
ಬೆಂಗಳೂರು, ಆಗಸ್ಟ್ 06: ಸಾರ್ವಜನಿಕರಿಗೆ ಸ್ವಚ್ಛ, ಸುರಕ್ಷಿತ ಹಾಗೂ ಸುಲಭವಾಗಿ ಬಳಸಬಹುದಾದ ಶೌಚಾಲಯಗಳ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ನಗರದಲ್ಲಿ ಈಜೀ ಹೆಸರಿನ ಮಾಡ್ಯುಲರ್ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಆರಂಭಿಸಿದೆ. ಈ ಶೌಚಾಲಯಗಳು ಸಂಪೂರ್ಣ ಉಚಿತವಾಗಿದ್ದು, ಸಾಂಪ್ರದಾಯಿಕ ಸಾರ್ವಜನಿಕ ಶೌಚಾಲಯಗಳಿಗಿಂತ ಹೆಚ್ಚು ಸ್ವಚ್ಛತೆ, ಸುಲಭ ನಿರ್ವಹಣೆ ಮತ್ತು ಉತ್ತಮ ಪ್ರವೇಶ ವ್ಯವಸ್ಥೆಯನ್ನು ಹೊಂದಿವೆ.
ಬೆಂಗಳೂರು ನಗರದಲ್ಲಿ ಒಟ್ಟು 35 ಮಾಡ್ಯುಲರ್ ಶೌಚಾಲಯಗಳನ್ನು ನಿರ್ಮಿಸಲು ಬಿಎಸ್‌ಡಬ್ಲ್ಯುಎಂಎಲ್ ಯೋಜನೆ ರೂಪಿಸಿದೆ. ಆ ಪೈಕಿ 34 ಸ್ಥಳಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಕೊನೆಯ ಶೌಚಾಲಯದ ಕಾಮಗಾರಿ ಬಸವನಗುಡಿಯಲ್ಲಿ ಆರಂಭವಾಗಿದ್ದು, ಮೊದಲ ಶೌಚಾಲಯವನ್ನು ಮೆಜೆಸ್ಟಿಕ್‌ನಲ್ಲಿ ಸೋಮವಾರ ಉದ್ಘಾಟಿಸಲಾಗಿದೆ. ಬ್ಯಾಟರಾಯನಪುರದಲ್ಲಿ 3 ಹಾಗೂ ಯಶವಂತಪುರದಲ್ಲಿ 4 ಶೌಚಾಲಯಗಳು ಉದ್ಘಾಟನೆಗೆ ಸಿದ್ಧವಾಗಿವೆ.
ಇದನ್ನೂ ಓದಿ: ಬಿಎಂಟಿಸಿಯಲ್ಲಿ ಡಿಜಿಟಲ್ ಕ್ರಾಂತಿ: ಯುಪಿಐನಿಂದಲೇ ಶೇ.51ಕ್ಕೂ ಹೆಚ್ಚು ಟಿಕೆಟ್ ಆದಾಯ!
15 ಅಡಿ × 40 ಅಡಿ ಗಾತ್ರದ ಈ ಮಾಡ್ಯುಲರ್ ಶೌಚಾಲಯಗಳನ್ನು ಇಂದಿರಾ ಕ್ಯಾಂಟೀನ್ ಮಾದರಿಯ ಪ್ರೀಕಾಸ್ಟ್ ಘಟಕಗಳಿಂದ ನಿರ್ಮಿಸಲಾಗಿದೆ. ಇದರಿಂದ ಸ್ಥಳದಲ್ಲೇ ಕಡಿಮೆ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇವುಗಳಲ್ಲಿ ಸೆನ್ಸರ್ ಆಧಾರಿತ ಸ್ವಯಂಚಾಲಿತ ಫ್ಲಷ್ ವ್ಯವಸ್ಥೆ, ನೈಸರ್ಗಿಕ ಗಾಳಿ ಸಂಚಾರಕ್ಕೆ ವಿಶೇಷ ಲೋಹದ ಜಾಲರಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಎಸ್‌ಡಬ್ಲ್ಯುಎಂಎಲ್ ಉಪ ಮಹಾಪ್ರಬಂಧಕ ಭೀಮೇಶ್ ಅವರ ಪ್ರಕಾರ, ಪ್ರತಿ ಶೌಚಾಲಯದ ನಿರ್ವಹಣೆಗೆ ತಿಂಗಳಿಗೆ ಸುಮಾರು 50,000 ರೂ. ವೆಚ್ಚವಾಗಲಿದ್ದು, ಇದರಲ್ಲಿ ಸಿಬ್ಬಂದಿ ವೇತನ, ವಿದ್ಯುತ್ ಮತ್ತು ನೀರಿನ ಶುಲ್ಕ ಸೇರಿವೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:43 pm, Thu, 6 August 26