ಬೆಂಗಳೂರು: ಶಿಥಿಲಾವಸ್ಥೆಗೆ ತಲುಪಿದ ಫ್ಲೈಓವರ್ ತಡೆಗೋಡೆ; ಜನರ ಜೀವಕ್ಕೆ ಕಂಟಕ!

Tumakur Road flyover danger: ಬೆಂಗಳೂರಿನ ಪ್ರಮುಖ ರಸ್ತೆಯೊಂದರಲ್ಲಿ ತಡೆಗೋಡೆಯೊಂದು ಸಂಪೂರ್ಣ ಶಿಥಿಲಗೊಂಡು ರಸ್ತೆಯ ಕಡೆಗೇ ವಾಲಿ ನಿಂತಿದ್ದರೂ, ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ಕುಳಿತಿದ್ದಾರೆ. ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಕೂಡಲೇ ದುರಸ್ತಿ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಬೆಂಗಳೂರು: ಶಿಥಿಲಾವಸ್ಥೆಗೆ ತಲುಪಿದ ಫ್ಲೈಓವರ್ ತಡೆಗೋಡೆ; ಜನರ ಜೀವಕ್ಕೆ ಕಂಟಕ!
ಬೀಳುವ ಹಂತದಲ್ಲಿರುವ ಫ್ಲೈಓವರ್ ತಡೆಗೋಡೆ
Image Credit source: tv9 kannada
Edited By:

Updated on: Jul 15, 2026 | 4:31 PM

ಬೆಂಗಳೂರು, ಜುಲೈ 15: ಸಿಲಿಕಾನ್ ಸಿಟಿಯಲ್ಲಿ (Bengaluru) ರಸ್ತೆ ಗುಂಡಿಗಳಿಂದ ಹೈರಾಣಾಗಿರುವ ವಾಹನ ಸವಾರರಿಗೆ ಈಗ ಮತ್ತೊಂದು ಹೊಸ ಗಂಡಾಂತರ ಎದುರಾಗಿದೆ. ನಗರದ ಪ್ರಮುಖ ರಸ್ತೆಯೊಂದರಲ್ಲಿ ಶಿಥಿಲಾವಸ್ಥೆಗೊಂಡು ರಸ್ತೆಯ ಕಡೆಗೆ ವಾಲಿ ನಿಂತಿರುವ ತಡೆಗೋಡೆಯೊಂದು ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಪಾಯ ಕಣ್ಣೆದುರೇ ಕಾಣುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಮೇಲ್ಸೇತುವೆ ತಡೆಗೋಡೆ ದುರಸ್ತಿಗೆ ಜಿಬಿಎ (GBA) ಮೀನಾಮೇಷ ಎಣಿಸುತ್ತಿದೆ.

ಶಿಥಿಲಾವಸ್ಥೆಗೆ ತಲುಪಿದ ಮೇಲ್ಸೇತುವೆಯ ತಡೆಗೋಡೆ 

ಬೆಂಗಳೂರಿನಲ್ಲಿ ಜಿಬಿಎ ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಗೆ ಮತ್ತೊಂದು ನಿದರ್ಶನ ಸಿಕ್ಕಿದೆ. ತುಮಕೂರು ರಸ್ತೆಯ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸಮೀಪದ ಮೇಲ್ಸೇತುವೆಯ ತಡೆಗೋಡೆ ಶಿಥಿಲಾವಸ್ಥೆಗೆ ತಲುಪಿದೆ. ತಡೆಗೋಡೆಯ ಕಬ್ಬಿಣದ ಕಂಬಿಗಳು ಹೊರಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಭೀತಿ ಎದುರಾಗಿದೆ. ಯಶವಂತಪುರ ಟು ರಾಜಾಜಿನಗರ ಸಂಪರ್ಕಿಸುವ ಅತ್ಯಂತ ಪ್ರಮುಖ ರಸ್ತೆಯಲ್ಲೇ ಈ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಲ್ಲಿ ಆತಂಕ ಮನೆ ಮಾಡಿದೆ.

ವಾಹನ ಸವಾರರು ಹೇಳಿದ್ದಿಷ್ಟು 

“ಬೆಂಗಳೂರಿನಲ್ಲಿ ಜನಸಾಮಾನ್ಯರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ. ಮೇಲಿಂದ ಯಾವಾಗ ಏನು ಬಂದು ಬೀಳುತ್ತದೋ ಎಂಬ ಭಯದಲ್ಲೇ ಓಡಾಡುವ ಪರಿಸ್ಥಿತಿ ಇದೆ,” ಎಂದು ವಾಹನ ಸವಾರರಾದ ಸಾಂಬಯ್ಯ ಅಳಲು ತೋಡಿಕೊಂಡಿದ್ದಾರೆ. ಮತ್ತೊಬ್ಬ ವಾಹನ ಸವಾರ ಚಂದ್ರಶೇಖರ್ ಮಾತನಾಡಿದ್ದು, “ಅಪಾಯಕಾರಿ ತಡೆಗೋಡೆಯನ್ನು ತೆರವುಗೊಳಿಸಿ ಹೊಸ ಗೋಡೆ ನಿರ್ಮಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬಲಿಗಾಗಿ ಕಾದಿವೆ ಅಪಾಯಕಾರಿ ಗೋಡೆಗಳು? ಜೋರು ಮಳೆ ಬಂದ್ರೆ ಕುಸಿಯುವುದು ಗ್ಯಾರಂಟಿ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ತುರ್ತು ಕ್ರಮ ಅಗತ್ಯವಾಗಿದೆ. ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು, ತಕ್ಷಣವೇ ಈ ಶಿಥಿಲಗೊಂಡ ತಡೆಗೋಡೆಯನ್ನು ತೆರವುಗೊಳಿಸಿ ಹೊಸ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಹಾಗೂ ವಾಹನ ಸವಾರರು ಬಿಗಿ ಒತ್ತಾಯ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us