ಬೈಕ್ ಟ್ಯಾಕ್ಸಿ ಆಪ್‌ಗಳ ವಿರುದ್ಧ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಸಮರ: ಸರ್ಕಾರಕ್ಕೆ 15 ದಿನಗಳ ಡೆಡ್‌ಲೈನ್!

ಬೆಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ ಆ್ಯಪ್‌ಗಳನ್ನು ತಕ್ಷಣವೇ ನಿಷೇಧಿಸುವಂತೆ ಒತ್ತಾಯಿಸಿ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಒಕ್ಕೂಟ ಸಾರಿಗೆ ಇಲಾಖೆಗೆ ದೂರು ನೀಡಿದೆ. ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ಈ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ನಗರದಾದ್ಯಂತ ವಾಹನಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಬೈಕ್ ಟ್ಯಾಕ್ಸಿ ಆಪ್‌ಗಳ ವಿರುದ್ಧ ಆಟೋ, ಟ್ಯಾಕ್ಸಿ ಯೂನಿಯನ್‌ಗಳ ಸಮರ: ಸರ್ಕಾರಕ್ಕೆ 15 ದಿನಗಳ ಡೆಡ್‌ಲೈನ್!
ಸಾಂದರ್ಭಿಕ ಚಿತ್ರ
Image Credit source: gettyimages.com
Edited By:

Updated on: Aug 29, 2026 | 2:22 PM

ಮುಖ್ಯಾಂಶಗಳು

  • ಬೈಕ್ ಟ್ಯಾಕ್ಸಿ ಆ್ಯಪ್ ಬಂದ್ ಮಾಡಲು ಸರ್ಕಾರಕ್ಕೆ ಹದಿನೈದು ದಿನಗಳ ಗಡುವು.
  • ವಾಣಿಜ್ಯ ಬಳಕೆಯ ಬೈಕ್ ಟ್ಯಾಕ್ಸಿಗಳಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಿದೆ ಎಂದು ಆರೋಪ.
  • ಆಟೋ ಮತ್ತು ಕ್ಯಾಬ್‌ಗಳಿಗೆ ಒಂದು ನಗರ ಒಂದು ದರ ಜಾರಿಗೆ ಆಗ್ರಹ.

ಬೆಂಗಳೂರು, ಆಗಸ್ಟ್ 29: ಬೆಂಗಳೂರಿನಲ್ಲಿ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಆರೋಪಿಸಲಾದ ಬೈಕ್ ಟ್ಯಾಕ್ಸಿ (Bike taxi) ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಗರದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಸಾರಿಗೆ ಇಲಾಖೆಯ ಬಾಗಿಲು ತಟ್ಟಿವೆ. ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಈ ಕುರಿತು ಸರ್ಕಾರ ಮತ್ತು ಪೊಲೀಸರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳಲು 15 ದಿನಗಳ ಗಡುವು ನೀಡಿದೆ.

ಕಪ್ಪು ಬಾವುಟ ಪ್ರದರ್ಶನ!

ಬೈಕ್ ಟ್ಯಾಕ್ಸಿ ಸೇವೆಗಳನ್ನು ಒದಗಿಸುತ್ತಿರುವ ಮೊಬೈಲ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ಒಕ್ಕೂಟವು ಗಂಭೀರವಾಗಿ ಒತ್ತಾಯಿಸಿದೆ. ಸಾರಿಗೆ ಆಯುಕ್ತರ ಕಚೇರಿ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು, ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ. ಒಂದು ವೇಳೆ ಈ ಅವಧಿಯಲ್ಲಿ ಸೂಕ್ತ ಕ್ರಮ ಜರುಗದಿದ್ದರೆ ತಮ್ಮ ವಾಹನಗಳಿಗೆ ಕಪ್ಪು ಬಾವುಟ ಅಳವಡಿಸಿ ಶಾಂತಿಯುತ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

ಸುರಕ್ಷತೆ ಮತ್ತು ಕಾನೂನುಬಾಹಿರ ಕಾರ್ಯಾಚರಣೆಯ ಆರೋಪ

ಬೈಕ್ ಟ್ಯಾಕ್ಸಿಗಳು ಯಾವುದೇ ಸೂಕ್ತ ಕಾನೂನು ಚೌಕಟ್ಟು ಅಥವಾ ಸಾರಿಗೆ ಪರವಾನಗಿ (ಪರ್ಮಿಟ್) ಇಲ್ಲದೆ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಘಟನೆಗಳು ಆರೋಪಿಸಿವೆ. ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವುದರಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುತ್ತಿದೆ. ಜೊತೆಗೆ ಚಾಲಕರ ಪೊಲೀಸ್ ಪರಿಶೀಲನೆ ಹಾಗೂ ಸೂಕ್ತ ವಿಮೆ ವ್ಯವಸ್ಥೆ ಇಲ್ಲದಿರುವುದು ಅಪಾಯಕಾರಿ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

‘ಒಂದು ನಗರ, ಒಂದೇ ದರ’ ನೀತಿಗೆ ಆಗ್ರಹ

ಆಟೋ ಮತ್ತು ಕ್ಯಾಬ್ ಆ್ಯಪ್‌ಗಳು ಸರ್ಕಾರ ನಿಗದಿಪಡಿಸಿದ ದರಗಳನ್ನು ಮೀರಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ ಎಂದು ಚಾಲಕರು ಆರೋಪಿಸಿದ್ದು, ನಗರದಲ್ಲಿ “ಒಂದು ನಗರ, ಒಂದೇ ದರ” (One City, One Fare) ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Sat, 29 August 26

Loading...
Unable to load recommendations.
Follow Us