ಬೆಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಕುಡುಕ ವೈದ್ಯ, ವಾರ್ಡ್ ಬಾಯ್ ಅವಾಂತರ, ಸ್ವಲ್ಪದರಲ್ಲೇ ಬಚಾವಾದ ಯುವತಿ
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಚಿತ್ರ ವಿದ್ಯಮಾನ ನಡೆದಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಯುವತಿಯೊಬ್ಬರಿಗೆ ಮದ್ಯಪಾನದ ಅಮಲಿನಲ್ಲಿದ್ದ ವೈದ್ಯ ಹಾಗೂ ವಾರ್ಡ್ ಬಾಯ್ ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚದಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ್ದಾರೆ. ಸದ್ಯ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, ನವೆಂಬರ್ 7: ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯ ಹಾಗೂ ವಾರ್ಡ್ ಬಾಯ್ ಮದ್ಯಪಾನದ ಅಮಲಿನಲ್ಲಿ ರೋಗಿಯೊಬ್ಬರಿಗೆ ನಾಲ್ಕೈದು ಬಾರಿ ಇಂಜೆಕ್ಷನ್ ಚುಚ್ಚಿದ ವಿದ್ಯಮಾನ ನಡೆದಿದೆ. ಗಾಬರಿಯಾದ ಯುವತಿ ಕುಡುಕ ಡಾಕ್ಟರ್ ಕೈಯಿಂದ ತಪ್ಪಿಸಿಕೊಂಡಿದ್ದು, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್, ವಾರ್ಡ್ ಬಾಯ್ ಮದ್ಯಪಾನ ಮಾಡಿ ಬಂದಿದ್ದಾರೆ. ಕುಡಿದ ಮತ್ತಿನಲ್ಲಿ ಯುವತಿಯ ಜೀವಕ್ಕೆ ಕುತ್ತು ತರಲು ಮುಂದಾಗಿದ್ದಾರೆ.
ನಡೆದಿದ್ದೇನು?
ಸ್ನೇಹಾ ಎಂಬ ಯುವತಿ ನವೆಂಬರ್ 3ರಂದು ತೀವ್ರ ಜ್ವರ ಹಾಗೂ ನಿತ್ರಾಣದಿಂದ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಡಾಕ್ಟರ್ ಪ್ರದೀಪ್, ವಾರ್ಡ್ ಬಾಯ್ ಮಹೇಂದ್ರ ಮದ್ಯಪಾನದ ಅಮಲಿನಲ್ಲಿ ಇದ್ದರು. ಆ ಸಮಯದಲ್ಲಿ ಅವರಿಬ್ಬರೂ ಕರ್ತವ್ಯದಲ್ಲಿ ಇಲ್ಲದಿದ್ದರೂ ರೋಗಿಯನ್ನ ಅಟೆಂಡ್ ಮಾಡಿದ್ದರು. ಮೊದಲಿಗೆ ವಾರ್ಡ್ ಬಾಯ್ ಮಹೇಂದ್ರ, ರೋಗಿ ಸ್ನೇಹಾ ಕೈ ಹಿಡಿದು ಸಿರಿಂಜ್ ಚುಚ್ಚಿದ್ದ. ಬಳಿಕ ಡಾಕ್ಟರ್ ಪ್ರದೀಪ್ ಕರೆದು ಟ್ರಿಟ್ಮೆಂಟ್ ಕೊಡುವಂತೆ ಕೇಳಿದ್ದ. ಡಾ. ಪ್ರದೀಪ್ ಇಂಜೆಕ್ಷನ್ ಹಿಡಿದು ಸ್ನೇಹಾ ಕೈಗೆ ಮತ್ತೊಂದು ಬಾರಿ ಸಿರಿಂಜ್ ಚುಚ್ಚಿದ್ದ. ಅಲ್ಲದೆ, ಮರಳಿ ಇಂಜೆಕ್ಷನ್ ಚುಚ್ಚಿದ್ದಲ್ಲದೆ, ಮತ್ತದೇ ಕೆಲಸ ಮಾಡಲು ಮುಂದಾಗಿದ್ದ. ಮೈಕೈಗೆ ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚಿದ್ದರಿಂದ ಸ್ನೇಹಾ ಗಾಬರಿಯಾಗಿದ್ದಾರೆ.
ಮೂರ್ನಾಲ್ಕು ಬಾರಿ ಇಂಜೆಕ್ಷನ್ ಚುಚ್ಚಿದ್ದಲ್ಲದೆ, ಯುವತಿ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪವೂ ವೈದ್ಯ ಹಾಗೂ ನರ್ಸ್ ವಿರುದ್ಧ ಕೇಳಿಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಸ್ ಓಡಿಸುವಾಗಲೇ ಹೃದಯಾಘಾತದಿಂದ ಬಿಎಂಟಿಸಿ ಚಾಲಕ ಸಾವು; ಆಮೇಲೇನಾಯ್ತು?
ಇಷ್ಟೆಲ್ಲ ಆಗುತ್ತಿದ್ದಂತೆಯೇ ಸ್ನೇಹಾ ಪೋಷಕರು ಹೆದರಿ, ‘‘ಕುಡಿದು ಬಂದಿದ್ದೀರಾ’’ ಎಂದು ಪ್ರಶ್ನಿಸಿದ್ದರು. ಅಷ್ಟರಲ್ಲಿ ಡಾ. ಪ್ರದೀಪ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ನಂತರ ಸ್ನೇಹಾ ಪೋಷಕರು ವಾರ್ಡ್ ಬಾಯ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೀಗ ಘಟನೆ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸ್ನೇಹಾ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದಾರೆ.
ವರದಿ: ಪ್ರದೀಪ್ ‘ಟಿವಿ9’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Thu, 7 November 24