ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ: ಅರಮನೆ ಮೈದಾನದಲ್ಲಿ ಬೃಹತ್ ಮುಸ್ಲಿಂ ಸಮಾವೇಶ
ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಈದ್ ಮಿಲಾದ್ ಕೂಡ ಒಂದು. ಪ್ರವಾದಿ ಮೊಹಮ್ಮದರ ಜನ್ಮದಿನದ ಅಂಗವಾಗಿ ಆಚರಣೆ ಮಾಡುವ ಹಬ್ಬಕ್ಕೆ ಬೆಂಗಳೂರು ನಗರವೂ ಸಜ್ಜಾಗಿದೆ. ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ಬೃಹತ್ ಸಮಾವೇಶ ಕೂಡ ಇದೆ. ಮತ್ತೊಂದೆಡೆ ಓಣಂ ಹಬ್ಬ ಕೂಡ ಇದ್ದು, ಬೆಂಗಳೂರು ರಂಗೇರಿದೆ.

ಬೆಂಗಳೂರು, ಸೆಪ್ಟೆಂಬರ್ 5: ಪ್ರಪಂಚದಾದ್ಯಂತ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್-ಎ-ಮಿಲಾದ್ (Eid-e-Milad-Un-Nabi) ಎಂದು ಆಚರಿಸುತ್ತಾರೆ. ಈ ದಿನವನ್ನು ನಬಿದ್, ಮೌಲಿದ್ ಅಥವಾ ಮೌಲಿದ್ ಆನ್-ನಬಿ ಎಂದೂ ಕರೆಯಲಾಗುತ್ತದೆ. ಈದ್-ಎ-ಮಿಲಾದ್ ಹಬ್ಬ ಆಚರಿಸಲು ಮುಸಲ್ಮಾನರು ಭಕ್ತಿ ಭಾವದಿಂದ ಸಜ್ಜಾಗಿದ್ದಾರೆ. ನಗರದ ಗಾಂಧಿನಗರದಲ್ಲಿ ಒಂದು ದಿನ ಮುಂಚಿತವಾಗಿ ಹಬ್ಬದ ಹಿನ್ನೆಲೆ ಸಾರ್ವಜನಿಕರಿಗೆ ಹಣ್ಣು, ಡ್ರೈ ಫ್ರೂಟ್, ಶರಬತ್ ಹಚ್ಚಿ ಸಂಭ್ರಮಿಸಲಾಯಿತು. ಇಲ್ಲಿನ ಒಟ್ಟು 7 ಬಜಾರ್ ಗಳ ವರ್ತಕರು ಸೇರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈದ್-ಎ-ಮಿಲಾದ್ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅರಮನೆ ಮೈದಾನದಲ್ಲಿ ಶುಕ್ರವಾರ ಮತ್ತು ಶನಿವಾರ ಬೃಹತ್ ಧಾರ್ಮಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಪ್ರತಿ ವರ್ಷ ನಗರದ ಮೂರ್ನಾಲ್ಕು ಕಡೆಗಳಲ್ಲಿ ನಡೆಯುತ್ತಿದ್ದ ಸಮಾವೇಶ ಈ ಬಾರಿ ಒಂದೇ ಕಡೆ ನಡೆಯಲಿದೆ. ಇನ್ನು ಕಾರ್ಯಕ್ರಮಕ್ಕೆ ಹಲವು ಪ್ರಮುಖ ಮುಸ್ಲಿಂ ಧರ್ಮ ಗುರುಗಳು ವಿದೇಶಗಳಿಂದ ಆಗಮಿಸಲಿದ್ದಾರೆ ಎನ್ನಲಾಗಿದೆ. ಈ ವಿಚಾರ ಈಗಾಗಲೇ ಹಲವು ಹಿಂದೂಪರ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ಆದರೆ ಕಾನೂನು ಚೌಕಟ್ಟಿನಲ್ಲೇ ಸಮಾವೇಶ ಜರುಗಲಿದೆ ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಳ್ಳತನಕ್ಕೆಂದು ಪಿಜಿಗೆ ನುಗ್ಗಿ ಯುವತಿಯ ಕಾಲು ಸವರಿ ಎಸ್ಕೇಪ್ ಆಗಿದ್ದವ ಕೊನೆಗೂ ಅರೆಸ್ಟ್
ನಗರದ ಪ್ರಮುಖ ಮಸೀದಿಗಳಲ್ಲಿ ನಮಾಜ್, ಪ್ರಾರ್ಥನೆಗಳು ಜರುಗಲಿವೆ. ಮತ್ತೊಂದೆಡೆ, ಕೇರಳಿಗರ ಪ್ರಮುಖ ಹಬ್ಬ ಓಣಂ ಸಹ ಇಂದೇ ಇದ್ದು, ನಗರದಲ್ಲಿ ವಾಸವಿರುವ ಮಲಯಾಳಿ ಭಾಷಿಕರು ಹಬ್ಬಕ್ಕೆ ಸಿದ್ಧರಾಗಿದ್ದಾರೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:45 am, Fri, 5 September 25




