ಬೆಂಗಳೂರು: ಕಬ್ಬನ್ ಪಾರ್ಕ್​ನಲ್ಲಿ 13 ದಿನಗಳ ಫ್ಲವರ್ ಶೋ, 15 ಲಕ್ಷ ಹೂಗಿಡಗಳ ಆಕರ್ಷಣೆ

ಬೆಂಗಳೂರಿನ ಕಬ್ಬನ್ ಪಾರ್ಕ್​​ನಲ್ಲಿ ನವೆಂಬರ್ 25ರಿಂದ ಡಿಸೆಂಬರ್ 7ರವರೆಗೆ ‘ಹೂವಿನ ಹಬ್ಬ–2026’ ನಡೆಯಲಿದೆ. 15 ಲಕ್ಷ ಅಲಂಕಾರಿಕ ಹೂಗಿಡಗಳು, ವಿವಿಧ ಜಾತಿಯ ಹೂವುಗಳು ಹಾಗೂ ಸಸ್ಯಗಳ ಪ್ರದರ್ಶನ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದು, ವಾರದ ದಿನಗಳು ಮತ್ತು ವಾರಾಂತ್ಯಕ್ಕೆ ಪ್ರತ್ಯೇಕ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ವಿವರಗಳು ಇಲ್ಲಿವೆ.

ಬೆಂಗಳೂರು: ಕಬ್ಬನ್ ಪಾರ್ಕ್​ನಲ್ಲಿ 13 ದಿನಗಳ ಫ್ಲವರ್ ಶೋ, 15 ಲಕ್ಷ ಹೂಗಿಡಗಳ ಆಕರ್ಷಣೆ
ಕಬ್ಬನ್ ಪಾರ್ಕ್​ನಲ್ಲಿ 13 ದಿನಗಳ ಫ್ಲವರ್ ಶೋ
Edited By:

Updated on: Nov 25, 2026 | 8:31 AM

ಮುಖ್ಯಾಂಶಗಳು

  • ಕಬ್ಬನ್ ಉದ್ಯಾನವನದಲ್ಲಿ 13 ದಿನಗಳ ಪುಷ್ಪ ಸಂಭ್ರಮ
  • ಹೂವಿನ ಹಬ್ಬದಲ್ಲಿ 15 ಲಕ್ಷ ಗಿಡಗಳ ಪ್ರದರ್ಶನ
  • ವಾರಾಂತ್ಯದಲ್ಲಿ ವಯಸ್ಕರಿಗೆ 80 ರೂಪಾಯಿ ಪ್ರವೇಶ ಶುಲ್ಕ

ಬೆಂಗಳೂರು, ನವೆಂಬರ್ 25: ರಾಜಧಾನಿ ಬೆಂಗಳೂರಿನ ಜನರಿಗೆ ಹೂವಿನ ಲೋಕದ ಸೊಬಗನ್ನು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬಂದಿದೆ. ನಗರದ ಚಾಮರಾಜೇಂದ್ರ (ಕಬ್ಬನ್ ಪಾರ್ಕ್) ಉದ್ಯಾನವನದ ಆವರಣದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ‘ಹೂವಿನ ಹಬ್ಬ–2026’ ಆಯೋಜಿಸಲಾಗಿದೆ. ನವೆಂಬರ್ 25ರಿಂದ ಡಿಸೆಂಬರ್ 7ರವರೆಗೆ ಒಟ್ಟು 13 ದಿನಗಳ ಕಾಲ ನಡೆಯಲಿರುವ ಈ ಪುಷ್ಪ ಸಂಭ್ರಮದಲ್ಲಿ ವಿವಿಧ ಬಗೆಯ ಹೂವುಗಳು, ಅಲಂಕಾರಿಕ ಸಸ್ಯಗಳು ಹಾಗೂ ಆಕರ್ಷಕ ಪುಷ್ಪ ವಿನ್ಯಾಸಗಳು ಸಾರ್ವಜನಿಕರ ಗಮನ ಸೆಳೆಯಲಿವೆ.

ನಗರದ ಜನರ ಜೀವನದಲ್ಲಿ ಹಸಿರು, ಪ್ರಕೃತಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಹೂವಿನ ಹಬ್ಬವನ್ನು ಆಯೋಜಿಸಲಾಗಿದೆ. ವಿವಿಧ ಜಾತಿಯ ಹೂವುಗಳು ಹಾಗೂ ಅಲಂಕಾರಿಕ ಸಸ್ಯಗಳ ಪ್ರದರ್ಶನ ಈ ಬಾರಿಯ ಹಬ್ಬದ ಪ್ರಮುಖ ಆಕರ್ಷಣೆಯಾಗಿರಲಿದೆ.

Loading...

ಕಬ್ಬನ್ ಪಾರ್ಕ್ ಫ್ಲವರ್ ಶೋದಲ್ಲಿ 15 ಲಕ್ಷ ಹೂಗಿಡಗಳ ಆಕರ್ಷಣೆ

ಈ ಬಾರಿಯ ಹೂವಿನ ಹಬ್ಬದಲ್ಲಿ ಲಿಸಿಯಾಂಥಸ್, ಪೆಟೂನಿಯಾ, ಕ್ರೈಸಾಂಥಿಮಮ್, ಸೆಲೋಸಿಯಾ, ಕಾಕ್ಸ್‌ಕಾಂಬ್, ಮಾರಿಗೋಲ್ಡ್, ಜೀನಿಯಾ, ಡಯಾಂಥಸ್, ಸಾಲ್ವಿಯಾ, ಸ್ನ್ಯಾಪ್‌ಡ್ರಾಗನ್ ಹಾಗೂ ಸೂರ್ಯಕಾಂತಿ ಸೇರಿದಂತೆ ಹಲವು ಬಗೆಯ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ. ಇಂಪೇಷಿಯನ್ಸ್, ಬಾಲ್ಸಮ್, ಟೊರೇನಿಯಾ, ಬಿಗೋನಿಯಾ, ಗಜಾನಿಯಾ ಮತ್ತು ಪೆಂಟಾಸ್ ಸೇರಿದಂತೆ ವಿವಿಧ ಜಾತಿಯ ಹೂವಿನ ಗಿಡಗಳೂ ಪ್ರದರ್ಶನದಲ್ಲಿರಲಿವೆ.

ಇದರ ಜೊತೆಗೆ ಫಿಲೋಡೆಂಡ್ರಾನ್, ಕೋಲಿಯಸ್, ಶೆಫ್ಲೆರಾ, ರಾಫಿಸ್ ಪಾಮ್ ಹಾಗೂ ಬ್ರೊಮೆಲಿಯಾಡ್ಸ್‌ನಂತಹ ಅಲಂಕಾರಿಕ ಸಸ್ಯಗಳನ್ನೂ ಪ್ರದರ್ಶಿಸಲಾಗುತ್ತದೆ. ಒಟ್ಟು 15 ಲಕ್ಷ ಅಲಂಕಾರಿಕ ಹೂಗಿಡಗಳನ್ನು ಆಕರ್ಷಕವಾಗಿ ಜೋಡಿಸಲಾಗಿದ್ದು, ಹೂವಿನ ಹಬ್ಬಕ್ಕೆ ವಿಶೇಷ ಮೆರುಗು ನೀಡಲಿವೆ.

ಕಬ್ಬನ್ ಪಾರ್ಕ್ ಹೂವಿನ ಹಬ್ಬಕ್ಕೆ ಪ್ರವೇಶ ಶುಲ್ಕ ಎಷ್ಟು?

ಹೂವಿನ ಹಬ್ಬಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಾರದ ದಿನಗಳಲ್ಲಿ ವಯಸ್ಕರಿಗೆ 50 ರೂಪಾಯಿ ಹಾಗೂ ಮಕ್ಕಳಿಗೆ 20 ರೂಪಾಯಿ ಶುಲ್ಕ ಇರಲಿದೆ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 80 ರೂಪಾಯಿ ಹಾಗೂ ಮಕ್ಕಳಿಗೆ 20 ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆ ಸಾಧ್ಯತೆ: ಬೆಂಗಳೂರಿಗೂ ಗುಡುಗು ಸಹಿತ ಮಳೆ ಮುನ್ಸೂಚನೆ

ನವೆಂಬರ್ 25ರಂದು ಆರಂಭವಾಗಿರುವ ಹೂವಿನ ಹಬ್ಬ ಡಿಸೆಂಬರ್ 7ರವರೆಗೆ ನಡೆಯಲಿದೆ. ಬೆಂಗಳೂರಿನ ನಿವಾಸಿಗಳು ಮಾತ್ರವಲ್ಲದೆ, ನಗರಕ್ಕೆ ಭೇಟಿ ನೀಡುವ ಪ್ರವಾಸಿಗರೂ ಕಬ್ಬನ್ ಉದ್ಯಾನವನದಲ್ಲಿ ಹೂವುಗಳ ವೈವಿಧ್ಯ ಮತ್ತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More
Loading...
Unable to load recommendations.
Follow Us