
ಬೆಂಗಳೂರು, ನ.7: ರಾಜಧಾನಿ ಬೆಂಗಳೂರಿನ ರಾಜಾಜಿನಗರ 5ನೇ ಬ್ಲಾಕ್ನಲ್ಲಿ ನಡೆದ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹತ್ಯೆ ಪ್ರಕರಣ ದೇಶಾದ್ಯಂತ ಕಂಗೆಡಿಸಿದೆ. ಪ್ರಕರಣದ ಮುಖ್ಯ ಆರೋಪಿ, ಕ್ಯಾಬ್ ಚಾಲಕ ಇಂದುಶೇಖರ್ನ ಹಿಂಸಾತ್ಮಕ ಹಿನ್ನೆಲೆ, ನಡವಳಿಕೆ ಹಾಗೂ ಆತ ನಡೆಸಿದ ಪೂರ್ವ ನಿಯೋಜಿತ ಕುಕೃತ್ಯದ ಕರಾಳ ಅಧ್ಯಾಯಗಳು ತನಿಖೆಯ ವೇಳೆ ಒಂದೊಂದಾಗಿ ಹೊರಬರುತ್ತಿವೆ. ಈ ಕುರಿತು ನೆರೆಹೊರೆಯವರು ಹಾಗೂ ಸ್ಥಳೀಯ ಬಾಡಿಗೆದಾರರು ಅತ್ಯಂತ ಆಘಾತಕಾರಿ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆತ ಸದಾ ಜಗಳವಾಡುವ, ಒರಟು ಸ್ವಭಾವದ ವ್ಯಕ್ತಿಯಾಗಿದ್ದು, ಸಣ್ಣಪುಟ್ಟ ವಿಚಾರಗಳಿಗೂ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿಸಿದ್ದಾರೆ.
‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ಜೊತೆ ಮಾತನಾಡಿದ ಇಂದುಶೇಖರ್ ವಾಸವಿದ್ದ ವಾಣಿಜ್ಯ ಕಟ್ಟಡದ ನಿವಾಸಿಗಳು ಹಾಗೂ ಸುತ್ತಮುತ್ತಲ ಅಂಗಡಿಯವರು ಆರೋಪಿಯ ಬಗ್ಗೆ ಆಘಾತಕಾರಿ ಸತ್ಯಗಳನ್ನು ಬಯಲು ಮಾಡಿದ್ದಾರೆ. ಪಾರ್ಕಿಂಗ್ ಸೇರಿದಂತೆ ಅತ್ಯಂತ ಸಣ್ಣ ವಿಚಾರಗಳಿಗೂ ಇಂದುಶೇಖರ್ ಸ್ಥಳೀಯರೊಂದಿಗೆ ಜಗಳಕ್ಕೆ ಇಳಿಯುತ್ತಿದ್ದ. ಸಾರ್ವಜನಿಕರನ್ನು ಅಸಭ್ಯ ಶಬ್ದಗಳಿಂದ ನಿಂದಿಸುತ್ತಾ ಅಶಾಂತಿ ಸೃಷ್ಟಿಸುತ್ತಿದ್ದ. ಈತನ ನಡವಳಿಕೆಗೆ ಹೆದರಿ ಕಟ್ಟಡದ ಇತರ ಬಾಡಿಗೆದಾರರು ಸಂಪರ್ಕವನ್ನೇ ಇಟ್ಟುಕೊಳ್ಳುತ್ತಿರಲಿಲ್ಲ. ಆತನ ಪತ್ನಿ ಮತ್ತು ಮಗಳ ನಡವಳಿಕೆಯೂ ಅಷ್ಟೇ ಒರಟಾಗಿತ್ತು ಎಂದು ನಿವಾಸಿಗಳು ಹೇಳಿದ್ದಾರೆ.
ಇಂದುಶೇಖರ್ ಯಾರೊಂದಿಗಾದರೂ ಗಲಾಟೆ ಮಾಡುವಾಗಲೆಲ್ಲಾ ಆತನ ಮಗಳು ಅದನ್ನು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಳು. ತಾನು ಮಾಧ್ಯಮ ಕ್ಷೇತ್ರಕ್ಕೆ ಸೇರಿದವನೆಂದು ಹೇಳಿಕೊಂಡು ಇಂದುಶೇಖರ್ ಜನರಿಗೆ ಬೆದರಿಸುತ್ತಿದ್ದ. ಕಟ್ಟಡ ಮಾಲೀಕರ ಮಗನೊಂದಿಗೆ ಆಪ್ತನಾಗಿದ್ದ ಇಂದುಶೇಖರ್, 2ನೇ ಮಹಡಿಯಲ್ಲಿ ನವೀಕರಣ ಕಾಮಗಾರಿ ಮಾಡಲು ಜಿಬಿಎ ಅನುಮತಿ ಬೇಕು ಎನ್ನುವ ನೆಪದಲ್ಲಿ ಕೆಲವು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದ. ಈ ವಿಚಾರವಾಗಿ ಸದ್ಯ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ನಡೆಯುತ್ತಿದೆ ಎಂದು ಬಾಡಿಗೆದಾರರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಬೆಂಗಳೂರು ಸರಣಿ ಕೊಲೆ ಪ್ರಕರಣ; ಆ 15 ದಿನಗಳಲ್ಲಿ ಏನಾಯಿತು? ಇಲ್ಲಿದೆ ಕಂಪ್ಲೀಟ್ ಟೈಮ್ಲೈನ್
ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ, ಬದಲಿಗೆ ಅತ್ಯಂತ ನಿಖರವಾಗಿ ಯೋಜನೆ ರೂಪಿಸಿ ನಡೆಸಲಾದ ಪೂರ್ವ ನಿಯೋಜಿತ ಹತ್ಯೆಯಾಗಿದೆ. ಸಾಲದ ಸುಳಿ, ಕುಟುಂಬದ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಆಸ್ತಿ, ಹಣಕಾಸಿನ ವ್ಯಾಜ್ಯಗಳು ಈ ಸರಣಿ ಹತ್ಯೆಗೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸ್ ಕಮಿಷನರ್ ನೀಡಿರುವ ಹೇಳಿಕೆಗಳ ಪ್ರಕಾರ, ಆರೋಪಿ ಇಂದುಶೇಖರ್ ತನ್ನ ಅಪ್ರಾಪ್ತ ಮಗಳನ್ನು ಸಂಪೂರ್ಣವಾಗಿ ಬ್ರೈನ್ ವಾಶ್ ಮಾಡಿ, ತನ್ನ ಕುಕೃತ್ಯಕ್ಕೆ ಆಕೆಯನ್ನು ಬೆಂಬಲವಾಗಿ ಮತ್ತು ಸಹಾಯಕಿಯಾಗಿ ಬಳಸಿಕೊಂಡಿದ್ದಾನೆ. ವಾಣಿಜ್ಯ ಕಟ್ಟಡದ ನೆಲಮಹಡಿಯಲ್ಲಿ 5 ಅಂಗಡಿಗಳು ಹಾಗೂ ಮೊದಲ ಮಹಡಿಯಲ್ಲಿ ರಾಜಕೀಯ ಪಕ್ಷವೊಂದರ ಕಚೇರಿಯಿದೆ. ಕಳೆದ 14 ವರ್ಷಗಳಿಂದ 2ನೇ ಮಹಡಿಯಲ್ಲಿ ವಾಸವಾಗಿದ್ದ ಇಂದುಶೇಖರ್, ಕೊಲೆ ಮಾಡುವಾಗ ಯಾವುದೇ ಕಿರುಚಾಟ ಅಥವಾ ಶಬ್ದ ಹೊರಬರದಂತೆ ಅಚ್ಚುಕಟ್ಟಾಗಿ ಸೈಲೆಂಟ್ ಆಗಿ ಕೃತ್ಯ ಎಸಗಿದ್ದಾನೆ.
ಕಳೆದ ಎರಡು ದಿನಗಳಿಂದ ಪೊಲೀಸರು ರಹಸ್ಯವಾಗಿ ಕಟ್ಟಡಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ಸತತ ವಿಚಾರಣೆಗೆ ಒಳಪಡಿಸಲಾಗಿದ್ದು, ಹತ್ಯೆಗೆ ಬಳಸಿದ ಮಾರಕಾಸ್ತ್ರಗಳು ಹಾಗೂ ಘಟನಾ ಸ್ಥಳದಿಂದ ಪ್ರಮುಖ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಕಲೆಹಾಕಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಮೇಲಷ್ಟೇ ತಮ್ಮ ಕಟ್ಟಡದಲ್ಲೇ ಇಂತಹ ಭೀಕರ ನರಮೇಧ ನಡೆದಿದೆಯೆಂಬ ಸತ್ಯ ತಿಳಿದು ನಿವಾಸಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಪ್ರಮುಖ ಆರೋಪಿ ಇಂದುಶೇಖರ್ ಬಂಧನದಿಂದಾಗಿ ತಾವೀಗ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ