‘ಡಿಜೆ ಬುಕ್ ಮಾಡಿದ್ದೇನೆ, ಎಲ್ಲಿ ತರಲಿ ಸಾಹೇಬ್ರೇ?’: ಗದಗ ಡಿಸಿ ನಿವಾಸದಲ್ಲಿ ಡಿಜೆ ಪಾರ್ಟಿಗೆ ರೈತನ ವಿಭಿನ್ನ ಪ್ರತಿಭಟನೆ!
ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಬೀಳ್ಕೊಡುಗೆ ಸಮಾರಂಭದ ವಿವಾದದ ಬೆನ್ನಲ್ಲೇ, ರೈತ ರಾಜೀವ ಬೊಮ್ಮನಕಟ್ಟಿ ಮತ್ತು ಜಿಲ್ಲಾಧಿಕಾರಿ ನಡುವಿನ ಫೋನ್ ಸಂಭಾಷಣೆ ವೈರಲ್ ಆಗುತ್ತಿದೆ. ಡಿಜೆ ಬುಕ್ ಮಾಡಿರುವುದಾಗಿ ಹೇಳಿ ರೈತ ವ್ಯಂಗ್ಯವಾಡಿದ್ದು, ಬರ, ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ಬೆಳೆ ವಿಮೆ ಪರಿಹಾರದ ಬಗ್ಗೆ ಪ್ರಶ್ನಿಸಿದ್ದಾರೆ.

ಮುಖ್ಯಾಂಶಗಳು
- ಡಿಸಿ ಬೀಳ್ಕೊಡುಗೆ ಪಾರ್ಟಿಗೆ ರೈತನ ವ್ಯಂಗ್ಯ
- ಬರ, ನೀರು, ಮೇವು ಸಮಸ್ಯೆ ಮುಂದಿಟ್ಟು ರೈತ ಆಕ್ರೋಶ
- ರೈತ ಹಾಗೂ ಜಿಲ್ಲಾಧಿಕಾರಿ ನಡುವಣ ಸಂಭಾಷಣೆ ವೈರಲ್
ಗದಗ, ನವೆಂಬರ್ 23: ಜಿಲ್ಲೆಯ ರೈತರು ಬರಗಾಲದಿಂದ ತತ್ತರಿಸುತ್ತಿರುವಾಗಲೇ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಗದಗ ಜಿಲ್ಲಾಧಿಕಾರಿ ಮತ್ತು ಶಿರಹಟ್ಟಿ ತಾಲೂಕಿನ ಒಡವಿ ಗ್ರಾಮದ ರೈತ ರಾಜೀವ ಬೊಮ್ಮನಕಟ್ಟಿ ನಡುವಿನ ಫೋನ್ ಸಂಭಾಷಣೆ ಮುನ್ನೆಲೆಗೆ ಬಂದಿದೆ. ಜಿಲ್ಲಾಧಿಕಾರಿಗೆ ಡಿಜೆ ತರುವುದಾಗಿ ರೈತ ಹೇಳುವ ಮೂಲಕ ಬೀಳ್ಕೊಡುಗೆ ಸಮಾರಂಭದ ಬಗ್ಗೆ ವ್ಯಂಗ್ಯವಾಡಿದ್ದು, ಮಾತುಕತೆ ವೇಳೆ ರೈತರ ಸಂಕಷ್ಟವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಶನಿವಾರ ರಾತ್ರಿ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಸಿ.ಎನ್. ಶ್ರೀಧರ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಸಂಗೀತ, ಊಟ ಮತ್ತು ನೃತ್ಯದೊಂದಿಗೆ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿತ್ತು. ಒಂದೆಡೆ ರೈತರು ಬರ, ಬೆಳೆ ನಷ್ಟ, ಬೆಳೆ ವಿಮೆ ಮತ್ತು ಪರಿಹಾರಕ್ಕಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ಅದ್ದೂರಿ ಸಂಭ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿತ್ತು.
ರೈತ ಮತ್ತು ಡಿಸಿ ನಡುವಣ ಸಂಭಾಷಣೆ ವೈರಲ್
ಇದೀಗ ರೈತ ರಾಜೀವ ಬೊಮ್ಮನಕಟ್ಟಿ ಮತ್ತು ಜಿಲ್ಲಾಧಿಕಾರಿ ನಡುವಿನ ಫೋನ್ ಸಂಭಾಷಣೆ ಕೂಡ ಚರ್ಚೆಗೆ ಗ್ರಾಸವಾಗಿದೆ. ಮಾತುಕತೆ ಆರಂಭದಲ್ಲೇ ರೈತ, ‘ಸಾಹೇಬ್ರೇ, ಡಿಜೆ ಬುಕ್ ಮಾಡಿದ್ದೇನೆ. ಇವತ್ತು ತರಿಸುತ್ತಿದ್ದೇನೆ. ಎಲ್ಲಿ ತರಿಸಲಿ?’ ಎಂದು ಕೇಳುತ್ತಾರೆ. ಇದಕ್ಕೆ ಜಿಲ್ಲಾಧಿಕಾರಿ, ‘ಏನು, ಡೀಸೆಲ್ ಬೇಕಾ? ಪೆಟ್ರೋಲ್ ಬಂಕ್‌ಗೆ ಹೋಗು’ ಎಂದು ಪ್ರತಿಕ್ರಿಯಿಸುತ್ತಾರೆ. ಆಗ ರೈತ, ‘ಡೀಸೆಲ್ ಅಲ್ಲ ಸಾಹೇಬ್ರೇ, ಡಿಜೆ. ಕುಣಿಯುವವರು ಇರ್ತಾರಲ್ಲ, ಅದೇ ಡಿಜೆ’ ಎಂದು ಸ್ಪಷ್ಟಪಡಿಸುತ್ತಾರೆ.
ಮುಂದುವರಿದು, ‘ಗದಗ ಜಿಲ್ಲೆ ಸಮೃದ್ಧವಾಗಿದೆ. ರೈತರಿಗೆ ನ್ಯಾಯ ಸಿಕ್ಕಿಲ್ಲ, ಕುಡಿಯಲು ನೀರಿಲ್ಲ, ದನಗಳಿಗೆ ಮೇವು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಡಿಜೆ ಹಚ್ಚಿ ಕಾರ್ಯಕ್ರಮ ಮಾಡಿದ್ದೀರಿ. ಅದಕ್ಕೇ ನಿಮಗೂ ಡಿಜೆ ತರಿಸುತ್ತಿದ್ದೇನೆ’ ಎಂದು ರೈತ ವ್ಯಂಗ್ಯವಾಗಿ ಮಾತನಾಡುತ್ತಾರೆ. ನವೆಂಬರ್ 30ರಂದು ಜಿಲ್ಲಾಧಿಕಾರಿಯಾಗಿ ನೀವು ಇರುವುದರಿಂದ ಡಿಜೆ ಎಲ್ಲಿ, ಎಷ್ಟೊತ್ತಿಗೆ ತರಬೇಕು ಎಂದು ಪ್ರಶ್ನಿಸುತ್ತಾರೆ. ಆದರೆ ಜಿಲ್ಲಾಧಿಕಾರಿ, ‘ನನಗೆ ಏನೂ ಬೇಕಾಗಿಲ್ಲ. ನೀನು ಮಾಡಬೇಕಾದ್ದನ್ನು ಮಾಡು’ ಎಂದು ಹೇಳುತ್ತಾರೆ.
ಈ ವೇಳೆ ರೈತ, ‘ನಾವು ಕುಡಿಯಲು ನೀರಿಲ್ಲದೆ, ದನಗಳಿಗೆ ಮೇವು ಇಲ್ಲದೆ ಸಂಕಷ್ಟದಲ್ಲಿದ್ದೇವೆ. ಊಟ ಮಾಡುವುದನ್ನೇ ನಿಲ್ಲಿಸಿದ್ದೇವೆ’ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಇದಕ್ಕೆ ಜಿಲ್ಲಾಧಿಕಾರಿ, ‘ನಿನಗೆ ಏನಾದರೂ ಸಮಸ್ಯೆ ಇದ್ದರೆ ಬೆಳಗ್ಗೆ 9.30ಕ್ಕೆ ಕಚೇರಿಗೆ ಬಾ’ ಎಂದು ಪ್ರತಿಕ್ರಿಯಿಸುತ್ತಾರೆ. ಆದರೆ ರೈತ, ‘ಒಂದು ವರ್ಷದಿಂದ ಮಳೆ ಆಗಿಲ್ಲ. ಬೆಳೆ ವಿಮೆ ಕ್ಲೇಮ್ ಮಾಡಿದ್ದೀರಾ? ನಮಗೆ ವಿಮೆ ಕೊಟ್ಟಿದ್ದೀರಾ?’ ಎಂದು ಪ್ರಶ್ನಿಸುತ್ತಾರೆ.
ಇದಕ್ಕೆ ಜಿಲ್ಲಾಧಿಕಾರಿ, ‘ಮುಂದಿನ ಸೋಮವಾರ ನಿಮ್ಮ ಖಾತೆಗಳಿಗೆ ಹಣ ಬರುತ್ತದೆ’ ಎಂದು ಉತ್ತರಿಸುತ್ತಾರೆ. ಹಣ ಯಾವ ದಿನ ಜಮೆಯಾಗುತ್ತದೆ ಎಂಬುದನ್ನು ಕೇಳಿದ ರೈತನಿಗೆ, ‘ಸೋಮವಾರ ಹಾಕುತ್ತೇವೆ ಎಂದು ಹೇಳಿದರೆ ಸೋಮವಾರವೇ ಹಾಕುತ್ತೇವೆ’ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ. ಮಾತುಕತೆಯ ಕೊನೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ.
ಇದನ್ನೂ ಓದಿ: ಭೀಕರ ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಜಿಲ್ಲಾಧಿಕಾರಿ ನಿವಾಸದಲ್ಲಿ ಮೋಜು-ಮಸ್ತಿ
ಒಟ್ಟಿನಲ್ಲಿ, ಜಿಲ್ಲಾಧಿಕಾರಿಯ ಬೀಳ್ಕೊಡುಗೆ ಕಾರ್ಯಕ್ರಮದ ಬಗ್ಗೆ ರೈತ ವ್ಯಂಗ್ಯವಾಡಿರುವುದು ಮಾತ್ರವಲ್ಲದೆ, ಜಿಲ್ಲೆಯ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವು ಮತ್ತು ಬೆಳೆ ವಿಮೆ ಪರಿಹಾರದ ವಿಳಂಬದ ಬಗ್ಗೆಯೂ ಪ್ರಶ್ನಿಸಿದ್ದಾರೆ. ಈ ಫೋನ್ ಸಂಭಾಷಣೆ ಇದೀಗ ಗದಗ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




