ಡ್ರಗ್ ಸಪ್ಲೈ ಮಾಡುತ್ತಿದ್ದ ಆರೋಪಿ ಮೆಸ್ಸಿ ಬಂಧನ; ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಕೊಡುತ್ತಿದ್ದ ಭಟ್ಕಳ ಮೂಲದ ವ್ಯಕ್ತಿ
ಭಟ್ಕಳ ಮೂಲದ ಮೆಸ್ಸಿ ಕಳೆದ ಒಂದು ವರ್ಷದಿಂದ ತಲೆಮರಿಸಿಕೊಂಡಿದ್ದು, ಮೋಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್ ಎಂಬ ಕುಖ್ಯಾತಿಯನ್ನು ಹೊತ್ತಿದ್ದ.
ಬೆಂಗಳೂರು: ಡ್ರಗ್ ಜಾಲದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ವಿರೇನ್ ಖನ್ನಾಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆರೋಪಿ ಮೆಸ್ಸಿ ಎಂಬಾತನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ಮೂಲದ ಮೆಸ್ಸಿ ಕಳೆದ ಒಂದು ವರ್ಷದಿಂದ ತಲೆಮರಿಸಿಕೊಂಡಿದ್ದು, ಮೋಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್ ಎಂಬ ಕುಖ್ಯಾತಿಯನ್ನು ಹೊತ್ತಿದ್ದ. ಮೆಸ್ಸಿ ಬಹುಪಾಲು ಸೆಲೆಬ್ರಿಟಿ ಡ್ರಗ್ಸ್ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಿದ್ದು, ಸದ್ಯ ಆತನನ್ನು ವಶಕ್ಕೆ ಪಡೆಯಲಾಗಿದೆ.
ಮಾದಕ ವಸ್ತು ಜಾಲದಲ್ಲಿ ತೊಡಗಿಕೊಂಡಿರುವವರನ್ನು ಮಟ್ಟಹಾಕಲು ಬೆಂಗಳೂರು ಪೊಲೀಸರು ಕಾರ್ಯಚರಣೆ ಆರಂಭಿಸಿದ್ದಾರೆ. ಈಗಾಗಲೇ ಸಿಕ್ಕಿಬಿದ್ದಿರುವ ಡ್ರಗ್ ಪೆಡ್ಲರ್ಗಳು ನೀಡಿದ ಮಾಹಿತಿ ಆಧರಿಸಿ ಸೋಮವಾರ (ಆ.30) ಬೆಳಗ್ಗೆಯೇ ಕೆಲವರ ಮನೆ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಮಾಡೆಲ್ ಸೋನಿಯಾ, ಉದ್ಯಮಿ ಭರತ್ ಹಾಗೂ ಡಿಜೆ ವಚನ್ ಚಿನ್ನಪ್ಪ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾದಕವಸ್ತುಗಳು ಪತ್ತೆ ಆಗಿದ್ದವು. ಹಾಗಾಗಿ ಭರತ್ ಹಾಗೂ ವಚನ್ ಚಿನ್ನಪ್ಪ ಅವರನ್ನು ಬಂಧಿಸಲಾಗಿತ್ತು. ಆದರೆ ಬಂಧನ ಆಗುವುದಕ್ಕೂ ಮುನ್ನ ಮಾಡೆಲ್ ಸೋನಿಯಾ ಮಾತ್ರ ಕಣ್ಣಾಮಚ್ಚಾಲೆ ಆಡಿದ್ದರು.
ಸೋನಿಯಾ ನಿವಾಸದಲ್ಲಿ ಪೊಲೀಸರಿಗೆ 40 ಗ್ರಾಂ ಗಾಂಜಾ ಪತ್ತೆ ಆಗಿತ್ತು. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಇರಲಿಲ್ಲ. ನಾಪತ್ತೆ ಆಗಿದ್ದ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದರು. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನ ಮಾಡಿದ ಸೋನಿಯಾ ಅವರು ಬಾಯ್ಫ್ರೆಂಡ್ ಜೊತೆ ಪರಾರಿ ಆಗಿದ್ದರು.
ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಸೋನಿಯಾ ಬೆಂಗಳೂರಿನ ಖಾಸಗಿ ಹೋಟೆಲ್ಗೆ ತೆರಳಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಅವರು ಪುರುಷರ ಶೌಚಾಲಯಕ್ಕೆ ತೆರಳಿ ಅಡಗಿಕೊಂಡಿದ್ದರು. ಅಂತಿಮವಾಗಿ ಮಹಿಳಾ ಕಾನ್ಸ್ಟೇಬಲ್ ಸಹಾಯದಿಂದ ಅವರನ್ನು ಹೊರಗೆ ಕರೆತರಲಾಯಿತು. ಮಾಧ್ಯಮದ ಮುಂದೆ ಬಂದರೆ ಮರ್ಯಾದೆ ಹೋಗುತ್ತದೆ ಎಂದು ಅವರು ಇಷ್ಟೆಲ್ಲ ಡ್ರಾಮಾ ಮಾಡಿದರು.
ಇದನ್ನೂ ಓದಿ: ಪುರುಷರ ಟಾಯ್ಲೆಟ್ನಲ್ಲಿ ಅಡಗಿ ಕುಳಿತಿದ್ದ ಡ್ರಗ್ಸ್ ಆರೋಪಿ ಸೋನಿಯಾ; ಕಡೆಗೂ ಪೊಲೀಸ್ ಬಲೆಗೆ ಬಿದ್ದ ಮಾಡೆಲ್
(Bengaluru CCB Police Messi alleged drug supplier)