ಸಿನಿಮಾ ಸ್ಟೈಲ್​​ನಲ್ಲಿ 31 ಲಕ್ಷ ದೋಚಿದ್ದವರು ಅಂದರ್​​: ಖಾಕಿ ಖೆಡ್ಡಾಕ್ಕೆ ಬಿದ್ದ ಐವರು

ಬೆಂಗಳೂರಿನ ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಸಿನಿಮಾ ಶೈಲಿಯಲ್ಲಿ ನಡೆದ 31 ಲಕ್ಷ ರೂ. ದರೋಡೆ ಪ್ರಕರಣದಲ್ಲಿ, ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸಿ, ಆರೋಪಿಗಳನ್ನು ಬಲೆಗೆ ಬೀಳಿಸಲಾಗಿದೆ. ಬಂಧಿತರಿಂದ 10 ಲಕ್ಷ ರೂ. ಜಪ್ತಿ ಮಾಡಲಾಗಿದ್ದು, ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಸಿನಿಮಾ ಸ್ಟೈಲ್​​ನಲ್ಲಿ 31 ಲಕ್ಷ ದೋಚಿದ್ದವರು ಅಂದರ್​​: ಖಾಕಿ ಖೆಡ್ಡಾಕ್ಕೆ ಬಿದ್ದ ಐವರು
ಬಂಧಿತ ಆರೋಪಿಗಳು
Image Credit source: Tv9 Kannada
Edited By:

Updated on: Mar 17, 2026 | 7:33 PM

ಆನೇಕಲ್​​, ಮಾರ್ಚ್​ 17: ಬೆಂಗಳೂರು ಹೊರವಲಯ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಕಳೆದ ಫೆಬ್ರವರಿ 1ರಂದು ಸಿನಿಮಾ ಸ್ಟೈಲ್​​ನಲ್ಲಿ ರಾಬರಿ ನಡೆಸಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಘಟನೆಯ ದೃಶ್ಯದ ಆಧಾರದಲ್ಲಿ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಉಡಾನ್ ಕಂಪನಿಯ ಬ್ರಾಂಚ್​​ಗಳಲ್ಲಿ ಹಣ ಕಲೆಕ್ಷನ್ ಮಾಡಿಕೊಂಡು ಹೋಗುತ್ತಿದ್ದ ಪ್ರೈವೇಟ್ ಏಜೆನ್ಸಿಯ ಸಿಬ್ಬಂದಿ ಶ್ರೀಕೈಲಾಸ್ ಎಂಬವರನ್ನು 2 ಬೈಕ್​​ಗಳಲ್ಲಿ ಹಿಂಬಾಲಿಸಿದ್ದ ನಾಲ್ವರು ದುಷ್ಕರ್ಮಿಗಳ ತಂಡ,  ಬೈಕ್​​ ಅಡ್ಡಗಟ್ಟಿ 31,38,625 ರೂ. ಹಣವನ್ನ ರಾಬರಿ ಮಾಡಿ ಎಸ್ಕೇಪ್​​ ಆಗಿತ್ತು. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿಗಳ ಬಂಧನಕ್ಕೆ 3 ತಂಡಗಳನ್ನ ರಚನೆ ಮಾಡಿದ್ದರು. ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ನಿಖಿಲ್, ಪ್ರಶಾಂತ್ ಅಲಿಯಾಸ್​​ ಪಿಂಕಿ, ಅರುಣ್ ಕುಮಾರ್, ಹರೀಶ್ ಮತ್ತು ರಕ್ಷಿತ್​​ ಸೇರಿ ಐವರು ಆರೋಪಿಗಳನ್ನ ಪೊಲೀಸರೀಗ ಬಂಧಿಸಿದ್ದಾರೆ.

ಇದನ್ನೂ ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ; ಭಾವಿ ಪತಿಯಿಂದಲೇ ನಡೀತು ಹತ್ಯೆ!

ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯ ವಶಕ್ಕೆ ಪಡೆದಿದ್ದ ಪೊಲೀಸರು, ಅದರ ಆಧಾರದಲ್ಲಿ ತನಿಖೆ ಶುರು ಮಾಡಿದ್ದರು. ಈ ರಾಬರಿಯನ್ನ ಯಾರೋ ಪರಿಚಿತರೇ ಮಾಡಿರಬಹುದು ಎನ್ನುವ ಅನುಮಾನ ಖಾಕಿಗೆ ಕಾಡಿತ್ತು. ಪ್ರಕರಣ ಸಂಬಂಧ ಹಲವರ ವಿಚಾರಣೆ ಮಾಡಿದಾಗ ಉಡಾನ್ ಕಂಪನಿ ಸಿಬ್ಬಂದಿ ರಕ್ಷಿತ್​​ ಎಂಬಾತ ಲಾಕ್ ಆಗಿದ್ದ.  ರಾಬರಿಯ ಮಾಸ್ಟರ್ ಮೈಂಡ್ ಈತನೇ ಅನ್ನೋದು ತಿಳಿಯುತ್ತಿದ್ದಂತೆ ಫೀಲ್ಡ್​​ಗೆ ಇಳಿದ ಡಿವೈಎಸ್ಪಿ ಮೋಹನ್, ಇನ್ಸ್ ಪೆಕ್ಟರ್​​ಗಳಾದ ಕೃಷ್ಣಕುಮಾರ್, ಮಂಜುನಾಥ್ ನೇತೃತ್ವದ ಪೊಲೀಸರ ತಂಡ ತಲೆಮರೆಸಿಕೊಂಡಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದೆ. ಸಿನಿಮಾ ಮಾದರಿಯಲ್ಲಿ ದರೋಡೆ ಮಾಡಿದ್ದ ಆರೋಪಿಗಳೀಗ ಬನ್ನೇರುಘಟ್ಟ ಪೊಲೀಸರ ಅತಿಥಿಗಳಾಗಿದ್ದು, ಎಲ್ಲರನ್ನು ಪರಪ್ಪನ ಅಗ್ರಹಾರ ಜೈಲಿಗಟ್ಟಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
Loading...
Unable to load recommendations.
Follow Us