
ಬೆಂಗಳೂರು, ಡಿಸೆಂಬರ್ 08: ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿಗೆ (Chamrajpet Post Office) ಕೋರಿಯರ್ ಬಾಕ್ಸ್ನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರ ತನಿಖೆಯಲ್ಲಿ ಹಲವು ವಿಚಾರಗಳು ಬಹಿರಂಗಗೊಂಡಿವೆ. ವಿದೇಶದಿಂದ ಬಂದ ಡ್ರಗ್ಸ್ (Durg) ಕೊರಿಯರ್ ಬಾಕ್ಸ್ಗಳ ಮೇಲಿನ ವಿಳಾಸ ನಕಲಿಯಾಗಿವೆ. ತಪ್ಪಾದ ವಿಳಾಸ ನೀಡಿದರೂ ಕೊರಿಯರ್ನಲ್ಲಿದ್ದ ಡ್ರಗ್ ಪ್ಯಾಕೇಟ್ಗಳನ್ನು ಡೀಲರ್ಗಳು ಹಲವು ಮಾರ್ಗದಲ್ಲಿ ಪಡೆಯುತಿದ್ದರು.
ಪೆಡ್ಲರ್ಸ್ಗಳು ಮನೆಯಲ್ಲೇ ಕುಳಿತು ತಪ್ಪಾದ ವಿಳಾಸ ನೀಡಿ ಆನ್‌ಲೈನ್‌ನಲ್ಲಿ ಡ್ರಗ್ಸ್ ಬುಕ್ ಮಾಡಿ ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದರು. ವಿದೇಶದಿಂದ ಬಂದ ಪ್ಯಾಕೇಟ್ಗಳು ಕೊರಿಯರ್ ಏಜೆನ್ಸಿಗೆ ತಲುಪುತಿದ್ದವು. ಏಜೆನ್ಸಿಗೆ ತಲುಪಿದ ಕೂಡಲೇ ಪೆಡ್ಲರ್ಗೆ ಡೆಲವರಿ ಟ್ರ್ಯಾಕಿಂಗ್ ಮಾಹಿತಿ ರವಾನಿಸಲಾಗುತ್ತಿತ್ತು. ತಪ್ಪಾದ ವಿಳಾಸಕ್ಕೆ ಡ್ರಗ್ಸ್ ಡೆಲವರಿಯಾಗುವ ಮುನ್ನ ಟ್ರಾಕಿಂಗ್ ಮಾಹಿತಿ ಆಧರಿಸಿ ಡ್ರಗ್ಸ್ ಬಾಕ್ಸ್ ಅನ್ನು ಪಡೆಯುತ್ತಿದ್ದರು.
ಮತ್ತೊಂದು ಸಂದರ್ಭದಲ್ಲಿ ತಪ್ಪಾದ ವಿಳಾಸಕ್ಕೆ ತೆರಳುತಿದ್ದ ಡೆಲವರಿ ಸಿಬ್ಬಂದಿಗಳು, ವಿಳಾಸ ಸಿಗದೆ ವಾಪಾಸ್ ಕೊರಿಯರ್ ಏಜೆನ್ಸಿಗೆ ಬಾಕ್ಸ್ ಅನ್ನು ತೆಗೆದುಕೊಂಡು ಹೊಗುತಿದ್ದರು. ಆ ಬಳಿಕ ಪೆಡ್ಲರ್‌ಗಳು ಏಜೆನ್ಸಿಗೆ ಬಂದು ಕೊರಿಯರ್ ತೆಗೆದುಕೊಳ್ಳುತ್ತಿದ್ದರು. ಪೆಡ್ಲರ್ಸ್ಗಳು ಲೀಗಲ್ ಆಗಿಯೇ ಬೆಂಗಳೂರಿಗೆ ಡ್ರಗ್ ತರಿಸುತ್ತಿದ್ದರು.
ಸಿಸಿಬಿ ಪೊಲೀಸರು ಸೆಪ್ಟೆಂಬರ್ 9ರಂದು ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ 606 ಮಾದಕ ವಸ್ತು ಇರುವ ಪಾರ್ಸಲ್ ಪ್ಯಾಕೇಟ್ಗಳು ಪತ್ತೆಯಾಗಿದ್ದವು. ಥೈಲ್ಯಾಂಡ್, ಯುಎಸ್, ಯುಕೆಯಿಂದ ಡ್ರಗ್ಸ್ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 12 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲ ಪೆಡ್ಲರ್ಸ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಂಚೆ ಇಲಾಖೆ ಮೂಲಕ ಬೆಂಗಳೂರಿಗೆ ಬರ್ತಾಯಿದೆ ವಿದೇಶಿ ಡ್ರಗ್ಸ್: 21 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ
ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಬಸವನಗೌಡನ ಬಂಧಿತ ಆರೋಪಿ. 218ಗ್ರಾಂ ಗಾಂಜಾ, ಬೈಕ್ ಜಪ್ತಿ ಮಾಡಲಾಗಿದೆ. ಅಬಕಾರಿ ಇನ್ಸ್ಪೆಕ್ಟರ್ ವಿಠ್ಠಲ ಪೀರಣ್ಣನವರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಅಬಕಾರಿ ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆ ಆಗದಂತೆ ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು. ನಗರದಲ್ಲಿ ಅಹಿತಕರ ಘಟನೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಿಸಿಬಿ ಸೇರಿದಂತೆ ಎಲ್ಲಾ ವಿಭಾಗದವರು ಡ್ರಗ್ಸ್ ವಿರುದ್ದ ಕಾರ್ಯಾಚರಣೆ ನಡೆಸಿದ್ದಾರೆ. ಹಳೇ ಡ್ರಗ್ ಪೆಡ್ಲರ್‌ಗಳು, ರೌಡಿ ಹಿನ್ನೆಲೆಯುಳ್ಳವರ ತಪಾಸಣೆ ನಡೆಯುತ್ತಿದೆ ಎಂದರು.
ಹೊಸ ವರ್ಷ ಆಯೋಜಕರನ್ನು ಕರೆಸಿ ಸಲಹೆ ಸೂಚನೆ ನೀಡಲಾಗುತ್ತಿದೆ. ಬೇರೆ ಬೇರೆ ಇಲಾಖೆ ಜೊತೆಯೂ ಹೊಸ ವರ್ಷ ಆಚರಣೆ ಬಗ್ಗೆ ಚರ್ಚೆ ಆಗುತ್ತಿದೆ. ಎಲ್ಲೆಲ್ಲಿ ಲೈಟಿಂಗ್, ಬೇರೆ ವ್ಯವಸ್ಥೆ ಆಗಬೇಕು ಅಂತ ಚರ್ಚೆ ಆಗುತ್ತಿದೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:58 am, Sun, 8 December 24