AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸಿಟಿ ರವಿ ಅವಾಚ್ಯ ಶಬ್ದ ಬಳಸಿರುವುದು ವಿಡಿಯೋದಲ್ಲಿ ದೃಢ

ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಪರಿಷತ್ ಸದಸ್ಯ ಸಿಟಿ ರವಿ ಅವಾಚ್ಯ ಶಬ್ದಗಳನ್ನು ಬಳಸಿರುವುದು ವಿಡಿಯೋ ಮೂಲಕ ದೃಢಪಟ್ಟಿದೆ ಎಂದು ಸಿಐಡಿ ತನಿಖೆಯಲ್ಲಿ ಕಂಡುಕೊಂಡಿದೆ. ನಾಲ್ಕು ಗಂಟೆಗಳ ವಿಡಿಯೋದಲ್ಲಿ ಏಳು ಬಾರಿ ಅವಾಚ್ಯ ಶಬ್ದ ಬಳಸಲಾಗಿದೆ ಎನ್ನಲಾಗಿದೆ. ಸಿಟಿ ರವಿ ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದರಿಂದ ನ್ಯಾಯಾಲಯದ ಮೂಲಕ ಅದನ್ನು ಪಡೆಯಲು ಸಿಐಡಿ ಮುಂದಾಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸಿಟಿ ರವಿ ಅವಾಚ್ಯ ಶಬ್ದ ಬಳಸಿರುವುದು ವಿಡಿಯೋದಲ್ಲಿ ದೃಢ
ಸಿಟಿ ರವಿ
ವಿವೇಕ ಬಿರಾದಾರ
|

Updated on:Jan 17, 2025 | 12:22 PM

Share

ಬೆಂಗಳೂರು, ಜನವರಿ 17: ಬೆಳಗಾವಿ ಅಧಿವೇಶನದಲ್ಲಿ (Belagavi Session) ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ (Laxmi Hebbalkar) ವಿರುದ್ಧ ಪರಿಷತ್ ಸದಸ್ಯ ಸಿಟಿ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ವಿಡಿಯೋದಲ್ಲಿ ದೃಢವಾಗಿದೆ ಎಂದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ, ಈ ಧ್ವನಿ ಸಿಟಿ ರವಿ ಅವರದ್ದೇ, ಅಲ್ಲವೇ ಎಂಬುವುದು ವಿಧಿ ವಿಜ್ಞಾನ ಪ್ರಯೋಗಾಲಯ ಖಚಿತಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಎಪಿಆರ್​) ನೀಡಿದ್ದ ಸದನದ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ನಾಲ್ಕು ಗಂಟೆಯ ವಿಡಿಯೋ ರೆಕಾರ್ಡ್​ನಲ್ಲಿ ಒಟ್ಟು ಏಳು ಬಾರಿ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದಬಂದಿದೆ, ಹೀಗಾಗಿ, ಅವಾಚ್ಯ ಶಬ್ದ ಬಳಸಿದ ಧ್ವನಿ ಪತ್ತೆಗೆ ಸಿಟಿ ರವಿ ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಮುಂದಾಗಿದೆ. ಆದರೆ ತಾನು ಅವಾಚ್ಯ ಶಬ್ದ ಬಳಸಿಲ್ಲ ಎಂದು ಸಿಟಿ ರವಿ ಹೇಳುತ್ತಿದ್ದಾರೆ. ಜೊತೆಗೆ ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ನ್ಯಾಯಾಲಯದ ಮೂಲಕ ವಿಚಾರಣೆಗೆ ಮತ್ತು ವಾಯ್ಸ್ ಸ್ಯಾಂಪಲ್ ಪಡೆಯಲು ಸಿಐಡಿ ಮುಂದಾಗಿದೆ.

ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್​​, ಸಿಟಿ ರವಿ ಕೇಸ್​ನಲ್ಲಿ ನನ್ನ ತೀರ್ಪೇ ಅಂತಿಮ: ಹೊರಟ್ಟಿ

ಏನಿದು ಪ್ರಕರಣ

ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ ಡಿಸೆಂಬರ್​ 19 ರಂದು ಪರಿಷತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಮಾತಿನ ಚಕಮಕಿ ನಡುವೆ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಂಸದೀಯ ಪದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಹಿರೇಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ಕೂಡ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಐಡಿ, ಆ ದಿನ ನಡೆದಿದ್ದ ಘಟನಾವಳಿ ಕುರಿತ ವಿಡಿಯೋ ನೀಡುವಂತೆ ಡಿಎಪಿಆರ್​ಗೆ ಪತ್ರ ಬರೆದಿತ್ತು. ಈ ಕೋರಿಕೆ ಹಿನ್ನೆಲೆಯಲ್ಲಿ ಸಿಐಡಿಗೆ ಡಿಎಪಿಆರ್ ಇಲಾಖೆ ವಿಡಿಯೋ ನೀಡಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ವಿರುದ್ಧ ಫ್ರಸ್ಟ್ರೇಟ್​ ಎಂಬ ಪದ ಬಳಸಿದ್ದೇನೆ ಹೊರತು ನಿಂದಿಸಿಲ್ಲ ಎಂದು ಸಿಟಿ ರವಿ ಅವರು ಹೇಳುತ್ತಿದ್ದಾರೆ. ಅಲ್ಲದೇ ತಾನು ನಿಂದಿಸಿದ್ದಕ್ಕೆ ಅಸಲಿ ವಿಡಿಯೋವೇ ಇಲ್ಲ ಎಂದು ಹೇಳಿದ್ದರು. ಇನ್ನೊಂದಡೆ, ರವಿ ಅವರು ನಿಂದಿಸಿ ಕುರಿತು ಯಾವುದೇ ಆಡಿಯೋ-ವಿಡಿಯೋ ಇಲ್ಲವೆಂದು ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಕೂಡ ತಿಳಿಸಿದ್ದರು.

ವರದಿ: ಪ್ರದೀಪ್ ಚಿಕ್ಕಾಟಿ, TV9 ಬೆಂಗಳೂರು 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:14 am, Fri, 17 January 25