ಬೆಂಗಳೂರು: ಜೂಜಿನ ಚಟಕ್ಕೆ ಬಾಲಕನ ಅಪಹರಣ, ಕೊಲೆ; ಲಂಡನ್‌ ರಿಟರ್ನ್​ ಎಂ.ಟೆಕ್ ಪದವೀಧರನ ಬೆಚ್ಚಿಬೀಳಿಸುವ ಪ್ಲಾನ್!

ಬೆಂಗಳೂರಿನಲ್ಲಿ ಲಂಡನ್‌ನಿಂದ ಎಂ.ಟೆಕ್ ಮುಗಿಸಿ ಬಂದಿದ್ದ ಯುವಕನೊಬ್ಬ ಆನ್‌ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆರೋಪಿಯನ್ನು ಸಿಸಿಟಿವಿ ಹಾಗೂ ಕಾಲ್ ಟ್ರ್ಯಾಕಿಂಗ್ ಮೂಲಕ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಜೂಜಿನ ಚಟಕ್ಕೆ ಬಾಲಕನ ಅಪಹರಣ, ಕೊಲೆ; ಲಂಡನ್‌ ರಿಟರ್ನ್​ ಎಂ.ಟೆಕ್ ಪದವೀಧರನ ಬೆಚ್ಚಿಬೀಳಿಸುವ ಪ್ಲಾನ್!
ವಾಕಾ ಭಾಸ್ಕರ್ ರೆಡ್ಡಿ

Updated on: Sep 19, 2026 | 12:05 PM

ಮುಖ್ಯಾಂಶಗಳು

  • ಯುಕೆ ರಿಟರ್ನ್ ಎಂ.ಟೆಕ್ ಪದವೀಧರನಿಂದ ನೆರೆಮನೆಯ ಬಾಲಕನ ಅಪಹರಣ ಹಾಗೂ ಕೊಲೆ.
  • ಆನ್‌ಲೈನ್ ಬೆಟ್ಟಿಂಗ್ ಸಾಲ ತೀರಿಸಲು ಹಣಕ್ಕಾಗಿ ಈ ಭೀಕರ ಕೃತ್ಯ.
  • ಕರೆಯನ್ನು ಟ್ರ್ಯಾಕ್ ಮಾಡಿ ಆರೋಪಿಯನ್ನು ಬಂಧಿಸಿದ ಬೆಂಗಳೂರು ತನಿಖಾ ಪೊಲೀಸ್ ತಂಡ.

ಬೆಂಗಳೂರು, ಸೆಪ್ಟೆಂಬರ್ 19: ಬೆಂಗಳೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಯುಕೆ ಇಂದ ಎಂ.ಟೆಕ್ ಮುಗಿಸಿಕೊಂಡು ಬಂದಿದ್ದ ಉನ್ನತ ಶಿಕ್ಷಣ ಪಡೆದ ವಾಕಾ ಭಾಸ್ಕರ್ ರೆಡ್ಡಿ ಎಂಬ ಯುವಕನೊಬ್ಬ ಹಣದ ಆಸೆಗೆ ಬಿದ್ದು ನೆರೆಮನೆಯ ಬಾಲಕನನ್ನೇ ಅಪಹರಿಸಿ ಹತ್ಯೆ ಮಾಡಿರುವ ಕ್ರೂರ ಘಟನೆ ವರದಿಯಾಗಿದೆ. ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸಿರುವ ಈ ಪ್ರಕರಣದಲ್ಲಿ ಆರೋಪಿಯ ಮಾಸ್ಟರ್ ಪ್ಲಾನ್ ಅನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಆನ್‌ಲೈನ್ ಬೆಟ್ಟಿಂಗ್ ಸಾಲ ತೀರಿಸಲು ಕೃತ್ಯ

ಆರೋಪಿಯು ಲಂಡನ್‌ನಲ್ಲಿ ಎಂ.ಟೆಕ್ ವ್ಯಾಸಂಗ ಮುಗಿಸಿ ಭಾರತಕ್ಕೆ ಹಿಂತಿರುಗಿದ್ದ. ಆದರೆ, ಇತ್ತೀಚೆಗೆ ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈ ಸಾಲವನ್ನು ತೀರಿಸಲು ಹಾಗೂ ಸುಲಭವಾಗಿ ಹಣ ಸಂಪಾದಿಸಲು ಯೋಜಿಸಿದ ಆತ, ತನಗೆ ಪರಿಚಯವಿದ್ದ ನೆರೆಮನೆಯ ಬಾಲಕನನ್ನೇ ಟಾರ್ಗೆಟ್ ಮಾಡಿದ್ದ.

ಅಪಹರಣದ ಬೆನ್ನಲ್ಲೇ ಕೊಲೆ, ಆನಂತರ ಹಣಕ್ಕೆ ಬೇಡಿಕೆ!

ಘಟನೆಯ ದಿನ ಬಾಲಕನಿಗೆ ಆಮಿಷ ಒಡ್ಡಿ ಕರೆದೊಯ್ದ ಆರೋಪಿ, ತಕ್ಷಣವೇ ಆತನನ್ನು ಹತ್ಯೆ ಮಾಡಿದ್ದಾನೆ. ಬಾಲಕ ಜೀವಂತವಾಗಿದ್ದರೆ ತಾನು ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಮೊದಲೇ ಕೊಲೆ ಮಾಡಿ, ಆ ನಂತರ ಬಾಲಕನ ಕುಟುಂಬಸ್ಥರಿಗೆ ಕರೆ ಮಾಡಿ ಭಾರಿ ಮೊತ್ತದ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದ. ಬಾಲಕ ಕಾಣೆಯಾದ ತಕ್ಷಣ ಕುಟುಂಬಸ್ಥರು ಪೋಲಿಸರಿಗೆ ದೂರು ನೀಡಿದ್ದರು.

ತಾಂತ್ರಿಕ ತನಿಖೆಯಿಂದ ಆರೋಪಿ ಬಲೆಗೆ

ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಕಾಲ್ ಡಿಟೇಲ್ಸ್ ಆಧರಿಸಿ ತನಿಖೆ ಕೈಗೊಂಡರು. ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಬಳಿಕ ಬಾಲಕನ ಮೃತದೇಹವನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಶಿಕ್ಷಣ ಮತ್ತು ಕೌಟುಂಬಿಕ ಹಿನ್ನೆಲೆ ಉತ್ತಮವಾಗಿದ್ದರೂ, ಆನ್‌ಲೈನ್ ಜೂಜಿನ ಚಟದಿಂದಾಗಿ ಆರೋಪಿ ಈ ರೀತಿಯ ಭೀಕರ ಅಪರಾಧ ಎಸಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us