
ಬೆಂಗಳೂರು, ಆಗಸ್ಟ್ 08: ಇತ್ತೀಚೆಗೆ ನಗರದ ಸಿಕೆ ಅಚ್ಚುಕಟ್ಟುವಿನಲ್ಲಿ 7ನೇ ತರಗತಿ ಬಾಲಕನ ಆತ್ಮಹತ್ಯೆ (death) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ. ಜಪಾನೀಸ್ ಭಾಷೆಯ ವೆಬ್ ಸಿರೀಸ್ (Web series) ಹುಚ್ಚಿನಿಂದ ಬಾಲಕ ಆತ್ಮಹತ್ಯೆ ಮಾಡುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಸಿ.ಕೆ ಅಚ್ಚುಕಟ್ಟು ಪೊಲೀಸರಿಂದ ತನಿಖೆ ಮುಂದುವರಿದಿದೆ.
ಜಾನಪದ ಕಲಾವಿದರಾಗಿರುವ ಗಣೇಶ್ ಪ್ರಸಾದ್ ಮತ್ತು ಸವಿತಾರ ಎರಡನೇ ಪುತ್ರ ಗಾಂಧರ್ (14 ವರ್ಷ) ಆ. 04ರಂದು ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮೊದಲಿಗೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಆದರೆ ಇದೀಗ ಸಿ.ಕೆ ಅಚ್ಚುಕಟ್ಟು ಪೊಲೀಸ ಪ್ರಾಥಮಿಕ ತನಿಖೆ ವೇಳೆ ಬಾಲಕನ ಸಾವಿಗೆ ಜಪಾನೀಸ್ ವೆಬ್ ಸಿರೀಸ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಏಕೆಂದರೆ ಆತನ ರೂಮ್ನಲ್ಲಿ ವೆಬ್ ಸಿರೀಸ್ ಪಾತ್ರದ ಚಿತ್ರ ಬರೆದಿದ್ದ.
ಗಾಂಧಾರ್, ಜಪಾನೀಸ್ ಭಾಷೆಯ ‘ಡೆತ್ನೋಟ್’ (Death Note) ಎಂಬ ವೆಬ್ ಸಿರೀಸ್ ನೋಡುತ್ತಿದ್ದ. ಇದರಿಂದ ಪ್ರೇರಣೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆ ವೇಳೆ ಈ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಬಾಲಕ ಬಳಸುತ್ತಿದ್ದ ಮೊಬೈಲ್ ಮತ್ತು ಪೋಷಕರನ್ನ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಬಾಲಕನ ತಾಯಿ ಸವಿತಾ ಕಾರ್ಯಕ್ರಮ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿದ್ದರು. ತಂದೆ, ಅಣ್ಣನ ಜತೆ ಚೆನ್ನಾಗಿಯೇ ಇದ್ದ ಗಾಂಧಾರ್, ರಾತ್ರಿ ಅಪ್ಪ, ಅಣ್ಣ ಜತೆ ಊಟ ಮಾಡಿ ರೂಮ್ನಲ್ಲಿ ಮಲಗಿದ್ದಾನೆ. ಬೆಳಗ್ಗೆ 5.30ಕ್ಕೆ ತಂದೆ ಎದ್ದಿದ್ದು, ಶ್ವಾನವನ್ನ ವಾಕಿಂಗ್ಗೆ ಕರೆದೊಯ್ಯಲು ರೂಮ್ಗೆ ಬಂದಿದ್ದಾರೆ. ಆಗ ಘನಘೋರವೇ ಕಂಡಿದೆ.
ಇದನ್ನೂ ಓದಿ: ‘ನನ್ನನ್ನು ಕ್ಷಮಿಸು’: ಡೆತ್ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಗಿಟಾರ್ ಸಿಕ್ಕಿಸುವ ಹೋಲ್ಡರ್ಗೆ ಟವಲ್ನಿಂದ ನೇಣು ಬಿಗಿದುಕೊಂಡು ಗಾಂಧಾರ್ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾಂಧಾರ್ ಡೆತ್ನೋಟ್ ಕೂಡ ಬರೆದಿದ್ದು, ಹೆತ್ತವರ ಬಳಿ ಕ್ಷಮೆ ಕೇಳಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.