
ಬೆಂಗಳೂರು, ಮೇ 21: ಮಳೆಗಾಲ (Mansoon) ಆರಂಭವಾಗುತ್ತಿದ್ದಂತೆ ರೋಗ-ರುಜಿನಗಳು ಕೂಡ ಜಾಸ್ತಿಯಾಗುತ್ತವೆ. ಮಳೆಗಾಲದಲ್ಲಿ ಡೆಂಗಿ ಪ್ರಕರಣಗಳು ಕೂಡ ಏರಿಕೆಯಾಗುತ್ತವೆ. ಬೆಂಗಳೂರಿನಲ್ಲಿ (Bengaluru) ಡೆಂಗಿ ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ಟಿವಿ9 ಸುದ್ದಿ ಮಾಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಡೆಂಗಿ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ 240 ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು 700 ಸ್ವಯಂ ಸೇವಕರನ್ನ ಆರೋಗ್ಯ ಇಲಾಖೆ ನೇಮಿಸಿದೆ.
ಬೆಂಗಳೂರಿನಲ್ಲಿ ಶೇ 40 ರಿಂದ 50 ರಷ್ಟು ಡೆಂಗಿ ಪ್ರಕರಣಗಳು ಕಂಡುಬರುತ್ತಿದ್ದು, ನಾಗರಿಕರು ಕೂಡ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಘೋಷವಾಕ್ಯದೊಂದಿಗೆ ಡೆಂಗಿ ಸೋಲಿಸುವ ಅಭಿಯಾನಕ್ಕೆ ಆರೋಗ್ಯ ಇಲಾಖೆ ಚಾಲನೆ ನೀಡಿದೆ.
ಸಾರ್ವಜನಿಕ ಸ್ಥಳಗಳು, ನೀರು ನಿಲ್ಲುವ ಪ್ರದೇಶಗಳಲ್ಲಿ ಡೆಂಗಿ ತರುವ ಸೊಳ್ಳಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
ಹೆಸರೇ ಹೇಳುವಂತೆ ಡೆಂಗ್ಯೂ ಒಂದು ಭಯಾನಕ ಕಾಯಿಲೆ. ಒಮ್ಮೆ ದೇಹದೊಳಗೆ ಪ್ರವೇಶ ಮಾಡಿದರೆ ದೇಹದಲ್ಲಿರುವ ನಮ್ಮ ಶಕ್ತಿಯನ್ನು ಕುಗ್ಗಿಸಿದೆ ಬಿಡುವುದಿಲ್ಲ. ಸಾಂಕ್ರಾಮಿಕ ರೋಗವಾಗಿರುವ ಡೆಂಗ್ಯೂ ಈಡೀಸ್ ಈಜಿಪ್ಟಿ ಎಂಬ ಸೊಳ್ಳೆಯ ಮೂಲಕ ಹರಡುತ್ತದೆ. ರೋಗಾಣುಗಳನ್ನು ಹೊಂದಿರುವ ಸೊಳ್ಳೆ ಕಡಿದ 5 ರಿಂದ 7 ದಿನದೊಳಗೆ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿಯನ್ನು ಕಚ್ಚಿ ನಂತರ ಸೋಂಕಿಲ್ಲದ ವ್ಯಕ್ತಿಯನ್ನು ಕಚ್ಚಿದಾಗ ಈ ಕಾಯಿಲೆಯು ಬರುತ್ತದೆ. ಪ್ರಾರಂಭದಲ್ಲಿಯೇ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದೇ ಹೋದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯೇ ಹೆಚ್ಚು.
ಶಾಲಾ ಮಕ್ಕಳ ಪಠ್ಯದಲ್ಲಿ ಆರೋಗ್ಯದ ಜಾಗೃತಿ ಕುರಿತಾದ ಪಾಠಗಳನ್ನು ಸೇರಿಸುವಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ. ಈಗಿನ ಖಾಯಿಲೆಗಳ ಬಗ್ಗೆ ಮಾಹಿತಿ, ಅನಾರೋಗ್ಯದ ಸಮಯದಲ್ಲಿ ಯಾವೆಲ್ಲ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳಬೇಕು? ಯಾವ ಖಾಯಿಲೆ ಬಂದಾಗ ಹೇಗೆ ಶುಚಿತ್ವ ಕಾಪಾಡಿಕೊಳ್ಳಬೇಕು? ಹೃದಯಘಾತ ನಿಯಂತ್ರಣಕ್ಕೆ ಶಾಲಾ ಶೈಕ್ಷಣಿಕ ಪಠ್ಯದಲ್ಲಿ ಕಾರ್ಡಿಯೋಪಲ್ಮನರಿ ಸಿಪಿಆರ್ ವಿಷಯವನ್ನು ಸೇರ್ಪಡೆ ಮಾಡುವಂತೆ ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಗೆ ಪ್ರಾಸ್ತವನೆ ಸಲ್ಲಿಸಿದೆ.
ಶಾಲಾ ಮಕ್ಕಳಿಗೆ ಪ್ರತ್ಯೇಕ ಆರೋಗ್ಯ ಪಾಠದ ಪಠ್ಯ ನೀಡುವಂತೆ ಒತ್ತಾಯ ಮಾಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ. ಶಾಲಾ ಮಕ್ಕಳ ಪಠ್ಯದಲ್ಲಿ ಮಾನಸಿಕ ಆರೋಗ್ಯದ ಜಾಗೃತಿ ಬಗ್ಗೆ ಸೇರಿಸಬೇಕು. ಹಾಗೂ ಮೊಬೈಲ್ ಬಳಕೆ, ಅತಿಯಾದ ಮೊಬೈಲ್ ಗೀಳಿನಿಂದಾಗುವ ಸಮಸ್ಯೆಗಳ ಕುರಿತು ಪಾಠ ಸೇರಿಸಬೇಕೆಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ: ಬಿಸಿಲು, ಮಳೆಯಾದಾಗ ಹೆಚ್ಚಾಗುತ್ತೆ ಡೆಂಗ್ಯೂ ಪ್ರಕರಣ! ಮಕ್ಕಳ ಆರೋಗ್ಯದ ಮೇಲಿರಲಿ ಎಚ್ಚರ
ಒಟ್ಟಿನಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಒಂದಲ್ಲ ಒಂದು ಖಾಯಿಲೆಗಳು ಹೆಚ್ಚಾಗುತ್ತಿದ್ದು ಶಾಲಾ ಮಕ್ಕಳಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು ಉತ್ತಮ ಬೆಳೆವಣಿಯಾಗಿದೆ. ಮಾನಸಿಕ ಖಾಯಿಲೆ ಹಾಗೂ ಮೊಬೈಲ್ ಬಳಕೆಯಿಂದ ಎದುರಾಗಿರುವ ಸಮಸ್ಯೆಗಳ ಬಗ್ಗೆ ಪಾಠಗಳನ್ನ ಸೇರಿಸಬೇಕಿದೆ. ಶಿಕ್ಷಣ ಇಲಾಖೆ ಒಪ್ಪಿಗೆ ಸೂಚಿಸಿದರೆ ಮುಂದಿನ ವರ್ಷವೇ ಪಠ್ಯದಲ್ಲಿ ಆರೋಗ್ಯದ ಬಗ್ಗೆ ಮಕ್ಕಳಿಗೆ ಮಾಹಿತಿ ಸಿಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Wed, 21 May 25