ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್: ವಿದೇಶಕ್ಕೆ ಹೋಗೋರಿಗೆ ಸಿಹಿ ಸುದ್ದಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರು ಸೇರಿದಂತೆ ಏಳು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ (FTI-TTP) ಅನ್ನು ಉದ್ಘಾಟಿಸಿದ್ದಾರೆ. ಇದು ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭವಾದ ವಲಸೆ ಸೌಲಭ್ಯಗಳನ್ನು ಒದಗಿಸುತ್ತದೆ. ಆನ್‌ಲೈನ್ ಅರ್ಜಿಯ ಮೂಲಕ ನೋಂದಾಯಿಸಿಕೊಳ್ಳಬೇಕು. ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಿದೆ. ಈ ಯೋಜನೆಯು ಭಾರತೀಯರು ಮತ್ತು OCI ಕಾರ್ಡ್ ಹೊಂದಿರುವವರಿಗೆ ಅನುಕೂಲಕರವಾಗಿದೆ.
ಬೆಂಗಳೂರು, ಜನವರಿ 17: ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಅವರು ಗುರುವಾರ ಬೆಂಗಳೂರು (Benagaluru) ಸೇರಿದಂತೆ ಆರು ವಿಮಾನ ನಿಲ್ದಾಣಗಳಲ್ಲಿ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ (ಎಫ್ಟಿಐ-ಟಿಟಿಪಿ) ಉದ್ಘಾಟಿಸಿದರು. ಪ್ರಯಾಣಿಕರಿಗೆ ವಿಶ್ವದರ್ಜೆಯ ವಲಸೆ ಸೌಲಭ್ಯಗಳನ್ನು ಒದಗಿಸುವುದು, ಅಂತರಾಷ್ಟ್ರೀಯ ಪ್ರಯಾಣವನ್ನು ತಡೆರಹಿತ ಮತ್ತು ಸುರಕ್ಷಿತಗೊಳಿಸುವುದು ಇದರ ಉದ್ದೇಶವಾಗಿದೆ.
ಗುರುವಾರ ಏಕಕಾಲಕ್ಕೆ ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೊಚ್ಚಿನ್ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ಆರಂಭಿಸಲಾಗಿದೆ.
ಈ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್-ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ ಭಾರತೀಯ ಪ್ರಜೆಗಳು ಮತ್ತು ಭಾರತೀಯ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡುದಾರರಿಗೆ ನೆರವಾಗಲಿದೆ.
ಎಫ್ಟಿಪಿ-ಟಿಟಿಪಿಗೆ ಆನ್‌ಲೈನ್ ಪೋರ್ಟಲ್ https://ftittp.mha.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಪ್ರೋಗ್ರಾಂಗೆ ನೋಂದಾಯಿಸಲು, ಅರ್ಜಿದಾರರು ತಮ್ಮ ವಿವರಗಳನ್ನು ಭರ್ತಿ ಮಾಡುವ ಮೂಲಕ ಮತ್ತು ಪೋರ್ಟಲ್‌ನಲ್ಲಿ ಅಗತ್ಯವಾದ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೋಂದಾಯಿತ ಅರ್ಜಿದಾರರು ಬಯೋಮೆಟ್ರಿಕ್ ಡೇಟಾವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಥವಾ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (FRRO)ಯಲ್ಲಿ ಒದಗಿಸಬಹುದು. ಅಪ್ಲಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಲು, ಬಯೋಮೆಟ್ರಿಕ್ಸ್ ಕಡ್ಡಾಯವಾಗಿದೆ.
ಇದನ್ನೂ ಓದಿ: ಬ್ಯಾಂಕಾಕ್ನಿಂದ ಬೆಂಗಳೂರಿಗೆ ತಂದಿದ್ದ 23 ಕೋಟಿ ರೂ. ಮೌಲ್ಯದ ಗಾಂಜಾ ವಿಮಾನ ನಿಲ್ದಾಣದಲ್ಲಿ ವಶ
ನೋಂದಾಯಿತ ಪ್ರಯಾಣಿಕರು ತಮ್ಮ ಏರ್‌ಲೈನ್ ನೀಡಿದ ಬೋರ್ಡಿಂಗ್ ಪಾಸ್ ಅನ್ನು ಇ-ಗೇಟ್‌ನಲ್ಲಿ ಸ್ಕ್ಯಾನ್ ಮಾಡಬೇಕು. ನಂತರ ಪಾಸ್‌ಪೋರ್ಟ್ ಅನ್ನು ಸ್ಕ್ಯಾನ್ ಮಾಡಬೇಕು. ಆಗಮನ ಮತ್ತು ನಿರ್ಗಮನ ಎರಡೂ ಸ್ಥಳಗಳಲ್ಲಿ, ಇ-ಗೇಟ್‌ಗಳಲ್ಲಿ ಪ್ರಯಾಣಿಕರ ಬಯೋಮೆಟ್ರಿಕ್‌ಗಳನ್ನು ಅಳವಡಿಸಲಾಗಿದೆ. ಒಮ್ಮೆ ಈ ದೃಢೀಕರಣ ಯಶಸ್ವಿಯಾದರೆ, ಇ-ಗೇಟ್ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ ಮತ್ತು ವಲಸೆ ಕ್ಲಿಯರೆನ್ಸ್ ನೀಡಲಾಗಿದೆ ಎಂದು ಪರಿಗಣಿಸಲಾಗುತ್ತದೆ.
ದೇಶಾದ್ಯಂತ 21 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ FTI-TTP ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ, ದೆಹಲಿಯ ಜೊತೆಗೆ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೊಚ್ಚಿ ಮತ್ತು ಅಹಮದಾಬಾದ್ ಎಂಬ ಏಳು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಪರಿಚಯಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ