ಚಪ್ಪರಿಸಿ ತಿನ್ನುತ್ತಿದ್ದ ಪನೀರ್ ಟಿಕ್ಕಾ ರೋಲ್​​ನಲ್ಲಿ ಹಲ್ಲಿ ಕಂಡು ಬೆಚ್ಚಿಬಿದ್ದ ಬೆಂಗಳೂರಿನ ಕ್ಯಾಬ್​​ ಚಾಲಕ

ಬೆಂಗಳೂರಿನ ಬೇಕರಿಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಕ್ಯಾಬ್ ಚಾಲಕರೊಬ್ಬರು ಖರೀದಿಸಿದ ಪನೀರ್ ಟಿಕ್ಕಾ ರೋಲ್‌ನಲ್ಲಿ ಹಲ್ಲಿ ಪತ್ತೆಯಾದ ಆರೋಪ ಕೇಳಿಬಂದಿದೆ. ಇದನ್ನು ಸೇವಿಸಿದ ಗ್ರಾಹಕ ಅಸ್ವಸ್ಥರಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದು, ಈ ಘಟನೆ ಬೇಕರಿ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆದರೆ ಪನೀರ್ ಟಿಕ್ಕಾ ರೋಲ್​​ನಲ್ಲಿ ಹಲ್ಲಿ ಪತ್ತೆಯಾಗಿರುವ ಬಗ್ಗೆ ಕ್ಯಾಬ್​​ ಚಾಲಕನ ಬಳಿ ಯಾವುದೇ ಸಾಕ್ಷಿ ಇಲ್ಲ. ಗಾಬರಿಯಿಂದ ಫೋಟೋ ತೆಗೆದುಕೊಳ್ಳಲಾಗಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನಂತೆ.

ಚಪ್ಪರಿಸಿ ತಿನ್ನುತ್ತಿದ್ದ ಪನೀರ್ ಟಿಕ್ಕಾ ರೋಲ್​​ನಲ್ಲಿ ಹಲ್ಲಿ ಕಂಡು ಬೆಚ್ಚಿಬಿದ್ದ ಬೆಂಗಳೂರಿನ ಕ್ಯಾಬ್​​ ಚಾಲಕ
ಸಾಂದರ್ಭಿಕ ಚಿತ್ರ
Image Credit source: AI Image

Updated on: Apr 29, 2026 | 9:39 PM

ಬೆಂಗಳೂರು, ಏಪ್ರಿಲ್​​ 29: ಬೇಕರಿ ತಿಂಡಿಗಳಂದರೆ ಬಹುತೇಕ ಯುವ ಜನತೆಗೆ ಅಚ್ಚುಮೆಚ್ಚು. ಕೆಲವರಿಗಂತೂ ದಿನಕ್ಕೆ ಒಮ್ಮೆಯಾದರೂ ಬೇಕರಿಗೆ ಭೇಟಿ ನೀಡದಿದ್ದರೆ ಸಮಾಧಾನವೇ ಇರೋದಿಲ್ಲ. ಆದರೆ ಬೆಂಗಳೂರಲ್ಲಿ ಜನ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದ್ದು, ಬೇಕರಿಯಲ್ಲಿ ಖರೀದಿಸಿದ ಪನೀರ್ ಟಿಕ್ಕಾ ರೋಲ್‌ನಲ್ಲಿ ಹಲ್ಲಿ ಕಂಡುಬಂದಿರುವ ಘಟನೆ ಮಾಗಡಿ ಮುಖ್ಯ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪ ನಡೆದಿದೆ. ಇದನ್ನು ಸೇವಿಸಿದ್ದ 32 ವರ್ಷದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾನೆ.

ಘಟನೆ ಏನು?

ಅಗ್ರಹಾರ ದಾಸರಹಳ್ಳಿಯ ನಿವಾಸಿಯಾಗಿರುವ ಕ್ಯಾಬ್​​ ಚಾಲಕನಿಗೆ ಏಪ್ರಿಲ್ 25ರಂದು ಮಧ್ಯಾಹ್ನ ಊಟ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಂಜೆ ವೇಳೆಗೆ ಬೇಕರಿಗೆ ತೆರಳಿದ್ದ ಆತ ಮೊದಲು ಹನಿ ಕೇಕ್ ತಿಂದಿದ್ದಾನೆ. ಬಳಿಕ ಚಿಕನ್ ರೋಲ್ ಆರ್ಡರ್​​ ಮಾಡಿದ್ದು, ಈ ವೇಳೆ ಅದಿಲ್ಲ ಎಂಬ ಉತ್ತರ ಬೇಕರಿ ಸಿಬ್ಬಂದಿಯಿಂದ ಬಂದಿದೆ. ಹೀಗಾಗಿ ಪನೀರ್ ಟಿಕ್ಕಾ ರೋಲ್ ನೀಡುವಂತೆ ಚಾಲಕ ಕೇಳಿದ್ದಾರೆ. ರೋಲ್​​ನ ಸ್ವಲ್ಪ ತಿಂದ ಬಳಿಕ ಕ್ಯಾಬ್​ ಚಾಲಕ ಅಕ್ಷರಶಃ ಬೆಚ್ಚಿಬಿದ್ದಿದ್ದು, ಅದರೊಳಗೆ ಹಲ್ಲಿ ಇರೋದನ್ನು ಗಮನಿಸಿದ್ದಾರೆ. ಈ ಬಗ್ಗೆ ಬೇಕರಿ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅವರಿಂದ ಉಡಾಫೆ ಉತ್ತರ ಬಂದಿದೆಯಂತೆ.

ಇದನ್ನೂ ಓದಿ: ಬೈಕ್ ಪಾರ್ಕ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಪಿಯುಸಿ ವಿದ್ಯಾರ್ಥಿ ಸಾವು!

ಬಳಿಕ ಕ್ಯಾಬ್​​ ಚಾಲಕ ವಾಂತಿಮಾಡಿಕೊಳ್ಳಲು ಆರಂಭಿಸಿದ್ದು, ಆತನನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜೀರ್ಣ ಹಾಗೂ ಅತಿಸಾರ ಸಮಸ್ಯೆಯಿಂದ ಆತ ಬಳಲುತ್ತಿರೋದಾಗಿ ವೈದ್ಯರು ತಿಳಿಸಿದ್ದು, 24 ಗಂಟೆಗಳ ಕಾಲ ನಿಗಾದ ಅವಶ್ಯಕತೆ ಇದೆ ಎಂದಿದ್ದಾರೆ. ಆದರೆ ಆಸ್ಪತ್ರೆ ವೆಚ್ಚವನ್ನು ಭರಿಸಲು ಬೇಕರಿ ಸಿಬ್ಬಂದಿ ನಿರಾಕರಿಸಿದ್ದು, ತಮ್ಮ ಪರಿಚಯದ ಇನ್ನೊಂದು ಆಸ್ಪತ್ರೆಗೆ ಹೋಗುವಂತೆ ಹೇಳಿರೋದಾಗಿ ಕ್ಯಾಬ್​​ ಚಾಲಕ ಆರೋಪಿಸಿದ್ದಾರೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪನೀರ್ ಟಿಕ್ಕಾ ರೋಲ್​​ನಲ್ಲಿ ಹಲ್ಲಿ ಪತ್ತೆಯಾಗಿರುವ ಬಗ್ಗೆ ಕ್ಯಾಬ್​​ ಚಾಲಕನ ಬಳಿ ಯಾವುದೇ ಸಾಕ್ಷಿ ಇಲ್ಲವಂತೆ. ಗಾಬರಿಯಿಂದ ಫೋಟೋ ತೆಗೆದುಕೊಳ್ಳಲಾಗಿಲ್ಲ ಎಂದು ಆತ ಪೊಲೀಸರಿಗೆ ಆತ ತಿಳಿಸಿದ್ದಾನೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us