ಕನ್ನಡ ನಾಮಫಲಕ ಹಾಕದವರಿಗೆ ಬಿಸಿ ಮುಟ್ಟಿಸಿದ ಬಿಬಿಎಂಪಿ: ನೋಟಿಸ್ ನೀಡಿ ಲೈಸೆನ್ಸ್ ರದ್ದು
ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಅಂತ ನೀಡಿದ್ದ 2 ತಿಂಗಳ ಗಡುವು ಮುಗಿದು ಹೋಗಿದೆ. ಆದರೆ ಕನ್ನಡ ನಾಮಫಲಕ ಹಾಕದವರಿಗೆ ಬಿಬಿಎಂಪಿ ಶಾಕ್ ನೀಡಿದೆ. ನೋಟಿಸ್ ನೀಡಿ ಇಂದು ಟ್ರೇಡ್ ಲೈಸೆನ್ಸ್ ರದ್ದು ಮಾಡಿದೆ. ಕಾಲಾವಕಾಶ ನೀಡಿದರೂ ಕ್ಯಾರೆ ಎನ್ನದ ಅಂಗಡಿ ಮಾಲೀಕರಿಗೆ ಪಾಲಿಕೆ ಬಿಸಿ ಮುಟ್ಟಿಸಿದೆ.

ಬೆಂಗಳೂರು, ಮಾರ್ಚ್ 14: ಕನ್ನಡ ನಾಮಫಲಕ (Kannada nameplate) ಹಾಕದವರ ಟ್ರೇಡ್ ಲೈಸೆನ್ಸ್ ರದ್ದು ಮಾಡುವ ಮೂಲಕ ಕನ್ನಡ ನಾಮಫಲಕ ಹಾಕದವರಿಗೆ ಬಿಬಿಎಂಪಿ ಶಾಕ್ ನೀಡಿದೆ. ನೋಟಿಸ್ ನೀಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಟ್ರೇಡ್ ಲೈಸೆನ್ಸ್ ರದ್ದು ಮಾಡಿದೆ. ಮಾಲ್ ಆಫ್ ಏಷ್ಯಾದ ಕೆಲವು ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಕಾಲಾವಕಾಶ ನೀಡಿದರೂ ಉದ್ದಿಮೆದಾರರು ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಪಾಲಿಕೆ ಬಿಸಿ ಮುಟ್ಟಿಸಿದೆ.
ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಇರಬೇಕು ಅಂತ ನೀಡಿದ್ದ 2 ತಿಂಗಳ ಗಡುವು ಮುಗಿದು ಹೋಗಿದೆ. ಶೇ.60ರಷ್ಟು ಕನ್ನಡರಷ್ಟು ಕನ್ನಡವಿರದ ನಾಮಫಲಕಗಳನ್ನ ಹಾಕಿದವರ ವಿರುದ್ಧ ಇತ್ತೀಚೆಗೆ ರಾಜ್ಯಾದ್ಯಂತ ಎಲ್ಲ ನಗರಗಳಲ್ಲೂ ಕ್ರಮಕೈಗೊಳ್ಳಬೇಕಿತ್ತು. ಇದಕ್ಕಾಗಿ ಬೆಂಗಳೂರು ಸೇರಿ ಎಲ್ಲ ನಗರಗಳಲ್ಲೂ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಅಲ್ಲದೇ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಲು ಸಿದ್ಧತೆ ನಡೆಸಿದ್ದವು. ಆದರೆ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಮತ್ತೆ 2 ವಾರಗಳ ಗಡುವು ನೀಡಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಕೊನೆಗೂ ಕನ್ನಡ ನಾಮಫಲಕ ಅಳವಡಿಕೆಗೆ ಸೈ ಎಂದ ಬೆಂಗಳೂರಿನ ಅಂಗಡಿ, ವಾಣಿಜ್ಯ ಮಳಿಗೆಗಳು
ಈ ಬಗ್ಗೆ ಕನ್ನಡ ಚಳವಳಿ ವಾಟಾಳ್ ನಾಗರಾಜ್ ಅನ್ಯ ಭಾಷೆಯ ನಾಮಫಲಕಗಳನ್ನ ಕಿತ್ತು ಹಾಕುವುದಾಗಿ ಗುಡುಗಿದರೆ, ಕರವೇ ಅಧ್ಯಕ್ಷ ನಾರಾಯಣಗೌಡರು ಮಾರ್ಚ್ 5ರಂದು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದರು. ಕನ್ನಡ ನಾಮಫಲಕ ಹಾಕದ ಅಂಗಡಿ-ಮುಂಗಟ್ಟುಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದರು.
ಕನ್ನಡ ನಾಮಫಲಕ ಇಲ್ಲದಿದ್ರೆ ಲೈಸನ್ಸ್ ರದ್ದು
ಕನ್ನಡ ನಾಮಫಲಕ ಅಳವಡಿಸದವರಿಗೆ ಬಿಬಿಎಂಪಿ ಈ ಹಿಂದೆ ಶಾಕ್ ನೀಡಿತ್ತು. ಶೇ. 60ರಷ್ಟು ಕನ್ನಡ ನಾಮಫಲಕ ಅಳವಡಿಸದಿದ್ದರೆ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿತ್ತು. ಈ ಸಂಬಂಧ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ವಿಕಾಸ್ ಕಿಶೋರ್ ಆದೇಶ ಹೊರಡಿಸಿದ್ದರು. ಅಂಗಡಿ ಲೈಸೆನ್ಸ್ ರದ್ದು ಮಾಡಿ ಬೀಗ ಹಾಕುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿತ್ತು.
ಇದನ್ನೂ ಓದಿ: ಫೆ. 28ರೊಳಗೆ ಎಲ್ಲಾ ನಾಮಫಲಕ ಕನ್ನಡದಲ್ಲಿರಬೇಕು, ಇಲ್ಲದಿದ್ರೆ ಕ್ರಮ: ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ
ಶೇ.60ರಷ್ಟು ಕನ್ನಡ ಬರಹವುಳ್ಳ ನಾಮಫಲಕ ಅಳವಡಿಸದ ಅಂಗಡಿ, ಮಳಿಗೆಗಳಿಗೆ ಬೆಳಗಾವಿ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಖಡೇಬಜಾರ್, ರವಿವಾರಪೇಟೆಯಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಪಾಲಿಕೆ ನೋಟಿಸ್ ನೀಡಿದೆ. ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಪಾಲಿಕೆ ಸಿಬ್ಬಂದಿ ಸೂಚಿಸಿದ್ದಾರೆ.
ವರದಿ: ಶಾಂತಮೂರ್ತಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.