Bengaluru Crime: ಬೆಂಗಳೂರಿನಲ್ಲಿ ಹೆಂಡತಿಯನ್ನು ಇರಿದು ಕೊಂದು ಪೊಲೀಸರಿಗೆ ಫೋನ್ ಮಾಡಿದ ಟೈಲರ್!

| Updated By: ಸುಷ್ಮಾ ಚಕ್ರೆ

Updated on: Jun 23, 2022 | 3:42 PM

Murder News Today: ಸಾಲದ ವಿಚಾರಕ್ಕೆ ಹೆಂಡತಿಯೊಂದಿಗೆ ಜಗಳವಾಡಿದ ಗಂಡ ಆಕೆಯನ್ನು ಇರಿದು ಕೊಲೆ ಮಾಡಿದ್ದಾನೆ. ನಂತರ ಮಗಳಿಗೂ ಇರಿದಿದ್ದು, ಆಕೆ ಸಾವನ್ನಪ್ಪಿದ್ದಾಳೆ ಎಂದುಕೊಂಡಿದ್ದ. ಆದರೆ, ಪ್ರಜ್ಞೆ ತಪ್ಪಿ ಬಿದ್ದಿದ್ದ ಅವಳು ಬದುಕುಳಿದಿದ್ದಾಳೆ.

Bengaluru Crime: ಬೆಂಗಳೂರಿನಲ್ಲಿ ಹೆಂಡತಿಯನ್ನು ಇರಿದು ಕೊಂದು ಪೊಲೀಸರಿಗೆ ಫೋನ್ ಮಾಡಿದ ಟೈಲರ್!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಗಂಡ- ಹೆಂಡತಿ ನಡುವಿನ ಜಗಳ ತಾರಕಕ್ಕೇರಿದ ಪರಿಣಾಮ ಗಂಡ ತನ್ನ ಹೆಂಡತಿಯನ್ನು ಕೊಚ್ಚಿ ಕೊಲೆ ಮಾಡಿದ್ದು, ಮಗಳಿಗೆ ಚಾಕುವಿನಿಂದ ಇರಿದ ಬಳಿಕ ಪೊಲೀಸರಿಗೆ ತಾನೇ ಫೋನ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bangalore Murder) ನಡೆದಿದೆ. ಹೆಂಡತಿಯೊಂದಿಗೆ ಜಗಳವಾಡಿದ್ದ 49 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು 15 ವರ್ಷದ ಮಗಳನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಳಿಕ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತಪ್ಪೊಪ್ಪಿಕೊಂಡಿರುವ ಆತ ಶರಣಾಗಿದ್ದಾನೆ.

ಆರೋಪಿಗಳನ್ನು ಬೆಂಗಳೂರಿನ ಯಶವಂತಪುರ ಸಮೀಪದ ಮತ್ತಿಕೆರೆ ನಿವಾಸಿ ದಾನೇಂದ್ರ ರೆಡ್ಡಿ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಟೈಲರ್ ಆಗಿದ್ದಾನೆ. ಈತನ ಪತ್ನಿ ಅನಸೂಯ (42)ಕೊಲೆಯಾದಾಕೆ. ಆಕೆಯ ಜೊತೆ 17 ವರ್ಷಗಳ ಹಿಂದೆ ಆತನಿಗೆ ಮದುವೆಯಾಗಿತ್ತು. ದಾನೇಂದ್ರ ಜಗಳವಾಡಿದ ಬಳಿಕ ಮೊದಲಿಗೆ ಪತ್ನಿಯನ್ನು ಕೊಂದು, ನಂತರ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಆದರೆ, ಆಕೆ ಸತ್ತ ನಂತರ ಮನಸ್ಸು ಬದಲಾಯಿಸಿದ್ದ. ಅಷ್ಟರಲ್ಲಿ ಅಲ್ಲಿಗೆ ಬಂದ ಮಗಳಿಗೂ ಚಾಕುವಿನಿಂದ ಇರಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Murder: ನಿಮ್ಮ ಗಂಡನನ್ನು ಕೊಲ್ಲುವುದು ಹೇಗೆ? ಕಾದಂಬರಿ ಬರೆದು ತನ್ನ ಪತಿಯನ್ನೇ ಕೊಂದ ಲೇಖಕಿಗೆ ಜೀವಾವಧಿ ಶಿಕ್ಷೆ

9ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಅವರ ಮಗಳು ಬುಧವಾರ ಮನೆಯಲ್ಲಿದ್ದಾಗ ದಾನೇಂದ್ರ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಕುಡಿದ ಅಮಲಿನಲ್ಲಿದ್ದ ದಾನೇಂದ್ರ ತನ್ನ ಹೆಂಡತಿ ಅನಸೂಯ ಜೊತೆ 2 ಲಕ್ಷ ರೂಪಾಯಿ ಸಾಲದ ವಿಚಾರವಾಗಿ ವಾಗ್ವಾದ ನಡೆಸಿದ್ದ. ಗಂಡನ ಸಾಲದ ಬಗ್ಗೆ ಅನಸೂಯ ಕೋಪಗೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅವರಿಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ದಾನೇಂದ್ರ ಅನಸೂಯಾಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಅಲ್ಲಿಗೆ ಬಂದ ತನ್ನ ಮಗಳಿಗೆ ಕೂಡ ಇರಿದಿದ್ದಾನೆ. ಚಾಕುವಿಂದ ಇರಿದಿದ್ದರಿಂದ ಮಗಳು ಕುಸಿದುಬಿದ್ದ ನಂತರ ಅವಳು ಸತ್ತಿದ್ದಾಳೆ ಎಂದು ಭಾವಿಸಿದ್ದಾನೆ. ಹೆಂಡತಿ-ಮಗಳಿಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಗಾಬರಿಯಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್​ನಿಂದ ಹಿಂದೆ ಸರಿದಿದ್ದಾನೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Murder: ಆಸ್ತಿಗಾಗಿ ಅಪ್ಪ, ತಮ್ಮನನ್ನೇ ಶೂಟ್ ಮಾಡಿ ಕೊಂದ ನಿವೃತ್ತ ಸೇನಾಧಿಕಾರಿ!

ಮುಂದೇನು ಮಾಡುವುದು? ಆ ಹೆಣಗಳನ್ನು ಏನು ಮಾಡುವುದು? ಎಂಬ ಗೊಂದಲದಲ್ಲೇ ಆತ ಎರಡು ಗಂಟೆಗಳ ಕಾಲ ಮನೆಯಲ್ಲೇ ಕುಳಿತಿದ್ದಾಎ. ಈ ವಿಷಯ ಹೇಗಾದರೂ ಪೊಲೀಸರಿಗೆ ಗೊತ್ತಾಗೇ ಆಗುತ್ತದೆ ಎಂದು ಆತ ತಾನೇ ಪೊಲೀಸರಿಗೆ ಫೋನ್ ಮಾಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ತಾಯಿ-ಮಗಳ ದೇಹಗಳನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಗಳಿಗೆ ಪ್ರಜ್ಞೆ ಬಂದಿದ್ದು, ಆಕೆ ಸತ್ತಿಲ್ಲ ಎಂಬುದು ಬಯಲಾಗಿದೆ.

ಎರಡು ವಿಭಿನ್ನ ಚಾಕುಗಳನ್ನು ಬಳಸಿ ಪತ್ನಿ ಹಾಗೂ ಮಗಳಿಗೆ ಇರಿದಿರುವುದಾಗಿ ದಾನೇಂದ್ರ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಯಶವಂತಪುರ ಪೊಲೀಸರು ದಾನೇಂದ್ರನ ವಿರುದ್ಧ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ