ವಿಧಾನಸೌಧದಲ್ಲಿ ಪುಸ್ತಕಮೇಳ ಹೆಸರಿನಲ್ಲಿ ದುಂದುವೆಚ್ಚ: 5 ದಿನಕ್ಕೆ ಬರೋಬ್ಬರಿ 4.50 ಕೋಟಿ ರೂ ಖರ್ಚು!
ಕರ್ನಾಟಕ ವಿಧಾನಸಭಾ ಸಚಿವಾಲಯವು ದೇಶದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿತ್ತು. ಫೆ.27ರಿಂದ ಮಾರ್ಚ್ 3ರವರೆಗೆ ನಡೆದಿದ್ದ ಪುಸ್ತಕಮೇಳಕ್ಕೆ ಬರೋಬ್ಬರಿ 4.50 ಕೋಟಿ ರೂ. ಹಣ ವೆಚ್ಚವಾಗಿದೆ. ಆ ಮೂಲಕ ವಿಧಾನಸೌಧದ ಸಚಿವಾಲಯದಿಂದ ದುಂದುವೆಚ್ಚ ಮಾಡಿರುವುದು ಸದ್ಯ ಬಹಿರಂಗವಾಗಿದೆ.

ಬೆಂಗಳೂರು, ಅಕ್ಟೋಬರ್ 13: ವಿಧಾನಸೌಧದಲ್ಲಿ (Vidhana Soudha) ಫೆ.27ರಿಂದ ಮಾರ್ಚ್ 3ರವರೆಗೆ ನಡೆದಿದ್ದ 5 ದಿನದ ಪುಸ್ತಕಮೇಳಕ್ಕೆ (book mela) ಬರೋಬ್ಬರಿ 4.50 ಕೋಟಿ ರೂ. ಹಣ ವೆಚ್ಚವಾಗಿದೆ. ಆ ಮೂಲಕ ಅಭಿವೃದ್ಧಿ ಕೆಲಸಕ್ಕೆ ಹಣವಿಲ್ಲ ಎನ್ನುವ ಸರ್ಕಾರದಿಂದ ದುಂದುವೆಚ್ಚ ಉಂಟಾಗಿರುವುದು ಬಹಿರಂಗಗೊಂಡಿದೆ. ಪುಸ್ತಕಮೇಳ ಹೆಸರಿನಲ್ಲಿ ವಿಧಾನಸೌಧದ ಸಚಿವಾಲಯ ಬೇಕಾಬಿಟ್ಟಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.
ಐದು ದಿನದ ಪುಸ್ತಕಮೇಳಕ್ಕೆ ಬರೋಬ್ಬರಿ 4.50 ಕೋಟಿ ರೂ. ವೆಚ್ಚ ಖರ್ಚಾಗಿರುವುದು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ದುಂದುವೆಚ್ಚ ಬಯಲಾಗಿದೆ. 4.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಯಾವೆಲ್ಲಾ ಕಾರ್ಯಕ್ರಮಗಳಿಗೆ ಎಷ್ಟು ಖರ್ಚು?
- ಅತಿಥಿಗಳ ಸನ್ಮಾನಕ್ಕೆ 7 ರೇಷ್ಮೆ ಸಾಲುಗಳಿಗೆ 88 ಸಾವಿರ ರೂ. ಖರ್ಚು
- ಅತಿಥಿಗಳ ವಿಮಾನಯಾನದ ವೆಚ್ಚ 87,429 ರೂ
- ಗಣ್ಯರಿಗೆ ಉಪಾಹಾರದ ವ್ಯವಸ್ಥೆಗಾಗಿ 83,190 ರೂ. ವೆಚ್ಚ
- ಪುಸ್ತಕಮೇಳಕ್ಕೆ ಆಗಮಿಸುವ ಗಣ್ಯರ ವಾಸ್ತವ್ಯಕ್ಕಾಗಿ 1.56 ಕೋಟಿ ರೂ. ವೆಚ್ಚ
- ಪುಸ್ತಕ ಬಿಡುಗಡೆ, ಕವಿಗೋಷ್ಠಿ ಆಯೋಜಿಸಲು 98 ಸಾವಿರ ರೂ. ಖರ್ಚು
- ಪುಸ್ತಕಮೇಳ ಸಂದರ್ಭದಲ್ಲಿ ನಾಟಕ ಪ್ರದರ್ಶನಕ್ಕೆ 98 ಸಾವಿರ ರೂ. ವೆಚ್ಚ
- ಪುಸ್ತಕಮೇಳದಲ್ಲಿ ಬಹುಮಾನ ವಿತರಣೆಗಾಗಿ 21 ಲಕ್ಷ ರೂ ವೆಚ್ಚ
ಇದನ್ನೂ ಓದಿ: ವಿಧಾನಸೌಧದ ಪುಸ್ತಕ ಮೇಳಕ್ಕೆ ಓದುಗರಿಂದ ಭರ್ಜರಿ ರೆಸ್ಪಾನ್ಸ್: ವೀಕೆಂಡ್ನಲ್ಲಿ ಜನರಿಂದ ತುಂಬಿ ತುಳುಕಿದ ಶಕ್ತಿ ಸೌಧ
ಫೆ.27ರಿಂದ ಮಾರ್ಚ್ 3ರವರೆಗೆ ವಿಧಾನಸೌಧ ಆವರಣದಲ್ಲಿ 5 ದಿನ ಪುಸ್ತಕ ಮೇಳ ನಡೆದಿತ್ತು. ಆ ಮೂಲಕ ಮೊದಲ ಬಾರಿಗೆ ಶಕ್ತಿಸೌಧದಲ್ಲಿ ಸಾಹಿತ್ಯ ಜಾತ್ರೆ ಆಯೋಜಿಸಲಾಗಿತ್ತು. ಪುಸ್ತಕ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಈ ವೇಳೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಪುಸ್ತಕ ಪ್ರಿಯರಿಗೆ ಇದೊಂದು ಹಬ್ಬವಾಗಿದ್ದು, ಓದುವುದರಿಂದ ಮಾತ್ರ ಜ್ಞಾನ ವಿಕಾಸ ಆಗುತ್ತದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸಾರ್ವಜನಿಕರಿಗೂ ಇನ್ಮುಂದೆ ವಿಧಾನಸೌಧ ವೀಕ್ಷಣೆಗೆ ಅವಕಾಶ: ರಾಜ್ಯ ಸರ್ಕಾರದ ವಿನೂತನ ಪ್ರಯತ್ನ
ಪುಸ್ತಕ ಮೇಳದಲ್ಲಿ ರಾಜ್ಯ ಹಾಗೂ ಅಂತಾರಾಜ್ಯ ಸೇರಿ ಸುಮಾರು 120ಕ್ಕೂ ಹೆಚ್ಚು ಪ್ರಕಾಶಕರು ಭಾಗಿ ಆಗಿದ್ದರು. ಪ್ರತಿನಿತ್ಯ ಸಂಜೆ 5 ಗಂಟೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿತ್ತು. 150 ಮಳಿಗೆ ತೆರೆಯಲು ಮಾತ್ರ ಅವಕಾಶ ನೀಡಲಾಗಿತ್ತು. ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



