
ಬೆಂಗಳೂರು, ಜೂನ್ 2: ಆನ್‌ಲೈನ್ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು ಎಂದು ನಂಬಿಸುವ ಸೈಬರ್ (Cyber Fraud) ವಂಚಕರ ಜಾಲದಿಂದ ಮೋಸಹೋದ ಬೆಂಗಳೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ 5.95 ಕೋಟಿ ರೂ. ಕಳೆದುಕೊಂಡಿದ್ದಾರೆ. ವಾಯುವ್ಯ ಬೆಂಗಳೂರಿನ (Bengaluru) ನಿವಾಸಿಯೊಬ್ಬರಿಗೆ ಸೈಬರ್ ವಂಚಕರು ನಕಲಿ ಹೂಡಿಕೆ ತಾಣದ (Trading Platform) ಮೂಲಕ ವಂಚಿಸಿ, ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವುದಾಗಿ ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ, ಹೂಡಿಕೆ ಮಾಡಿದ ಹಣಕ್ಕೆ ಭಾರಿ ಲಾಭ ಬಂದಂತೆ ನಕಲಿ ಡ್ಯಾಶ್‌ಬೋರ್ಡ್ ಸೃಷ್ಟಿಸಿ ತೋರಿಸಲಾಗಿತ್ತು. ಇದನ್ನು ನಂಬಿದ ವ್ಯಕ್ತಿ ಹಣ ಹೂಡುತ್ತಾ ಹೋಗಿದ್ದರು.
ಸಂತ್ರಸ್ತ ವ್ಯಕ್ತಿಗೆ ಅವರ ಸ್ನೇಹಿತರು ಮೊದಲು ‘PU Prime’ ಎಂಬ ಆನ್‌ಲೈನ್ ಟ್ರೇಡಿಂಗ್ ವೇದಿಕೆಯ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಅವರಿಗೆ ಆನ್‌ಲೈನ್ ಹೂಡಿಕೆಯ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದ ಕಾರಣ, ಅವರು ಗೂಗಲ್ ಮತ್ತು ಫೇಸ್‌ಬುಕ್‌ನಲ್ಲಿ ವೃತ್ತಿಪರ ಮಾರ್ಗದರ್ಶನಕ್ಕಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಅವರಿಗೆ ‘ಶಿಲ್ಪಾ ಶಿವಕುಮಾರ್’ ಎಂಬಾಕೆಯ ಪರಿಚಯವಾಗಿತ್ತು. ಇಬ್ಬರ ನಡುವೆ ಲಾಭ ಹಂಚಿಕೆಯ (Profit-Sharing) ಒಪ್ಪಂದ ಏರ್ಪಟ್ಟ ಬಳಿಕ, ಆಕೆ ಇದು ಭಾರತೀಯ ಟ್ರೇಡರ್ಸ್‌ಗಳಿಗಾಗಿಯೇ ಇರುವ ಅಧಿಕೃತ ವೇದಿಕೆ ಎಂದು ನಂಬಿಸಿ ವಂಚನೆಯ ಜಾಲತಾಣದಲ್ಲಿ ನೋಂದಣಿ ಮಾಡಿಸಿದ್ದಳು.
ಸಂತ್ರಸ್ತ ವ್ಯಕ್ತಿ ಆ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೇಡಿಂಗ್ ಆರಂಭಿಸಿದಾಗ, ಅದರ ಡ್ಯಾಶ್‌ಬೋರ್ಡ್‌ನಲ್ಲಿ ಭಾರಿ ಪ್ರಮಾಣದ ಲಾಭ ಕಾಣತೊಡಗಿತ್ತು. ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂಪಡೆಯಲು (Withdraw) ಅವಕಾಶ ಸಿಕ್ಕಿದ್ದರಿಂದ ಅವರಿಗೆ ನಂಬಿಕೆ ಹೆಚ್ಚಾಗಿತ್ತು. ಪ್ಲಾಟ್‌ಫಾರ್ಮ್‌ನ ಅಸಲಿಯತ್ತನ್ನು ಪರೀಕ್ಷಿಸಲು ಅವರು ಬೇರೊಂದು ಖಾತೆಯನ್ನು ತೆರೆದಾಗಲೂ ಅದರಲ್ಲಿ ಲಾಭ ತೋರಿಸಲಾಗಿತ್ತು. ಆದರೆ, ಆ ನಕಲಿ ಆ್ಯಪ್ ಅನ್ನು ಕೇವಲ ಸುಳ್ಳು ಲಾಭ ತೋರಿಸಲೆಂದೇ ವಿನ್ಯಾಸಗೊಳಿಸಲಾಗಿತ್ತು ಎಂಬುದು ಅವರಿಗೆ ತಿಳಿದಿರಲಿಲ್ಲ!
ಇದನ್ನೂ ಓದಿ: ಬೆಂಗಳೂರು: ಅರ್ಧಕ್ಕೆ ಕಾಲೇಜು ಬಿಟ್ಟು ತಾಯಿ ಜತೆ ಆನ್‌ಲೈನ್ ವಂಚನೆಗಿಳಿದ ಮೊಹಮ್ಮದ್ ಉಜೈಫ್
ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, ಹೂಡಿಕೆಯನ್ನು ಹೆಚ್ಚಿಸುವಂತೆ ನಿರಂತರವಾಗಿ ಪ್ರಚೋದಿಸಿದರು. ಕೊನೆಗೆ ಸಂತ್ರಸ್ತರು ತಮ್ಮ ಮತ್ತು ಪತ್ನಿಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 5.95 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಒಂದು ಹಂತದಲ್ಲಿ ಅವರ ಟ್ರೇಡಿಂಗ್ ಖಾತೆಯಲ್ಲಿ ಬರೋಬ್ಬರಿ 50 ಕೋಟಿ ರೂ. ಲಾಭ ಇರುವುದು ಕಾಣಿಸುತ್ತಿತ್ತು. ಆದರೆ, ಆ ಹಣವನ್ನು ಹಿಂಪಡೆಯಲು ಹೋದಾಗ ತಾವೇ ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಮೇ 28ರಂದು ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ