ಖಾತಾ ಅಭಿಯಾನದ ಜತೆಗೆ ಬೆಂಗಳೂರು ಆಸ್ತಿ ಮಾಲೀಕರಿಗೆ ಶಾಕ್ ನೀಡಲು ಮುಂದಾದ ಬಿಬಿಎಂಪಿ
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಇ-ಖಾತಾ ಮಾಡಿಸಲು ಸೂಚಿಸಿದ್ದ ಬಿಬಿಎಂಪಿ, ಇದೀಗ ಇದುವರೆಗೂ ಖಾತಾ ಮಾಡಿಸದ ಮಾಲೀಕರಿಗೆ ಶಾಕ್ ನೀಡಲು ಮುಂದಾಗಿದೆ. ಈ ಹಿಂದೆ ಹಲವು ಬಾರೀ ಖಾತಾ ಮಾಡಿಸಲು ಅವಕಾಶ ನೀಡಿದ್ದರೂ ಮಾಡಿಸದ ಆಸ್ತಿ ಮಾಲೀಕರಿಗೆ ಇದೀಗ ಕೊನೆಬಾರಿಗೆ ಅವಕಾಶ ಕೊಡಲು ಹೊರಟಿರುವ ಪಾಲಿಕೆ, ಅದರ ಜತೆಗೆ ಆಸ್ತಿ ಮಾಲೀಕರಿಗೆ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಬೆಂಗಳೂರು, ಫೆಬ್ರವರಿ 20: ಬೆಂಗಳೂರಿನ ಆಸ್ತಿ ಮಾಲೀಕರು ಇ-ಖಾತಾ ಮಾಡಿಸುವುದು ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಅದಾದ ಬಳಿಕ ಬಿಬಿಎಂಪಿಯ ಕಚೇರಿಗಳು, ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ ಖಾತಾ ಮಾಡಿಸಲು ಅವಕಾಶ ಕೂಡ ನೀಡಲಾಗಿತ್ತು. ಎಷ್ಟೇ ಬಾರಿ ಅವಕಾಶ ನೀಡಿದರೂ ಆಸ್ತಿಗಳಿಗೆ ಇ ಖಾತಾ ಮಾಡಿಸದ ಮಾಲೀಕರಿಗೆ ಬಿಸಿ ಮುಟ್ಟಿಸಲು ಇದೀಗ ಬಿಬಿಎಂಪಿ ಹೊಸ ಪ್ಲಾನ್ಗೆ ಸಿದ್ಧವಾಗಿದೆ. ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ 45 ದಿನಗಳ ವಿಶೇಷ ಅಭಿಯಾನ ನಡೆಸಲು ಸಜ್ಜಾಗಿರುವ ಪಾಲಿಕೆ, ಆ ಮೂಲಕ ಎಲ್ಲಾ ಆಸ್ತಿಗಳಿಗೂ ಇ ಖಾತಾ ನೀಡಲು ತಯಾರಿ ನಡೆಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 1 ಲಕ್ಷ ಖಾತಾ ಮಾಡಿಸುವ ಗುರಿ ಇಟ್ಟುಕೊಂಡಿರುವ ಬಿಬಿಎಂಪಿ, ಸ್ಪೆಷಲ್ ಡ್ರೈವ್ ಬಳಿಕ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಪ್ಲಾನ್ ರೂಪಿಸಿದೆ.
ಖಾತಾ ಮಾಡಿದ ಬಳಿಕ ತೆರಿಗೆ ವಸೂಲಿ: ಪಾವತಿಸಿದರಷ್ಟೇ ಖಾತಾ ಡೌನ್ಲೋಡ್ಗೆ ಅವಕಾಶ
ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಖಾತಾ ಮಾಡಿದ ಬಳಿಕ ಆಯಾ ಆಸ್ತಿಗಳ ಮಾಲೀಕರ ಬಳಿ ಆಸ್ತಿ ತೆರಿಗೆ ವಸೂಲಿಗೆ ಸಜ್ಜಾಗಿರುವ ಬಿಬಿಎಂಪಿ, ಆಸ್ತಿ ತೆರಿಗೆ ಪಾವತಿಸಿದರಷ್ಟೇ ಖಾತಾ ಡೌನ್ ಲೋಡ್ಗೆ ಅವಕಾಶ ನೀಡುವ ವ್ಯವಸ್ಥೆ ಜಾರಿಗೊಳಿಸಲು ಚಿಂತನೆ ನಡೆಸಿದೆ. ಸದ್ಯ 1 ಲಕ್ಷ ಖಾತಾ ಮಾಡಿಸುವ ಗುರಿ ಹೊಂದಿರುವ ಪಾಲಿಕೆ, ಈ ಖಾತಾಗಳಿಂದ ಬರೋಬ್ಬರಿ 100 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಸುರಂಗ ಮಾರ್ಗ, ಮೇಲ್ಸೇತುವೆ ಬೇಕಿಲ್ಲ ಎಂದ ನಾಗರಿಕರ ವೇದಿಕೆ: ಹೀಗೆನ್ನಲು ಇದೆ ಕಾರಣ!
ಸದ್ಯ ಈಗಾಗಲೇ ಇ-ಖಾತಾ ಕಡ್ಡಾಯದ ಬಳಿಕ ಹಲವು ಗೊಂದಲಗಳಿಂದ ಸುಸ್ತಾಗಿದ್ದ ಆಸ್ತಿ ಮಾಲೀಕರಿಗೆ ಇದೀಗ ಪಾಲಿಕೆಯೇ ಖಾತಾ ವಿತರಿಸಲು ಸಜ್ಜಾಗಿರುವುದು ಸಮಾಧಾನ ತಂದಿದ್ದರೆ, ಮತ್ತೊಂದೆಡೆ ಇಷ್ಟು ದಿನ ಆಸ್ತಿ ತೆರಿಗೆ ಕಟ್ಟದೇ, ಖಾತಾ ಮಾಡಿಸದೇ ಕಳ್ಳಾಟ ಆಡುತ್ತಿದ್ದ ಆಸ್ತಿ ಮಾಲೀಕರಿಗೆ ಪಾಲಿಕೆಯ ಈ ಉಪಾಯ ಬಿಸಿತುಪ್ಪವಾಗಿ ಪರಿಣಮಿಸುವ ಭೀತಿ ಎದುರಾಗಿದೆ.