ಬೆಂಗಳೂರು: ಪಿಜಿಯಲ್ಲಿ ಸಿಂಪಡಿಸಿದ್ದ ತಿಗಣೆ ಔಷಧಿ ವಾಸನೆಗೆ ಬಿಟೆಕ್ ವಿದ್ಯಾರ್ಥಿ ಸಾವು!
ಬೆಂಗಳೂರಿನ HAL ಠಾಣಾ ವ್ಯಾಪ್ತಿಯಲ್ಲಿ ತಿರುಪತಿ ಮೂಲದ ಬಿಟೆಕ್ ವಿದ್ಯಾರ್ಥಿ ತಾನು ವಾಸವಿದ್ದ ಪಿಜಿಯಲ್ಲಿ ಸಿಂಪಡಿಸಿದ್ದ ತಿಗಣೆ ಔಷಧಿಯ ವಾಸನೆಯಿಂದ ಅಸ್ವಸ್ಥನಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.

ಬೆಂಗಳೂರು, ಅಕ್ಟೋಬರ್ 22: ನಗರದ ಪಿಜಿಯೊಂದರಲ್ಲಿ ಬಿಟೆಕ್ ವಿದ್ಯಾರ್ಥಿ (Student) ನಿಗೂಢವಾಗಿ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ತಿಗಣೆ ಔಷಧಿ ವಾಸನೆಯಿಂದ ಪವನ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ವಿದ್ಯಾರ್ಥಿ ಪವನ್ ಆಂಧ್ರದ ತಿರುಪತಿ ಮೂಲದವನು ಎಂದು ತಿಳಿದುಬಂದಿದೆ. ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೇಸ್ ದಾಖಲಾಗಿದೆ.
ನಡೆದದ್ದೇನು?
ವಿದ್ಯಾರ್ಥಿ ಪವನ್ ವಾಸವಾಗಿದ್ದ ಪಿಜಿಯಲ್ಲಿ ತಿಗಣೆ ಔಷಧಿ ಸಿಂಪಡಣೆ ಮಾಡಿದ್ದರು. ಆ ಬಗ್ಗೆ ಮಾಹಿತಿ ಇಲ್ಲದೆ ಕೊಠಡಿಗೆ ತೆರಳಿದ್ದ. ತಿಗಣೆ ಔಷಧದ ವಿಷಕಾರಿ ವಾಸನೆಯನ್ನು ಉಸಿರಾಡಿದ ಕಾರಣದಿಂದ ಪವನ್ ಅಸ್ವಸ್ಥನಾಗಿ ಕುಸಿದುಬಿದ್ದು, ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪೋಷಕರ ಆಕ್ರಂದನ: ಹೇಳಿದ್ದಿಷ್ಟು
ಹೆಚ್ಎಎಲ್ ಪೊಲೀಸ್ ಠಾಣೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪವನ್ ತಂದೆ ದೇವರಾಜಲು ಮತ್ತು ತಾಯಿ ರಮ್ಯಾ ಟಿವಿ9 ಜೊತೆಗೆ ಮಾತನಾಡಿದ್ದು, ಘಟನೆ ನಡೆದ ವೇಳೆ ಮಗ ಪವನ್ ಕೊನೆ ಬಾರಿ ಕರೆ ಮಾಡಿದ್ದ. ನಿನ್ನೆ ಬೆಳಗ್ಗೆ 7ಕ್ಕೆ ಕರೆ ಮಾಡಿ, ಉಸಿರಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದ ಎಂದರು.
ಇದನ್ನೂ ಓದಿ: ಚಿತ್ರದುರ್ಗ: ಅಜ್ಜಿಗೆ ಫೋನ್ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಮುಖ್ಯ ಶಿಕ್ಷಕ; ವಿಡಿಯೋ ವೈರಲ್
ಪವನ್ಗೆ ಸಮಸ್ಯೆ ಆಗಿದ್ದ ವೇಳೆ ಪಿಜಿಯ ಆ ಕೊಠಡಿಯಲ್ಲಿ ಯಾರು ಇರಲಿಲ್ಲ. ತಿಗಣೆ ಔಷಧಿ ಸಿಂಪಡಿಸಿದ್ದರಿಂದ ಉಸಿರುಗಟ್ಟಿ ಅಸ್ವಸ್ಥನಾಗಿರುವುದಾಗಿ ಹೇಳುತ್ತಿದ್ದಾರೆ. ಆ ಬಳಿಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ನಮ್ಮ ಮಗ ಪವನ್ ಮೃತಪಟ್ಟಿದ್ದಾಗಿ ಹೇಳುತ್ತಿದ್ದಾರೆ ಎಂದಿದ್ದಾರೆ. ಅಶ್ವಥ ನಗರದ ಬಿಎಸ್ಆರ್ ಪಿಜಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿರುವುದಾಗಿ ಆರೋಪ ಮಾಡಿದ್ದಾರೆ.
ಲಾರಿ ಮತ್ತು ಟಾಟಾಏಸ್ ವಾಹನ ಡಿಕ್ಕಿ: ಇಬ್ಬರು ಯುವಕರಿಗೆ ಗಂಭೀರ ಗಾಯ
ಬೆಳಗ್ಗೆ 5:20ರ ಸಮಯದಲ್ಲಿ ಲಾರಿ ಮತ್ತು ಟಾಟಾಏಸ್ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಬೆಂಗಳೂರಿನ ಕೊಡಿಗೇಹಳ್ಳಿ ರೈಲ್ವೆ ರಸ್ತೆಯಲ್ಲಿ ನಡೆದಿದೆ. ವಿಶ್ವಾಸ್ ಮತ್ತು ರವಿ ಗಾಯಗೊಂಡ ಯುವಕರು. ಸಂಜಯ್ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಾದಾಮಿ: ಪತಿ ಕಿರುಕುಳಕ್ಕೆ ಬೇಸತ್ತು 3 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಗಂಭೀರ ಗಾಯಗೊಂಡಿರುವ ವಿಶ್ವಾಸ್, ರವಿ ಬೊಮ್ಮಸಂದ್ರ ನಿವಾಸಿಗಳು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಇಬ್ಬರು ಯುವಕರಿಗೆ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಸಂಜಯ್ನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



