ಅಗಲಿದ ಪತ್ರಕರ್ತರಿಗೆ ಕಾರ್ಯನಿರತ ಪತ್ರಕರ್ತರ ಸಂಘ ಶ್ರದ್ಧಾಂಜಲಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬೆಂಗಳೂರಿನಲ್ಲಿ ಅಗಲಿದ ಹಲವಾರು ಹಿರಿಯ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿತು. ಟಿ.ಜಿ. ಅಶ್ವತ್ಥನಾರಾಯಣ, ಜಯಕರ್ ಸುವರ್ಣ, ಮತ್ತು ಇತರರಂತಹ ಹಲವು ಪ್ರಮುಖ ಪತ್ರಕರ್ತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಪತ್ರಿಕೋದ್ಯಮಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು ಮತ್ತು ಅವರ ಸ್ಮರಣೆಯನ್ನು ಚಿರಕಾಲ ಉಳಿಸಿಕೊಳ್ಳುವ ನಿರ್ಧಾರವನ್ನು ಘೋಷಿಸಲಾಯಿತು.
ಬೆಂಗಳೂರು, ಡಿಸೆಂಬರ್ 08: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (KUWJ) ಅಗಲಿದ ಪತ್ರಕರ್ತರಿಗೆ ಕೆಯುಡಬ್ಲೂಜೆ ಸಭಾಂಗಣದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ಪತ್ರಕರ್ತರಾದ ಬೆಂಗಳೂರಿನ ಟಿ.ಜಿ.ಅಶ್ವತ್ಥನಾರಾಯಣ, ಬಾಗಲಕೋಟೆಯ ಬಸವರಾಜ ಬಹಿರಶೆಟ್ಟಿ, ಉಡುಪಿಯ ಜಯಕರ ಸುವರ್ಣ, ದಾವಣಗೆರೆಯ ಎಂ.ವೀರಪ್ಪಭಾವಿ, ರಾಮನಗರದ ಗಂಗಾಧರ್, ರಾಯಚೂರಿನ ಸಂತೋಷ ಸಾಗರ, ಮಂಗಳೂರಿನ ಭುವನೇಂದ್ರ ಪುದವೆಟ್ಟು, ವೀರೇಶ್, ಸಕಲೇಶಪುರದ ಚಂದ್ರಶೇಖರ್ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಎರಡು ನಿಮಿಶ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ನುಡಿ ನಮನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಅಗಲಿದ ಹಿರಿಯರನ್ನು ಸ್ಮರಿಸುವುದು ಸಂಘದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅವರೆಲ್ಲರೂ ಪತ್ರಿಕೋದ್ಯಮಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವುದು ಕೂಡ ಜವಬ್ದಾರಿಯಾಗಿದೆ ಎಂದರು.
ಮನೆಯಂಗಳದಲ್ಲಿ ಸನ್ಮಾನ ಮಾಡಿದ್ದ ಟಿ.ಜಿ.ಅಶ್ವತ್ ನಾರಾಯಣ ಅವರಿಗೆ ಇಂದು ಶ್ರದ್ಧಾಂಜಲಿ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎಂದರು.
ಭಾರತೀಯ ಕಾರ್ಯನಿತರ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಟಿ.ಜಿ.ಅಶ್ವತ್ಥ ನಾರಾಯಣ್ ಆತ್ಮೀಯ ಗುಣವನ್ನು ಮೈಗೂಡಿಸಿಕೊಂಡಿದ್ದವರು, ಕನ್ನಡ ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅನನ್ಯ ಎಂದರು.
ಮಾಧ್ಯಮ ಅಕಾಡಮಿ ಅಧ್ಯಕ್ಷೆ ಆಯೇಷಾ ಖಾನಂ ಮಾತನಾಡಿ, ದೂರದರ್ಶನದ ಅರೆಕಾಲಿಕ ವರದಿಗಾರರಾಗಿದ್ದ ಜಯಕರ ಸುವರ್ಣರವರು ಉತ್ತಮ ಸಂಘಟಕರಾಗಿದ್ದರು ಮತ್ತು ವೃತ್ತಿ ಬದ್ಧತೆ ಮೈಗೂಡಿಸಿಕೊಂಡಿದ್ದರು ಎಂದರು.
ಕುಂದಾಪುರದ ಸುರೇಂದ್ರ ಶೆಣೈ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಜಯಕರ ಅವರು ಶ್ರಮಿಸಿದ್ದಾರೆ. ಗಮನ ಸೆಳೆಯುವ ಪತ್ರಕರ್ತರಾಗಿಯೂ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಅಶ್ವತ್ಥ ನಾರಾಯಣರವರ ಸಹೋದರ ಟಿ.ಜಿ.ಕೃಷ್ಣಮೂರ್ತಿ ಮಾತನಾಡಿ, ನಮ್ಮನ್ನು ವಿಚಾರವಂತಿಕೆಯಲ್ಲಿ ರೂಪಿಸಿಕೊಟ್ಟ ಹೆಗ್ಗಳಿಕೆ ನಮ್ಮಣ್ಣನದ್ದು. ಪತ್ರಕರ್ತರಾಗಿ ಅವರ ಮಾಡಿದ ಸೇವೆ ಅನನ್ಯವಾದದ್ದು ಎಂದರು. ದಾವಣಗೆರೆ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಕೋಟೆ ಮಾತನಾಡಿ, ದಾವಣಗೆರೆ ಜಿಲ್ಲೆಗೆ ವಲಸೆ ಬಂದ ವೀರಪ್ಪಭಾವಿ ಸಂಘದ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ ಮತ್ತಿತರರು ಮಾತನಾಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ರಶ್ಮಿ, ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಎಸ್.ಡಿ. ಚಿಕ್ಕಣ್ಣ, ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ