ಬೆಂಗಳೂರು: ಈಜಿಪುರದಲ್ಲಿ ಇಂದು 108 ಅಡಿ ಎತ್ತರದ ವಿಷ್ಣು ವಿಗ್ರಹ ಪ್ರತಿಷ್ಠಾಪನೆ

ಬೆಂಗಳೂರಿನ ಈಜಿಪುರದಲ್ಲಿ 108 ಅಡಿ ಎತ್ತರದ ಏಕಶಿಲಾ ವಿಷ್ಣು ಪ್ರತಿಮೆಯ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದಿದೆ. ಇದು ವಿಶ್ವದ ಅತಿ ಎತ್ತರದ ಏಕಶಿಲಾ ವಿಷ್ಣು ಪ್ರತಿಮೆಯಾಗಿದ್ದು, 300 ಟನ್ ತೂಕ ಹೊಂದಿದೆ. 2.60 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ವಿಷ್ಣು ಪ್ರತಿಮೆ ನೋಡಲು ಭಕ್ತರು ಈಜಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.

ಬೆಂಗಳೂರು: ಈಜಿಪುರದಲ್ಲಿ ಇಂದು 108 ಅಡಿ ಎತ್ತರದ ವಿಷ್ಣು ವಿಗ್ರಹ ಪ್ರತಿಷ್ಠಾಪನೆ
ವಿಷ್ಣು ವಿಗ್ರಹ
Edited By:

Updated on: Jun 02, 2025 | 1:56 PM

ಬೆಂಗಳೂರು, ಜೂನ್​ 02: ನಗರದ ಈಜಿಪುರದ (Ejipura) ಕೋದಂಡ ರಾಮಸ್ವಾಮಿ ದೇಗುಲದ ಬಳಿ ವಿಷ್ಣುವಿನ ಏಕಶಿಲೆ ಪ್ರತಿಮೆ (Vishnu idol) ಅನಾವರಣಕ್ಕೆ ಸಿದ್ಧವಾಗಿದ್ದು, ಇಂದು (ಸೋಮವಾರ) ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. 108 ಅಡಿ ಎತ್ತರದ ಈ ವಿಷ್ಣುವಿನ ಏಕಶಿಲೆ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಆಗಿದೆ. ಕೋದಂಡ ರಾಮಸ್ವಾಮಿ ಚಾರಿಟೇಬಲ್‌ ಟ್ರಸ್ಟ್‌  ವತಿಯಿಂದ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಮತ್ತು ಮೈಸೂರಿನ ಪರಕಾಲ ಮಠದ ಅಭಿನವ ವಾಗೀಶ್ ಭಾಗಿ ಆಗಿದ್ದರು.

ಏಕಶಿಲಾ ವಿಗ್ರಹವಾಗಿರುವ ವಿಷ್ಣುವಿನ ವಿಗ್ರಹ 300 ಟನ್‌ ತೂಕವಿದ್ದು, ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ವಂದಾವಾಸಿ ತಾಲೂಕಿನ ಕೊರಕ್ಕೊಟ್ಟೈನಲ್ಲಿ ಮೂರ್ತಿಗೆ ರೂಪ ನೀಡಲಾಗಿದೆ. 2010ರಲ್ಲೇ ಬೃಹತ್ ವಿಷ್ಣು ವಿಗ್ರಹದ ಕೆತ್ತನೆ ಕೆಲಸ ಆರಂಭವಾಗಿತ್ತು. ಸಾಕಷ್ಟು ಅಡೆತಡೆಗಳ ಮಧ್ಯೆ 2019 ರಲ್ಲಿ 240 ಚಕ್ರಗಳ ಲಾರಿ ಮೂಲಕ ಆರು ತಿಂಗಳಲ್ಲಿ ರಾಜ್ಯಕ್ಕೆ ತರಲಾಗಿದೆ.

ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ಬಿಬಿಎಂಪಿ ಶುಭ ಸುದ್ದಿ: ಬಿ ಖಾತಾ ಬದಲಿಗೆ ಎ ಖಾತಾ ನೀಡುವ ಸುಳಿವು!

ವಿಷ್ಣುವಿನ ಈ ಏಕಶಿಲೆಯ ಪ್ರತಿಮೆ ನಿರ್ಮಾಣಕ್ಕೆ ನಿವೃತ್ತ ಸರ್ಕಾರಿ ವೈದ್ಯ ಡಾ. ಬಿ. ಸದಾನಂದ ಪ್ರಮುಖರು.  ಅವರು 2010ರಲ್ಲಿ ಈ ಯೋಜನೆಯ ಕೆಲಸ ಪ್ರಾರಂಭಿಸಿದ್ದರು. ಈ ಪ್ರತಿಮೆಯು ಆಧ್ಯಾತ್ಮಿಕ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿ ಕಾರ್ಯನಿರ್ವಹಿಸಬೇಕೆಂಬವುದು ವೈದ್ಯ ಡಾ. ಬಿ. ಸದಾನಂದ ಅವರ ಅಭಿಪ್ರಾಯವಾಗಿದೆ.

2.60 ಕೋಟಿ ರೂ. ವೆಚ್ಚ

ವಿಗ್ರಹ ನಿರ್ಮಾಣದ ಮೊದಲ ಹಂತವಾಗಿ ಮುಖ್ಯ ದೇವರು ಮತ್ತು ಆದಿಶೇಷನ ಪೂರ್ವ ನಿರ್ಮಾಣ ಕೆಲಸ ಮತ್ತು ಶಿಲ್ಪಕಲೆ ಕೈಗೊಳ್ಳಾಗಿದೆ. ಬಳಿಕ ಶಿಲ್ಪವನ್ನು ಪೂರ್ಣಗೊಳಿಸುವುದು, ಹೊಳಪು ನೀಡುವುದು, ಕ್ರೇನ್ ಕೆಲಸ, ಪ್ರತಿಮೆಯ ಕಟ್ಟಡ ಚೌಕಟ್ಟು ಮತ್ತು ಇತರ ಸಿವಿಲ್ ಕೆಲಸಗಳನ್ನು ಒಳಗೊಂಡಂತೆ ಪ್ರತಿಮೆಯನ್ನು ಪೂರ್ಣಗೊಳಿಸಲು ಒಟ್ಟು 2.60 ಕೋಟಿ ರೂ. ವೆಚ್ಚವಾಗಿದೆ.

ಸದ್ಯ ಬಹುನಿರೀಕ್ಷಿತ ವಿಷ್ಣುವಿನ ವಿರಾಟ ಸ್ವರೂಪವನ್ನು ಕಣ್ತುಂಬಿಕೊಳ್ಳಲು ಭಕ್ತರು ಈಜಿಪುರಕ್ಕೆ ಆಗಮಿಸುತ್ತಿದ್ದಾರೆ. ಶನಿವಾರದಿಂದ ಹೋಮ-ಹವನಗಳು ಪ್ರಾರಂಭವಾಗಿದ್ದು, ಇಂದು ಮುಖ್ಯ ಪ್ರಾಣ ಪ್ರತಿಷ್ಠಾ, ಮಹಾಕುಂಬಾಭಿಷೇಕ ನಡೆಯಲಿದೆ.

ಇದನ್ನೂ ಓದಿ: ವಿಧಾನಸೌಧ ಪ್ರವಾಸ ಇಂದಿನಿಂದ ಆರಂಭ: ಟಿಕೆಟ್​ ಬುಕ್ಕಿಂಗ್​ ಎಲ್ಲಿ ಮಾಡಬೇಕು, ದರ ಎಷ್ಟು? ಇಲ್ಲಿದೆ ವಿವರ

ಇದುವರೆಗೆ ಸ್ಥಾಪಿಸಲಾದ ಇತರೆ ವಿಷ್ಣುವಿನ ಪ್ರತಿಮೆಗಳಿಗಿಂತ ಈ ಶಿಲ್ಪವು ಭಿನ್ನ ಮತ್ತು ಮೊದಲನೆಯದು. ಪರಮಾತ್ಮನ ಶಿವ ಕೇಶವ ಸ್ವರೂಪ, ಮಹಾ ವಿಷ್ಣು, ಶಿವ, ಬ್ರಹ್ಮ, ಸ್ಕಂದ, ವಿನಾಯಕ, ನರಸಿಂಹ, ಆಂಜನೇಯ, ಗರುಡ, ಅಗ್ನಿ ಮತ್ತು ಋಷಿ ಮುನಿಗಳನ್ನು ಶಿಲೆ ಪ್ರತಿನಿಧಿಸುತ್ತದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:30 pm, Mon, 2 June 25