
ಬೆಂಗಳೂರು, ಸೆಪ್ಟೆಂಬರ್ 1: ಬೆಂಗಳೂರಿನಲ್ಲಿ (Bengaluru) ಚಿಕನ್ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ 5 ರೂಪಾಯಿ ಶುಲ್ಕ ನಿಗದಿ ಮಾಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಕ್ರಮವನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪ್ರತಿಭಟನೆಗೆ ಮುಂದಾಗಿದೆ. ಸೆಪ್ಟೆಂಬರ್ 3 ಮತ್ತು 4ರಂದು ನಗರದ ಚಿಕನ್ ಅಂಗಡಿಗಳು ಬಂದ್ ಆಚರಿಸಲು ನಿರ್ಧರಿಸಿರುವುದಾಗಿ ಸಂಘಟನೆ ತಿಳಿಸಿದೆ. ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 3ರಂದು ಚಿಕನ್ ಅಂಗಡಿಗಳನ್ನು ಬಂದ್ ಮಾಡಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಸೆಪ್ಟೆಂಬರ್ 4ರಂದು ಬೆಂಗಳೂರಿನಾದ್ಯಂತ ಚಿಕನ್ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಅಸೋಸಿಯೇಷನ್ ಹೇಳಿರುವಂತೆ, ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 7 ಲಕ್ಷ ಕೆಜಿ ಚಿಕನ್ ಮಾರಾಟವಾಗುತ್ತಿದ್ದು, 2ರಿಂದ 3 ಲಕ್ಷ ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಒಂದು ಚಿಕನ್ ಅಂಗಡಿಯಿಂದ ದಿನಕ್ಕೆ ಸರಾಸರಿ 30 ಕೆಜಿ ತ್ಯಾಜ್ಯ ಹೊರಬರುತ್ತದೆ ಎಂದು ಸಂಘಟನೆ ತಿಳಿಸಿದೆ.
ಪ್ರತಿ ಕೆಜಿ ಚಿಕನ್ ತ್ಯಾಜ್ಯಕ್ಕೆ 5 ರೂ. ದರ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ, ಒಂದು ಅಂಗಡಿಯವರು ದಿನಕ್ಕೆ ಸುಮಾರು 150 ರೂ. ಹಾಗೂ ತಿಂಗಳಿಗೆ ಸುಮಾರು 4,500 ರೂ. ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ವಿರೋಧಿಸಿ ಅಂಗಡಿ ಮಾಲೀಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಹೊಸ ರೂಲ್ಸ್, ಶುಲ್ಕವೂ ನಿಗದಿ
ಈ ಕ್ರಮದಿಂದ ಬೆಂಗಳೂರಿನ ಸುಮಾರು 6ರಿಂದ 7 ಸಾವಿರ ಚಿಕನ್ ಅಂಗಡಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ತಿಳಿಸಿದೆ. ತ್ಯಾಜ್ಯ ವಿಲೇವಾರಿ ಶುಲ್ಕದ ವಿಚಾರದಲ್ಲಿ BSWML ವಿರುದ್ಧ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ