ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಭರ್ಜರಿ ಮೊತ್ತದ ಕೊಡುಗೆ ಘೋಷಿಸಿದ ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರಿನ ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಡಿಸಿಎಂ ಡಿಕೆ ಶಿವಕುಮಾರ್ 5 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಹೊಸ ನಿರ್ಮಾಣಗಳಿಗೆ ಅವಕಾಶವಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು. ಉದ್ಯಾನದ ಹಸಿರನ್ನು ಹೆಚ್ಚಿಸಿ, ಇತರ ಪ್ರದೇಶಗಳಲ್ಲಿಯೂ ಟ್ರೀ ಪಾರ್ಕ್‌ಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದು, ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 27: ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ನಲ್ಲಿ (Cubbon Park) ಹಸಿರುವ ಹೆಚ್ಚಿಸುವುದು ಮತ್ತು ಒಟ್ಟಾರೆ ಪುನಶ್ಚೇತನಕ್ಕೆ 5 ಕೋಟಿ ರೂ. ಅನುದಾನ ನೀಡುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಾಗ್ದಾನ ನೀಡಿದ್ದಾರೆ. ಭಾನುವಾರ ಕಬ್ಬನ್ ಪಾರ್ಕ್ಗೆ ತೆರಳಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು, ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಅನ್ನು ‘ಬೆಂಗಳೂರಿನ ಅವಳಿ ಶ್ವಾಸಕೋಶಗಳು’ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ನೀಡಲಾಗುವುದು ಎಂದಿದ್ದಾರೆ.
ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಯಾವುದೇ ಹೊಸ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಡಿಕೆಶಿ ಭರವಸೆ ನೀಡಿದ್ದಾರೆ. ಕಬ್ಬನ್ ಪಾರ್ಕ್ ಬಗ್ಗೆ ಜನರು ಹೆಚ್ಚಿನ ಕಾಳಜಿ ವಹಿಸಬೇಕು. ಅಧಿಕಾರಿಗಳು ಈ ಸ್ಥಳವನ್ನು ಸಂರಕ್ಷಿಸಲು ಬಿಡಿಎ ಮತ್ತು ತೋಟಗಾರಿಕೆ ಇಲಾಖೆ ಹಣವನ್ನು ಒದಗಿಸಲು ಸಿದ್ಧವಾಗಿದೆ ಎಂದು ಶಿವಕುಮಾರ್ ಹೇಳಿದ್ದರೆ.
ಉದ್ಯಾನವನದ ನೈಸರ್ಗಿಕ ಮೋಡಿಗೆ ಧಕ್ಕೆಯಾಗದಂತೆ ಅಭಿವೃದ್ಧಿ ಮಾಡಲಾಗುವುದು. ಕಬ್ಬನ್ ಪಾರ್ಕ್ ಅನ್ನು ಸಮುದಾಯ ಸ್ಥಳವನ್ನಾಗಿ ಮಾಡುವ ಆಶಯದೊಂದಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಓಪನ್ ಗ್ರೌಂಡ್ ಕಾರ್ಯಕ್ರಮಗಳನ್ನು ಪರಿಚಯಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ. ಇದೇ ವೇಳೆ, ವಿದ್ಯಾರ್ಥಿ ನಾಯಕನಾಗಿ ಉದ್ಯಾನವನಕ್ಕೆ ಹೋಗುತ್ತಿದ್ದುದನ್ನು ಮತ್ತು ಮದುವೆಯಾದ ಆರಂಭದಲ್ಲಿ ಪತ್ನಿಯನ್ನು ಕರೆದುಕೊಂಡು ಬಂದಿದ್ದನ್ನೂ ಅವರು ಮೆಲುಕು ಹಾಕಿದ್ದಾರೆ.
ಕಬ್ಬನ್ ಪಾರ್ಕ್ ಮಾತ್ರವಲ್ಲದೆ, ಬೆಂಗಳೂರಿನ ಹಸಿರು ಪ್ರದೇಶಗಳನ್ನು ವಿಸ್ತರಣೆ ಮಾಡಲು ನಗರದ ಇತರ ಭಾಗಗಳಲ್ಲಿ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್ ಮಾದರಿಯಲ್ಲಿ ಟ್ರೀ ಪಾರ್ಕ್‌ಗಳನ್ನು ರಚಿಸುವ ದೂರದೃಷ್ಟಿಯ ಯೋಜನೆಯ ಬಗ್ಗೆ ಶಿವಕುಮಾರ್ ವಿವರಣೆ ನೀಡಿದ್ದಾರೆ. ಈ ಯೋಜನೆಗಳಿಗಾಗಿ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಕರ್ನಾಟಕ ಹೈಕೋರ್ಟ್ ಸ್ಥಳಾಂತರ ಬಗ್ಗೆ ಡಿಕೆಶಿ ಹೇಳಿದ್ದೇನು?
ಕಬ್ಬನ್ ಪಾರ್ಕ್ ಆವರಣದಲ್ಲಿರುವ ಕರ್ನಾಟಕ ಹೈಕೋರ್ಟ್ ಸ್ಥಳಾಂತರಿಸುವ ಬಗ್ಗೆ ದೀರ್ಘಕಾಲದ ಚರ್ಚೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಕಟ್ಟಡವನ್ನು ನಗರದ ರೇಸ್ ಕೋರ್ಸ್ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂಬ ಸಲಹೆಗಳಿವೆ. ಆದಾಗ್ಯೂ, ಸ್ಥಳಾಂತರಕ್ಕೆ ಕಾನೂನು ಮತ್ತು ಇತರ ಅಡಚಣೆಗಳಿವೆ ಎಂದು ಅವರು ತಿಳಿಸಿದ್ದಾರೆ. ಹೈಕೋರ್ಟ್ ಒಂದು ಐತಿಹಾಸಿಕ ರಚನೆಯಾಗಿದ್ದು, ಸ್ಥಳಾವಕಾಶ ನಿಜಕ್ಕೂ ಇಕ್ಕಟ್ಟಿನಿಂದ ಕೂಡಿದೆ. ಆದರೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನ್ಯಾಯಾಂಗದೊಂದಿಗೆ ಸಮಾಲೋಚಿಸುವುದಾಗಿ ಅವರು ಹೇಳಿದ್ದಾರೆ.
ಸುರಕ್ಷತೆ ಮತ್ತು ರಿಯಲ್ ಟೈಂ ಮಾನಿಟರಿಂಗ್ಗಾಗಿ ಕಬ್ಬನ್ ಪಾರ್ಕ್‌ನಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆಯೂ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆಗಾಗಿ ಆಯುಕ್ತರ ಕಚೇರಿಗೆ ಲಿಂಕ್ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರ ಜಿಲ್ಲೆ ಜನತೆಗೆ ಗುಡ್ ನ್ಯೂಸ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಅತಿಕ್ರಮಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಕಬ್ಬನ್ ಪಾರ್ಕ್ ವ್ಯಾಪ್ತಿ 330 ಎಕರೆಯಿಂದ 196 ಎಕರೆಗೆ ಕಡಿಮೆಯಾಗಿದೆ ಎಂದು ಅವರು ಹೇಳಿದ್ದು, ಉದ್ಯಾನದ ಗಾತ್ರ ಕುಗ್ಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.




