ಸುಪ್ರೀಂ ಆದೇಶ ಬೆನ್ನಲ್ಲೆ ಫೀಲ್ಡ್ಗಿಳಿದ ಬಿಬಿಎಂಪಿ; ಬೀದಿನಾಯಿಗಳಿಗೆ ಆಹಾರ ನೀಡೋಕೆ ಜಾಗ ಗುರ್ತಿಸಲು ಮುಂದಾದ ಪಾಲಿಕೆ
ಇಷ್ಟು ದಿನ ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಹಾಕುವುದರಲ್ಲೇ ವಿಫಲವಾಗಿ ಬೆಂಗಳೂರು ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಬಿಬಿಎಂಪಿ, ಇದೀಗ ಬೀದಿನಾಯಿಗಳಿಗೆ ಆಹಾರ ನೀಡುವುದಕ್ಕೆ ಜಾಗಗಳನ್ನು ಗುರುತಿಸುವುದಕ್ಕೆ ಮುಂದಾಗಿದೆ. ಆ ಮೂಲಕ ಸುಪ್ರೀಂ ಕೋರ್ಟ್‌ನ ಆದೇಶದಂತೆ ಬೀದಿ ನಾಯಿಗಳಿಗೆ ಆಹಾರ ನೀಡಲು ಜಾಗ ಗುರುತಿಸುವ ಟಾಸ್ಕ್ ಸಿಬ್ಬಂದಿಗೆ ನೀಡಿದೆ.

ಬೆಂಗಳೂರು, ಆಗಸ್ಟ್ 28: ಇತ್ತೀಚೆಗಷ್ಟೇ ಬೀದಿನಾಯಿಗಳಿಗೆ (Stray Dogs) ಎಲ್ಲೆಂದರಲ್ಲಿ ಊಟ ಹಾಕಬಾರದು ಅಂತಾ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಇತ್ತ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದಕ್ಕೆ ನಿಷೇಧ ಹೇರಿದ್ದ ಕೋರ್ಟ್, ಬೀದಿನಾಯಿಗಳಿಗೆ ಆಹಾರ ಹಾಕುವುದಕ್ಕೆ ಪ್ರತ್ಯೇಕ ಸ್ಥಳಗಳನ್ನ ಗುರುತಿಸುವುದಕ್ಕೆ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿತ್ತು. ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೆ ಬಿಬಿಎಂಪಿ (BBMP) ಕೂಡ ತನ್ನ ಸಿಬ್ಬಂದಿಗೆ ಜಾಗ ಗುರುತಿಸುವ ಟಾಸ್ಕ್ ಕೊಟ್ಟಿದೆ.
ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತಿದ್ದು, ರಾಜಧಾನಿಯಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವುದಕ್ಕೆ ಜಾಗ ಗುರುತಿಸಲು ಸಿಬ್ಬಂದಿಗೆ ಟಾಸ್ಕ್ ನೀಡಿದೆ. ಇನ್ನು 15 ರಿಂದ 20 ದಿನದೊಳಗೆ ಜಾಗ ಗುರುತಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಬೀದಿ ನಾಯಿಗಳಿಗೆ ಟ್ರೈನಿಂಗ್ ಕೊಡಿಸಲಿದೆ ಬಿಬಿಎಂಪಿ! ಡಾಗ್ ಟ್ರೈನರ್ಗಳ ಮೂಲಕ ತರಬೇತಿಗೆ ಚಿಂತನೆ
ಇನ್ನು ರಾಜಧಾನಿಯಲ್ಲಿ ಈಗಾಗಲೇ ಕೆಲ ಏರಿಯಾಗಳಲ್ಲಿ ಬೌಬೌ ಗ್ಯಾಂಗ್ ಕಾಟಕ್ಕೆ ಸಿಟಿ ಮಂದಿ ಸುಸ್ತಾಗಿ ಹೋಗಿದ್ದಾರೆ. ಇತ್ತ ಎಲ್ಲೆಂದರಲ್ಲಿ ಜನರು ಆಹಾರ ಹಾಕ್ತಿರೋದರಿಂದ ಬೀದಿನಾಯಿಗಳ ಸಂಖ್ಯೆ ಕೂಡ ಏರಿಕೆಯಾಗ್ತಿರೋದಕ್ಕೆ ಜನರು ಕಂಗಾಲಾಗಿದ್ದಾರೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಬೀದಿನಾಯಿಗಳ ಕಾಟ ಮಿತಿಮೀರುತ್ತಿದೆ. ಸುಪ್ರೀಂಕೋರ್ಟ್ ಆದೇಶವನ್ನ ಪಾಲಿಕೆ ಕಟ್ಟುನಿಟ್ಟಾಗಿ ಜಾರಿಗೆ ತರಲಿ ಎಂದು ಯೋಗೇಶ್ ಎಂಬುವವರು ಹೇಳಿದ್ದಾರೆ.
ಸದ್ಯ ಕೆಲ ತಿಂಗಳ ಹಿಂದಷ್ಟೇ ನಾಯಿಗಳಿಗೆ ಊಟ ನೀಡುವ ಯೋಜನೆ ಆರಂಭಿಸಿದ್ದ ಪಾಲಿಕೆ, ಆಯಾ ವಾರ್ಡ್ ಗಳಲ್ಲಿ ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ಉಳಿದ ಆಹಾರವನ್ನ ಬೀದಿನಾಯಿಗಳಿಗೆ ಹಾಕುವ ಕೆಲಸಕ್ಕೆ ಮುಂದಾಗಿತ್ತು. ಆದರೆ ಇದೀಗ ಬೀದಿನಾಯಿಗಳಿಗೆ ಆಯಾ ಏರಿಯಾದಲ್ಲಿ ಊಟ ಹಾಕಲು ಪ್ರತ್ಯೇಕ ಜಾಗ ಗುರುತಿಸುವುದು ಪಾಲಿಕೆಗೆ ದೊಡ್ಡ ಟಾಸ್ಕ್ ಆಗಿದೆ.
ಬಿಬಿಎಂಪಿ 2023ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಸುಮಾರು 2.7 ಲಕ್ಷದಿಂದ 2.8 ಲಕ್ಷ ದವರೆಗೆ ಇದೆ. ಇದೀಗ ಪ್ರತಿ ಏರಿಯಾದಲ್ಲೂ ಪ್ರತ್ಯೇಕ ಜಾಗ ಗುರುತಿ ಆಹಾರ ನೀಡುವ ಕೆಲಸ ಪಾಲಿಕೆಗೆ ಸವಾಲು ತಂದೊಡ್ಡಿದೆ.
ಯಾವ ವಲಯದಲ್ಲಿ ಎಷ್ಟು ನಾಯಿ ಇದೆ?
- ಬೊಮ್ಮನಹಳ್ಳಿ: 39,183
- ಆರ್‌ಆರ್ ನಗರ: 41,266
- ಮಹದೇವಪುರ: 58,371
- ಯಲಹಂಕ: 36,343
- ಬಿಬಿಎಂಪಿ ಪೂರ್ವ: 37,685
- ಬಿಬಿಎಂಪಿ ಪಶ್ಚಿಮ: 22,025
ಇದನ್ನೂ ಓದಿ: ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ: ತಕ್ಷಣದ ಕ್ರಮಕ್ಕೆ ವಿಪಕ್ಷಗಳ ಒತ್ತಾಯ
ಸದ್ಯ ಬೆಂಗಳೂರಿನಲ್ಲಿ ಪದೇ ಪದೇ ಬೀದಿನಾಯಿಗಳ ದಾಳಿ, ರೇಬಿಸ್ ಪ್ರಕರಣಗಳು ಏರಿಕೆಯಾಗುತ್ತಿವೆ. ಇತ್ತ ನಾಯಿಗಳ ಸಂಖ್ಯೆ ಕೂಡ ಏರಿಕೆಯಾಗಿದ್ದು, ಇದೀಗ ರಾಜಧಾನಿಯ ಪ್ರತಿ ಏರಿಯಾದಲ್ಲೂ ಸಾರ್ವಜನಿಕ ಸ್ಥಳಗಳನ್ನ ಹೊರತುಪಡಿಸಿ ಯಾರೂ ಓಡಾಡದ ಜಾಗಗಳಲ್ಲಿ ಊಟ ನೀಡುವ ಕೆಲಸ ಮಾಡುವುದಕ್ಕೆ ಪಾಲಿಕೆ ಸಜ್ಜಾಗಿದೆ. ಇಷ್ಟು ದಿನ ಬೌಬೌ ಕಾಟಕ್ಕೆ ಬ್ರೇಕ್ ಹಾಕೋದರಲ್ಲೇ ವಿಫಲವಾಗಿ ಸಿಟಿಜನರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಲಿಕೆ, ಇದೀಗ ಬೀದಿನಾಯಿಗಳಿಗೆ ಆಹಾರ ನೀಡುವುದಕ್ಕೆ ಎಷ್ಟರಮಟ್ಟಿಗೆ ಜಾಗಗಳನ್ನ ಗುರ್ತಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







