೆ ಪಾವತಿಯಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಇದೀಗ ತೆರಿಗೆ ಪದ್ಧತಿಯನ್ನು ಸರಳೀಕರಣ ಮಾಡಲಾಗಿದ್ದು, 6 ವರ್ಗೀಕರಣಗಳನ್ನು ಮಾಡಲಾಗಿದೆ. ವಸತಿ (ಸ್ವಂತ ಬಳಕೆ ಹಾಗೂ ಬಾಡಿಗೆದಾರರ ಬಳಕೆ), ವಾಣಿಜ್ಯ, ಕೈಗಾರಿಕಾ, ಸ್ಟಾರ್ ಹೊಟೇಲ್, ವಿನಾಯಿತಿ ನೀಡಲಾದ ಹಾಗೂ ಸಂಪೂರ್ಣ ಖಾಲಿ ಜಮೀನುಗಳು ಎಂದು ವರ್ಗೀಕರಣ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ