‘ಮಕ್ಕಳಿಗೆ ಒಳ್ಳೆಯ ಪೋಷಕರಾಗಿ’: ವಿವಾಹ ವಿಚ್ಚೇದನದ ಆದೇಶದ ಜೊತೆ ಹೈಕೋರ್ಟ್​​ ಕಿವಿಮಾತು

ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್, ಪತ್ನಿಗೆ 50 ಲಕ್ಷ ರೂ. ಜೀವನಾಂಶ ನಿಗದಿಪಡಿಸಿದ್ದು, 'ಮಕ್ಕಳಿಗೆ ಒಳ್ಳೆಯ ಪೋಷಕರಾಗಿರಿ' ಎಂದು ಭಾವನಾತ್ಮಕ ಕಿವಿಮಾತು ಹೇಳಿದೆ.  ವಿವಾಹ ಸಂಬಂಧ ಅಂತ್ಯಗೊಂಡಿದ್ದರೂ, ಮಕ್ಕಳ ಮೇಲಿನ ಪೋಷಕರ ಜವಾಬ್ದಾರಿಗಳನ್ನು ಪತಿ ಮುಂದುವರಿಸಿಕೊಂಡು ಹೋಗಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಕ್ಕಳಿಗೆ ಒಳ್ಳೆಯ ಪೋಷಕರಾಗಿ: ವಿವಾಹ ವಿಚ್ಚೇದನದ ಆದೇಶದ ಜೊತೆ ಹೈಕೋರ್ಟ್​​ ಕಿವಿಮಾತು
ಕರ್ನಾಟಕ ಹೈಕೋರ್ಟ್
Image Credit source: Getty Images

Updated on: Sep 16, 2026 | 12:57 PM

ಬೆಂಗಳೂರು, ಸೆಪ್ಟೆಂಬರ್​​ 16: ಅಪರೂಪದ ಪ್ರಕರಣವೊಂದರಲ್ಲಿ ದಂಪತಿಯ ವಿವಾಹವನ್ನು ವಿಚ್ಛೇದನಗೊಳಿಸಿದ ಕರ್ನಾಟಕ ಹೈಕೋರ್ಟ್, ಪತ್ನಿಗೆ 50 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನೀಡುವಂತೆ ಪತಿಗೆ ಸೂಚಿಸಿದೆ. ಜೊತೆಗೆ, ಅಪ್ರಾಪ್ತ ಮಕ್ಕಳ ಪೋಷಕರಾಗಿ ಇಬ್ಬರೂ ಮುಂದುವರಿಯಬೇಕು. ಮಕ್ಕಳ ಎದುರು ಅಥವಾ ಮಕ್ಕಳು ಕೇಳುವಂತೆ ಪರಸ್ಪರರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು. ಮಕ್ಕಳು ಇಬ್ಬರೂ ಪೋಷಕರೊಂದಿಗೆ ಪ್ರೀತಿಯ, ಆರೋಗ್ಯಕರ ಹಾಗೂ ಯಾವುದೇ ಅಡೆತಡೆಯಿಲ್ಲದ ಸಂಬಂಧವನ್ನು ಹೊಂದುವಂತೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ಕಾಲೇಜು ಸಹಪಾಠಿಗಳಾಗಿದ್ದ ಜೋಡಿ

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠವು, ಮಂಗಳೂರಿನ 40 ವರ್ಷದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಪತ್ನಿಗೆ 2 ಕೋಟಿ ರೂಪಾಯಿ ಶಾಶ್ವತ ಜೀವನಾಂಶ ಪಾವತಿಸುವಂತೆ ಜೂನ್ 20, 2026ರಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿಯೂ ಮಂಗಳೂರಿನವರಾಗಿದ್ದಾರೆ. ಕಾಲೇಜು ಸಹಪಾಠಿಗಳಾಗಿದ್ದ ಈ ದಂಪತಿ 2011ರಲ್ಲಿ ಮಂಗಳೂರಿನಲ್ಲಿ ವಿವಾಹವಾಗಿದ್ದರು. ಬಳಿಕ ಅವರು ಬ್ರಿಟನ್‌ಗೆ ತೆರಳಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ವೈವಾಹಿಕ ಜೀವನದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಪತ್ನಿ 2021ರಲ್ಲಿ ಪತಿಯಿಂದ ದೂರವಾಗಿದ್ದರು. ಬಳಿಕ ಭಾರತದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಲಾಗಿತ್ತು.

ಇದನ್ನೂ ಓದಿ: ವಂದೇ ಮಾತರಂ ಗೀತೆಯ 2 ಚರಣ ಮಾತ್ರ ಹಾಡಲು ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಕೆ

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಪತಿ

ಪತ್ನಿ ವೈದ್ಯೆಯಾಗಿರುವುದನ್ನು ಹಾಗೂ ಅವರ ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯ ನೀಡಿದ್ದ 2 ಕೋಟಿ ರೂಪಾಯಿ ಶಾಶ್ವತ ಜೀವನಾಂಶವನ್ನು 50 ಲಕ್ಷ ರೂಪಾಯಿಗೆ ಇಳಿಸಿದೆ. ಆದರೆ, ಮಕ್ಕಳ ನಿರ್ವಹಣೆ, ಶಿಕ್ಷಣ, ವೈದ್ಯಕೀಯ ಹಾಗೂ ಇತರ ಅಗತ್ಯ ವೆಚ್ಚಗಳಿಗಾಗಿ ಪ್ರತಿ ಮಗುವಿಗೆ ತಿಂಗಳಿಗೆ 25,000 ರೂಪಾಯಿಯನ್ನು ಪತಿ ಪಾವತಿಸಬೇಕು ಎಂದು ಸೂಚಿಸಿದೆ. ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಈ ಮೊತ್ತವನ್ನು ಪಾವತಿಸಲು ನಿರ್ದೇಶಿಸಿದೆ. ಅಲ್ಲದೆ ಪ್ರತಿ ವರ್ಷ ಪೂರ್ಣಗೊಂಡ ಬಳಿಕ, ಪ್ರತಿ ಮಗುವಿಗೆ ನೀಡಬೇಕಾದ ಮಾಸಿಕ ನಿರ್ವಹಣಾ ಮೊತ್ತವನ್ನು 5,000 ರೂಪಾಯಿಯಂತೆ ಹೆಚ್ಚಿಸಬೇಕು. ಮಕ್ಕಳು ಪ್ರಾಪ್ತ ವಯಸ್ಸಿಗೆ ತಲುಪುವವರೆಗೆ ಈ ಹೆಚ್ಚಳ ಮುಂದುವರಿಯಬೇಕು ಎಂದು ನ್ಯಾಯಾಲಯ ತಿಳಿಸಿದೆ.

ವಿವಾಹ ಸಂಬಂಧ ಅಂತ್ಯಗೊಂಡಿದ್ದರೂ, ಮಕ್ಕಳ ಮೇಲಿನ ಪೋಷಕರ ಜವಾಬ್ದಾರಿಗಳನ್ನು ಪತಿ ಮುಂದುವರಿಸಿಕೊಂಡು ಹೋಗಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ವಿಶೇಷವಾಗಿ ಮಕ್ಕಳ ವಿವಾಹದ ಸಂದರ್ಭದಲ್ಲಿ, ತನ್ನ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ವಿವಾಹದ ವೆಚ್ಚಕ್ಕೆ ಪ್ರೀತಿ ಮತ್ತು ವಾತ್ಸಲ್ಯದಿಂದ ಕೊಡುಗೆ ನೀಡಬೇಕು ಎಂದು ಸೂಚಿಸಿದೆ. ಪತ್ನಿಯು ಪತಿಯ ಮುಂಚಿತ ಮಾಹಿತಿ ನೀಡದೆ ಹಾಗೂ ನ್ಯಾಯಾಲಯದ ಆದೇಶ ಪಡೆಯದೆ ಮಕ್ಕಳನ್ನು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಭಾರತದ ಹೊರಗೆ ಸ್ಥಳಾಂತರಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಇದಲ್ಲದೆ, ಪ್ರತಿ ಶನಿವಾರ ಮತ್ತು ಭಾನುವಾರ ತಲಾ ಮೂರು ಗಂಟೆಗಳ ಕಾಲ, ತಾಯಿಯ ಸಮ್ಮುಖದಲ್ಲಿ ಮಕ್ಕಳನ್ನು ಭೇಟಿಯಾಗಲು ಪತಿಗೆ ಅವಕಾಶ ನೀಡಲಾಗಿದೆ. ಮಕ್ಕಳೊಂದಿಗೆ ಆಡಿಯೋ ಅಥವಾ ವಿಡಿಯೋ ಕಾಲ್ ಮೂಲಕವೂ ಪತಿ ಸಂಪರ್ಕದಲ್ಲಿರಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:56 pm, Wed, 16 September 26

Loading...
Unable to load recommendations.
Follow Us