ಸಾಂದರ್ಭಿಕ ಚಿತ್ರ
ಮುಖ್ಯಾಂಶಗಳು
- ಶೇಕಡಾ 45 ಪೌರಕಾರ್ಮಿಕರು ಹಾಗೂ 28 ಸಂಚಾರ ಪೊಲೀಸರಲ್ಲಿ ಶ್ವಾಸಕೋಶದ ದೌರ್ಬಲ್ಯ ಪತ್ತೆಯಾಗಿದೆ.
- ವಾಯು ಮಾಲಿನ್ಯದಿಂದ ಯುವಜನರಲ್ಲಿಯೂ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತಿದೆ.
- ಪೌರಕಾರ್ಮಿಕರ ಕೆಲಸದ ಅವಧಿ ಮರುಹೊಂದಿಸಲು ಹಾಗೂ ಮಾಸ್ಕ್ ಕಡ್ಡಾಯಗೊಳಿಸಲು ಒತ್ತಾಯ.
ಬೆಂಗಳೂರು, ಅಕ್ಟೋಬರ್ 27: ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ರಸ್ತೆ ಬದಿ ಹಾಗೂ ನಿರಂತರ ದಟ್ಟಣೆಯಲ್ಲಿ ಕರ್ತವ್ಯ ನಿರ್ವಹಿಸುವ ಫ್ರಂಟ್‌ಲೈನ್ ಯೋಧರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಬೆಂಗಳೂರಿನಲ್ಲಿ ನಡೆಸಲಾದ 11,000ಕ್ಕೂ ಅಧಿಕ ಮುಂಚೂಣಿ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ, ಸುಮಾರು ಶೇ 45ರಷ್ಟು ಪೌರಕಾರ್ಮಿಕರು ಮತ್ತು ಶೇ 28ರಷ್ಟು ಸಂಚಾರ ಪೊಲೀಸ್ ಸಿಬ್ಬಂದಿಯ ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ಕುಸಿತಂಡುಬಂದಿದೆ ಎಂದು ವರದಿ ತಿಳಿಸಿದೆ.
ವಿವಿಧ ವೃತ್ತಿಪರರ ಮೇಲೆ ಮಾಲಿನ್ಯದ ದುಷ್ಪರಿಣಾಮ
ವಾಯು ಮಾಲಿನ್ಯ ಹಾಗೂ ಧೂಳಿನಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ‘VAAYU’ ಕ್ಲಿನಿಕ್ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಆತಂಕಕಾರಿ ಅಂಶಗಳು ಹೊರಬಂದಿವೆ.
- ಪೌರಕಾರ್ಮಿಕರು ಮತ್ತು ಬಿಎಂಟಿಸಿ ಸಿಬ್ಬಂದಿ: ತಪಾಸಣೆಗೆ ಒಳಪಡಿಸಿದವರಲ್ಲಿ ಶೇ 45ರಷ್ಟು ಪೌರಕಾರ್ಮಿಕರು ಹಾಗೂ ಶೇ 29.5ರಷ್ಟು ಬಿಎಂಟಿಸಿ ಸಿಬ್ಬಂದಿ ಉಸಿರಾಟ ಹಾಗೂ ಶ್ವಾಸಕೋಶದ ದೌರ್ಬಲ್ಯದಿಂದ ಬಳಲುತ್ತಿದ್ದಾರೆ.
- ಸಂಚಾರ ಪೊಲೀಸರು ಮತ್ತು ನಿರ್ಮಾಣ ಕಾರ್ಮಿಕರು: ನಿರಂತರವಾಗಿ ವಾಹನಗಳ ಹೊಗೆ ಮತ್ತು ದಟ್ಟಣೆಯ ನಡುವೆ ಕೆಲಸ ಮಾಡುವ ಶೇ 28ರಷ್ಟು ಸಂಚಾರ ಪೊಲೀಸರು ಹಾಗೂ ಶೇ 15ರಷ್ಟು ನಿರ್ಮಾಣ ಕಾರ್ಮಿಕರು ಶ್ವಾಸಕೋಶದ ಸಮಸ್ಯೆಗೆ ತುತ್ತಾಗಿದ್ದಾರೆ.
- ಹೃದಯದ ಆರೋಗ್ಯದ ಮೇಲೂ ದುಷ್ಪರಿಣಾಮ: ಕಳಪೆ ಗಾಳಿಯ ಗುಣಮಟ್ಟದಿಂದಾಗಿ ಯುವಜನರಲ್ಲಿಯೂ ಹೃದಯಾಘಾತ ಹಾಗೂ ಪಾರ್ಶ್ವವಾಯು (Strokes) ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪ್ರಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಹಾಗೂ ಡಾ. ವಿವೇಕ್ ಜಾವಳಿ ಕಳವಳ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ರಕ್ಷಣೆಗೆ ತಜ್ಞರ ಸಲಹೆಗಳು ಹಾಗೂ ಮುನ್ನೆಚ್ಚರಿಕೆ
ನಗರದ ಮುಂಚೂಣಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಮತ್ತು ಇಲಾಖೆಗಳು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ತಜ್ಞರು ಒತ್ತಾಯಿಸಿದ್ದಾರೆ.
- ಕೆಲಸದ ವೇಳೆಯಲ್ಲಿ ಬದಲಾವಣೆ: ಗರಿಷ್ಠ ವಾಹನ ದಟ್ಟಣೆ ಮತ್ತು ಮಾಲಿನ್ಯವಿರುವ ಪೀಕ್ ಅವರ್‌ಗಳಲ್ಲಿ ಪೌರಕಾರ್ಮಿಕರ ಕೆಲಸದ ವೇಳೆಯನ್ನು ಮರುಹೊಂದಿಸುವುದು.
- ಕಡ್ಡಾಯ ಆರೋಗ್ಯ ತಪಾಸಣೆ: ಎಲ್ಲಾ ಕಾರ್ಮಿಕರಿಗೆ ವಾರ್ಷಿಕ ವೈದ್ಯಕೀಯ ತಪಾಸಣೆ ಮತ್ತು ಸುರಕ್ಷತಾ ಪರಿಕರಗಳನ್ನು (ಉದಾಹರಣೆಗೆ ಮಾಸ್ಕ್) ಕಡ್ಡಾಯಗೊಳಿಸುವುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ