ಪುರುಷರ ಟಾಯ್ಲೆಟ್ನಲ್ಲಿ ಅಡಗಿ ಕುಳಿತಿದ್ದ ಡ್ರಗ್ಸ್ ಆರೋಪಿ ಸೋನಿಯಾ; ಕಡೆಗೂ ಪೊಲೀಸ್ ಬಲೆಗೆ ಬಿದ್ದ ಮಾಡೆಲ್
ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಸೋನಿಯಾ ಬೆಂಗಳೂರಿನ ಖಾಸಗಿ ಹೋಟೆಲ್ಗೆ ತೆರಳಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಅವರು ಪುರುಷರ ಶೌಚಾಲಯಕ್ಕೆ ತೆರಳಿ ಅಡಗಿಕೊಂಡಿದ್ದರು.
ಮಾದಕ ವಸ್ತು ಜಾಲದಲ್ಲಿ ತೊಡಗಿಕೊಂಡಿರುವವರನ್ನು ಮಟ್ಟಹಾಕಲು ಬೆಂಗಳೂರು ಪೊಲೀಸರು ಕಾರ್ಯಚರಣೆ ಆರಂಭಿಸಿದ್ದಾರೆ. ಈಗಾಗಲೇ ಸಿಕ್ಕಿಬಿದ್ದಿರುವ ಡ್ರಗ್ ಪೆಡ್ಲರ್ಗಳು ನೀಡಿದ ಮಾಹಿತಿ ಆಧರಿಸಿ ಸೋಮವಾರ (ಆ.30) ಬೆಳಗ್ಗೆಯೇ ಕೆಲವರ ಮನೆ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು. ಮಾಡೆಲ್ ಸೋನಿಯಾ, ಉದ್ಯಮಿ ಭರತ್ ಹಾಗೂ ಡಿಜೆ ವಚನ್ ಚಿನ್ನಪ್ಪ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾದಕವಸ್ತುಗಳು ಪತ್ತೆ ಆಗಿವೆ. ಹಾಗಾಗಿ ಭರತ್ ಹಾಗೂ ವಚನ್ ಚಿನ್ನಪ್ಪ ಅವರನ್ನು ಬಂಧಿಸಲಾಯಿತು. ಆದರೆ ಬಂಧನ ಆಗುವುದಕ್ಕೂ ಮುನ್ನ ಮಾಡೆಲ್ ಸೋನಿಯಾ ಕಣ್ಣಾಮಚ್ಚಾಲೆ ಆಡಿದ್ದಾರೆ.
ಸೋನಿಯಾ ನಿವಾಸದಲ್ಲಿ ಪೊಲೀಸರಿಗೆ 40 ಗ್ರಾಂ ಗಾಂಜಾ ಪತ್ತೆ ಆಯಿತು. ಬೆಂಗಳೂರಿನ ರಾಜಾಜಿನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೋನಿಯಾ ಇರಲಿಲ್ಲ. ನಾಪತ್ತೆ ಆಗಿದ್ದ ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದರು. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಪ್ರಯತ್ನ ಮಾಡಿದ ಸೋನಿಯಾ ಅವರು ಬಾಯ್ಫ್ರೆಂಡ್ ಜೊತೆ ಪರಾರಿ ಆಗಿದ್ದರು.
ದಾಳಿಯ ಸುಳಿವು ಸಿಗುತ್ತಿದ್ದಂತೆಯೇ ಸೋನಿಯಾ ಬೆಂಗಳೂರಿನ ಖಾಸಗಿ ಹೋಟೆಲ್ಗೆ ತೆರಳಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರೆಚಲು ಅವರು ಪುರುಷರ ಶೌಚಾಲಯಕ್ಕೆ ತೆರಳಿ ಅಡಗಿಕೊಂಡಿದ್ದರು. ಅಂತಿಮವಾಗಿ ಮಹಿಳಾ ಕಾನ್ಸ್ಟೇಬಲ್ ಸಹಾಯದಿಂದ ಅವರನ್ನು ಹೊರಗೆ ಕರೆತರಲಾಯಿತು. ಮಾಧ್ಯಮದ ಮುಂದೆ ಬಂದರೆ ಮರ್ಯಾದೆ ಹೋಗುತ್ತದೆ ಎಂದು ಅವರು ಇಷ್ಟೆಲ್ಲ ಡ್ರಾಮಾ ಮಾಡಿದರು.
ಡಿ.ಜೆ. ಹಳ್ಳಿ ಠಾಣೆಯಲ್ಲಿ ಸೋನಿಯಾ ಅವರ ವಿಚಾರಣೆ ನಡೆಸಲಾಗುತ್ತಿದೆ. ಅವರ ಪರ ವಕೀಲರು ಕೂಡ ಠಾಣೆಗೆ ಆಗಮಿಸಿದ್ದಾರೆ. ಸದ್ಯದಲ್ಲೇ ಸೋನಿಯಾರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ಪೊಲೀಸರ ವಶದಲ್ಲಿ ಇರುವ ಆರೋಪಿಗಳಿಗೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಜೊತೆ ಸಂಪರ್ಕ ಇತ್ತು ಎನ್ನಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಿದರೆ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿಕೆ ನೀಡಿದ್ದಾರೆ. ‘ರಾಜಕೀಯ ಒತ್ತಡಕ್ಕೆ ಪೊಲೀಸರು ಮಣಿಯುವುದಿಲ್ಲ. ಯಾರನ್ನೂ ತಪ್ಪಿಸಿಕೊಳ್ಳಲು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಕೂಡ ರಾಗಿಣಿ ದ್ವಿವೇದಿ ಸೇರಿದಂತೆ ಅನೇಕರು ಬಂಧಿಸಲಾಗಿತ್ತು. ಸಿನಿಮಾ, ಕಿರುತೆರೆ ಕ್ಷೇತ್ರದ ಹಲವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಇದನ್ನೂ ಓದಿ:
ಶಾರುಖ್ ಸ್ಟಾರ್ ಆಗಲು ಕಾರಣವೇ ಡ್ರಗ್ಸ್ ಕೇಸ್ ಆರೋಪಿ ಅರ್ಮಾನ್ ಕೊಹ್ಲಿ; ಇಲ್ಲಿದೆ ಪೂರ್ತಿ ಚರಿತ್ರೆ
Published On - 4:34 pm, Mon, 30 August 21