ಸಿಲಿಕಾನ್ ಸಿಟಿಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ; ಬೆಂಗಳೂರು- ಬನ್ನೇರುಘಟ್ಟ ಮುಖ್ಯರಸ್ತೆ ಜಲಾವೃತ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಅದೇ ರೀತಿ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಬಳಿ ಬಿಬಿಎಂಪಿ ಹಾಗೂ ಬಿಡಬ್ಲೂಎಸ್ಎಸ್ಬಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಮಳೆ ನೀರು ಹೊರಹೋಗಲು ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲದೆ ರಸ್ತೆ ಕೆರೆಯಂತೆ ಮಾರ್ಪಾಡಾದ್ರೆ, ವಾಹನ ಸವಾರರು ಮಳೆ ನೀರಿನಲ್ಲಿ ಸಂಚರಿಸಲಾಗದೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಹೈರಾಣಾದರು.
ಬೆಂಗಳೂರು, ಸೆ.06: ಕಳೆದ ರಾತ್ರಿ ಸುರಿದ ಮಹಾ ಮಳೆಗೆ ಬೆಂಗಳೂರಿನ (Bengaluru) ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಅದೇ ರೀತಿ ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ಕಾಳೇನ ಅಗ್ರಹಾರದ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಸಾಕಷ್ಟು ಪರದಾಟವನ್ನು ನಡೆಸುವಂತಾಯಿತು. ರಸ್ತೆಯಲ್ಲಿ ಸುಮಾರು ಮೂರ್ನಾಲ್ಕು ಅಡಿಗಳಷ್ಟು ನೀರು ನಿಂತು ರಸ್ತೆ ಜಲಾವೃತಗೊಂಡಿತ್ತು. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ಮಳೆ ನೀರು ಹೊರಹೋಗಲು ರಾಜಕಾಲುವೆ ಹಾಗೂ ಡ್ರೈನೇಜ್ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ನಿಂತಿದ್ದು, ವಾಹನ ಸವಾರರು ಪರದಾಟ ನಡೆಸಿದರು.
ಅಲ್ಲದೆ ಬಿಬಿಎಂಪಿಯ ರಸ್ತೆ ಕಾಮಗಾರಿ, ಬಿಡಬ್ಲ್ಯೂಎಸ್ಎಸ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದರಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡು ಸವಾರರು ರಸ್ತೆ ದಾಟಲು ಹರಸಾಹಸ ಪಟ್ಟಿದ್ದಾರೆ. ಬೆಳಿಗ್ಗೆಯಿಂದಲೂ ಶಾಲಾ-ಕಾಲೇಜು ಹಾಗೂ ಆಫೀಸ್ಗಳಿಗೆ ತೆರಳುವ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲಾಗದೆ ಸಂಕಷ್ಟ ಎದುರಿಸಿದ್ದು, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರಹಾಕಿದರು. ಇನ್ನು ಜಲಾವೃತಗೊಂಡಿದ್ದ ರಸ್ತೆಯಲ್ಲಿ ಬೈಕ್, ಆಟೋ, ಕಾರುಗಳು ಕೆಟ್ಟು ನಿಂತು ಅವಸ್ಥೆ ಪಡುವಂತಾಯಿತು.
ಇದನ್ನೂ ಓದಿ:ಬ್ರ್ಯಾಂಡ್ ಬೆಂಗಳೂರು ಮಿನಿಸ್ಟ್ರು ಬಾಯಲ್ಲಿ ಮಾತ್ರ! ಬೆಂಗಳೂರು ನಗರದಲ್ಲಿ ಮಳೆಯಾದರೆ ವಾಹನ ಸವಾರರಿಗೆ ಅದು ದುಸ್ವಪ್ನ
ಜಲಾವೃತಗೊಂಡ ಆಂಬ್ಯುಲೆನ್ಸ್
ಬೆಂಗಳೂರು ಕಡೆಯಿಂದ ಬನ್ನೇರುಘಟ್ಟ ಮಾರ್ಗವಾಗಿ ಬಂದ ಆಂಬ್ಯುಲೆನ್ಸ್ ಜಲಾವೃತಗೊಂಡು ರಸ್ತೆಯಲ್ಲಿ ಸಂಚರಿಸಲಾಗದೆ ಪರದಾಟ ನಡೆಸುವಂತಾಯಿತು. ಒಂದೆಡೆ ಜಲಾವೃತವಾದ ರಸ್ತೆ, ಇನ್ನೊಂದೆಡೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಕೆಲ ನಿಮಿಷಗಳ ಕಾಲ ಸಮಸ್ಯೆ ಎದುರಿಸಿದರು. ರಾತ್ರಿಯಿಂದ ರಸ್ತೆ ಜಲಾವೃತಗೊಂಡು ಸಮಸ್ಯೆ ಎದುರಾದ್ರು ಸಹ ಬಿಬಿಎಂಪಿ ಹಾಗೂ ಬಿಡಬ್ಲೂಎಸ್ಎಸ್ಬಿಯ ಯಾವೊಬ್ಬ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಸರಿಪಡಿಸುವ ಕೆಲಸಕ್ಕೆ ಮುಂದಾಗಲಿಲ್ಲ. ಬೆಳಿಗ್ಗೆಯಿಂದಲೂ ಸಂಚಾರಿ ಪೋಲೀಸರು ಸ್ಥಳದಲ್ಲಿ ಟ್ರಾಫಿಕ್ ಕ್ಲಿಯರ್ ಮಾಡುವುದರ ಜೊತೆಗೆ ಜೆಸಿಬಿ ಮೂಲಕ ನೀರು ಹೊರ ಹೋಗುವಂತಹ ವ್ಯವಸ್ಥೆ ಮಾಡಿದರು. ಸಮಸ್ಯೆಯ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೆ ಸ್ಥಳಕ್ಕಾಗಮಿಸಿದ ಬೊಮ್ಮನಹಳ್ಳಿ ಬಿಬಿಎಂಪಿ ಅಧಿಕಾರಿ ಕೃಷ್ಣಕುಮಾರ್, ಇದೇ ಮೊದಲನೇ ಬಾರಿಗೆ ಈ ರೀತಿಯ ಸಮಸ್ಯೆಯಾಗಿದೆ ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ಪ್ರತಿಬಾರಿ ಮಳೆ ಬಂದಂತಹ ಸಂಧರ್ಭದಲ್ಲಿ ಬೆಂಗಳೂರಿನಲ್ಲಿ ಒಂದಿಲ್ಲೊಂದು ಅವಾಂತರಗಳು ಸೃಷ್ಟಿಯಾಗುತ್ತಿದೆ. ಸಮಸ್ಯೆ ಬಂದಾಗ ಎಲ್ಲವನ್ನು ಸರಿಪಡಿಸುತ್ತೇವೆ ಎಂದು ಹೇಳುವ ಬಿಬಿಎಂಪಿ ಅಧಿಕಾರಿಗಳ ಮಾತು ಬರಿ ಹೇಳಿಕೆಗಷ್ಟೇ ಸೀಮತವಾಗಿದ್ದು, ಬೆಂಗಳೂರಿನಲ್ಲಿ ಸೃಷ್ಟಿಯಾಗುತ್ತಿರುವ ಅವಾಂತರಗಳು ಮಾತ್ರ ಕಡಿಮೆಯಾಗಿಲ್ಲ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ