ಬಿಬಿಎಂಪಿ ಕಸ ಗುತ್ತಿಗೆ ವಿವಾದ: ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ

Karnataka Scrutinizes 30-Year Bengaluru Waste Deal: ಬೆಂಗಳೂರಿನ ಕಸ ನಿರ್ವಹಣೆಯ 30 ವರ್ಷಗಳ, ₹39,437 ಕೋಟಿ ಟೆಂಡರ್ ವಿವಾದಕ್ಕೆ ಕರ್ನಾಟಕ ಸರ್ಕಾರ ಮನಸ್ಸು ಬದಲಿಸಿದೆ. ಹಣಕಾಸು ಇಲಾಖೆಯ ಆಕ್ಷೇಪಣೆಗಳಿಂದಾಗಿ, ಟೆಂಡರ್ ನಿಯಮಗಳನ್ನು ಪರಿಶೀಲಿಸಲು ನಾಲ್ಕು ಸದಸ್ಯರ ತನಿಖಾ ಸಮಿತಿ ರಚಿಸಲಾಗಿದೆ. ಅತಿಯಾದ ವೆಚ್ಚ, 5% ವಾರ್ಷಿಕ ಏರಿಕೆ ಮತ್ತು ದೀರ್ಘಾವಧಿಯ ಗುತ್ತಿಗೆಯ ಬಗ್ಗೆ ಇಲಾಖೆ ಕಳವಳ ವ್ಯಕ್ತಪಡಿಸಿತ್ತು. ಸಮಿತಿಯು ಏಳು ದಿನಗಳಲ್ಲಿ ವರದಿ ಸಲ್ಲಿಸಬೇಕು.

ಬಿಬಿಎಂಪಿ ಕಸ ಗುತ್ತಿಗೆ ವಿವಾದ: ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ
ಕಸದ ಗಾಡಿ
Image Credit source: DH Photo

Updated on: Jun 07, 2026 | 1:24 PM

ಬೆಂಗಳೂರು, ಜೂನ್ 7: ಮುಂದಿನ 30 ವರ್ಷಗಳಿಗೆ ಬೆಂಗಳೂರಿನ ಕಸ ನಿರ್ವಹಿಸುವ ಗುತ್ತಿಗೆಗೆ (Garbage Management) ಅನುಮೋದನೆ ನೀಡಿದ್ದ ಸರ್ಕಾರ ಇದೀಗ ಮನಸು ಬದಲಾಯಿಸಿದೆ. 39,437 ಕೋಟಿ ರೂಗಳ ಬೃಹತ್ ಟೆಂಡರ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ತನಿಖಾ ಸಮಿತಿಯನ್ನು ರಚಿಸಿದೆ. ಈ ಟೆಂಡರ್‌ನಲ್ಲಿನ ವೆಚ್ಚವು ಅತಿಯಾಗಿದೆಯೆಂದು ಮತ್ತು 30 ವರ್ಷಗಳ ಸುದೀರ್ಘ ಅವಧಿಗೆ ಒಂದೇ ಕಂಪನಿಗೆ ಗುತ್ತಿಗೆ ನೀಡಿರುವುದು ಸರಿಯಲ್ಲವೆಂದು ರಾಜ್ಯ ಹಣಕಾಸು ಇಲಾಖೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ನಿಯಮಗಳನ್ನು ಪರಿಶೀಲಿಸಲು ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಡೆಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ.

ಈ ನಾಲ್ಕು ಸದಸ್ಯರ ಸಮಿತಿಯಲ್ಲಿ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ಗ್ರೇಟರ್ ಬೆಂಗಳೂರು ಅಥಾರಿಟಿಯ (GBA) ಮುಖ್ಯ ಇಂಜಿನಿಯರ್ ಮತ್ತು ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ (ಸದಸ್ಯ ಕಾರ್ಯದರ್ಶಿ) ಇದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೂರ್ವ ನಗರ ನಿಗಮದಿಂದ ಬೃಹತ್ ಸ್ವಚ್ಛತಾ ಸಪ್ತಾಹ; 100 ಟನ್ ಕಸ ವಿಲೇವಾರಿ!

ಹಣಕಾಸು ಇಲಾಖೆ ಎತ್ತಿರುವ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಏಳು ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಹಣಕಾಸು ಇಲಾಖೆ ವ್ಯಕ್ತಪಡಿಸಿದ ಪ್ರಮುಖ ಆಕ್ಷೇಪಣೆಗಳು

  • ಸರ್ಕಾರವು ಈ ಯೋಜನೆಗಾಗಿ 33,047 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಿತ್ತು, ಆದರೆ ಬಿಡ್‌ದಾರರು 39,437 ಕೋಟಿ ರೂ. ಕೋಟ್ ಮಾಡಿದ್ದಾರೆ. ಅಂದರೆ ಅಂದಾಜಿನ ಮೊತ್ತಕ್ಕಿಂತ ಸುಮಾರು 6,390 ಕೋಟಿ ರೂ. ಹೆಚ್ಚು. ಇದು ಹಣಕಾಸು ಇಲಾಖೆ ತಕರಾರು ಎತ್ತಿರುವ ಒಂದು ಸಂಗತಿ.
  • ಒಪ್ಪಂದದಲ್ಲಿ ವಾರ್ಷಿಕ 5% ದರ ಏರಿಕೆಯ ಷರತ್ತು ಇದೆ. 30 ವರ್ಷಗಳ ಅವಧಿಯಲ್ಲಿ ಇದು ಮೂಲ ದರಕ್ಕಿಂತ ಸುಮಾರು 4.5 ಪಟ್ಟು ಅಧಿಕವಾಗಲಿದೆ ಎಂದೂ ಇಲಾಖೆ ಎಚ್ಚರಿಸಿದೆ.
  • ಇಡೀ ನಗರದ ಕಸ ನಿರ್ವಹಣೆಯನ್ನು 30 ವರ್ಷಗಳ ಕಾಲ ಒಬ್ಬರೇ ಖಾಸಗಿ ಕಂಪನಿಗೆ ನೀಡುವುದರಿಂದ “ವೆಂಡರ್ ಲಾಕ್-ಇನ್” (Vendor Lock-in) ಪರಿಸ್ಥಿತಿ ಉಂಟಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.
  • ಟೆಂಡರ್ ಪ್ರಕಾರ, 30 ವರ್ಷ ಕಾಲ ವಾರ್ಷಿಕವಾಗಿ ಶೇ. 5ರಷ್ಟು ಏರಿಕೆ ಮಾಡಬೇಕು. ಇದಾದರೆ 30 ವರ್ಷದ ಬಳಿಕ ಕಸ ನಿರ್ವಹಣೆಯ ಗುತ್ತಿಗೆಯ ವೆಚ್ಚ ಈಗಿರುವುದಕ್ಕಿಂತ ನಾಲ್ಕೂವರೆ ಪಟ್ಟು ಹೆಚ್ಚುತ್ತದೆ ಎಂಬುದು ಹಣಕಾಸು ಇಲಾಖೆಯ ತಗಾದೆ.
  • ಸರ್ಕಾರವೇ ಭೂಮಿ ಒದಗಿಸುತ್ತಿರುವಾಗ, ಇಷ್ಟು ದೀರ್ಘಾವಧಿಯ (30 ವರ್ಷ) ಅವಶ್ಯಕತೆಯಿಲ್ಲ ಎಂದು ಅಭಿಪ್ರಾಯಪಟ್ಟಿರುವ ಇಲಾಖೆ, ಇದನ್ನು 10 ವರ್ಷಗಳಿಗೆ ಸೀಮಿತಗೊಳಿಸುವಂತೆ ಮತ್ತು ವಾರ್ಷಿಕ ಏರಿಕೆ ದರವನ್ನು 2.5%ಕ್ಕೆ ಮಿತಿಗೊಳಿಸುವಂತೆ ಶಿಫಾರಸು ಮಾಡಿತ್ತು.

ಇದನ್ನೂ ಓದಿ: Bengaluru Air Quality: ಬೆಂಗಳೂರಿನಲ್ಲಿ ಉತ್ತಮ ವಾಯು ಗುಣಮಟ್ಟ: ಸಿಲ್ಕ್ ಬೋರ್ಡ್‌ನಲ್ಲಿ ಮಾತ್ರ ಕೊಂಚ ಏರಿಕೆ

ಈ ಟೆಂಡರ್ ಅನ್ನು ದೆಹಲಿ ಮೂಲದ ‘ಡೆಲ್ಲಿ ಎಂಎಸ್‌ಡಬ್ಲ್ಯೂ ಸೊಲ್ಯೂಷನ್ಸ್ ಲಿಮಿಟೆಡ್’ಗೆ ನೀಡಲಾಗಿದೆ. ಇದು ಹೈದರಾಬಾದ್ ಮೂಲದ ರಾಮ್ಕಿ ಗ್ರೂಪ್‌ನ ಸಹವರ್ತಿ ಸಂಸ್ಥೆಯಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us