ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆ ಪಕ್ಕ ಪಾರ್ಸೆಲ್ ರೀತಿಯಲ್ಲಿ ಕಟ್ಟಿ ಬಿಸಾಡಿದ್ದ ಮಹಿಳೆಯ ಶವ ಪತ್ತೆ
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಬಳಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆ ಪಕ್ಕ ನವೆಂಬರ್ 27 ರಂದು ಮಹಿಳೆಯೊಬ್ಬರ ಶವ ಪಾರ್ಸೆಲ್ ರೂಪದಲ್ಲಿ ಪತ್ತೆಯಾಗಿದೆ. ಉಸಿರುಗಟ್ಟಿಸಿ ಕೊಲೆ ಮಾಡಿ ಗೋಣಿ ಚೀಲದಲ್ಲಿ ಸುತ್ತಿ ಎಸೆಯಲಾಗಿದೆ. ಬೇತಮಂಗಲ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮೃತದೇಹದ ಗುರುತು ಪತ್ತೆ ಹಾಗೂ ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಕೆಜಿಎಫ್, ನ.27: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಮಹಿಳೆಯೊಬ್ಬರ ಶವವನ್ನು ಪಾರ್ಸೆಲ್ ರೀತಿಯಲ್ಲಿ ಸುತ್ತಿ ಬಿಸಾಡಿರುವುದು ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಗ್ರಾಮದ ಬಳಿ ಇಂದು (ನವೆಂಬರ್ 27) ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇತಮಂಗಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಅಪರಿಚಿತ ಮಹಿಳೆಯ ಗುರುತು ಪತ್ತೆ ಹಾಗೂ ದುಷ್ಕರ್ಮಿಗಳ ಬಂಧನಕ್ಕೆ ಎರಡು ವಿಶೇಷ ತಂಡಗಳನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಸುಂದರಪಾಳ್ಯ ಗ್ರಾಮದ ಬಳಿಯ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಇಂದು ಬೆಳಗ್ಗೆ ಅನುಮಾನಾಸ್ಪದ ಪಾರ್ಸೆಲ್ ರೀತಿಯ ವಸ್ತುವೊಂದು ಕಂಡುಬಂದಿತ್ತು. ಅದರಿಂದ ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೇತಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ಶವವಿರುವುದು ಪತ್ತೆಯಾಗಿದೆ.
ಸುಮಾರು 35 ರಿಂದ 40 ವರ್ಷ ವಯಸ್ಸಿನ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ದುಷ್ಕರ್ಮಿಗಳು, ಆಕೆಯ ಶವವನ್ನು ಕುಳಿತ ಸ್ಥಿತಿಯಲ್ಲಿ ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ತುಂಬಿದ್ದಾರೆ. ನಂತರ ಅದಕ್ಕೆ ಪ್ಲಾಸ್ಟಿಕ್ ಕವರ್ ಮತ್ತು ಪಾರ್ಸೆಲ್ ಪ್ಲಾಸ್ಟರ್ ಸುತ್ತಿ, ಶವವನ್ನು ಸುಲಭವಾಗಿ ಎಳೆದುಕೊಂಡು ಹೋಗಲು ಅನುಕೂಲವಾಗುವಂತೆ ವಾಷಿಂಗ್ ಮಿಷನ್ ಟ್ರಾಲಿ ಮೇಲಿಟ್ಟು ಬಿಗಿಯಾಗಿ ಕಟ್ಟಿ ಬಿಸಾಡಿದ್ದಾರೆ. ಪಾರ್ಸೆಲ್ ಬಿಚ್ಚಿ ನೋಡಿದ ಪೊಲೀಸರು ಈ ದೃಶ್ಯ ಕಂಡು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: ಅನುಮಾನದ ಭೂತಕ್ಕೆ ಯುವತಿ ಬಲಿ: ರೆಜೆನ್ಸಿ ಲಾಡ್ಜ್‌ನಲ್ಲಿ ಕೇರಳ ಮೂಲದ ಯುವತಿಯನ್ನು ಕೊಂದ ಪ್ರಿಯಕರ
ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್, ಡಿವೈಎಸ್ಪಿ ಲಕ್ಷ್ಮಯ್ಯ ಸೇರಿದಂತೆ ಸೋಕೋ ತಂಡ, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಭೇಟಿ ನೀಡಿ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕಾರಿನಲ್ಲಿ ಬಂದು ಶವ ಬಿಸಾಡಿ ಹೋಗಿರುವ ಚಲನವಲನಗಳು ಹೆದ್ದಾರಿ ಟೋಲ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಸುಂದರಪಾಳ್ಯ ಪ್ರದೇಶವು ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗಳಿಗೆ ಹೊಂದಿಕೊಂಡಿರುವುದರಿಂದ, ಹೊರರಾಜ್ಯಗಳಿಂದಲೂ ಶವ ತಂದು ಎಸೆದಿರುವ ಸಾಧ್ಯತೆ ಇದ್ದು ಗಡಿ ಭಾಗದ ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ. ಕೊಲೆಯಾದ ಮಹಿಳೆ ಯಾರು? ಹಂತಕರು ಯಾರು? ಕೊಲೆಗೆ ಕಾರಣವೇನು ಎಂಬುದು ಪೊಲೀಸರ ಸಮಗ್ರ ತನಿಖೆಯಿಂದಷ್ಟೇ ಬಯಲಾಗಬೇಕಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




