
ಬೆಂಗಳೂರು, ಏಪ್ರಿಲ್ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಈ ಬಾರಿ ಸೂರ್ಯನ ತಾಪ ದಾಖಲೆ ಮಟ್ಟಕ್ಕೆ ಏರಿದೆ. ಈಗಾಗಲೇ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, 38 ಡಿಗ್ರಿ ಸೆಲ್ಸಿಯಸ್ ವರೆಗೂ ಏರಿಕೆಯಾಗಬಹುದು ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ರಣಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲದೆ, ಮೂಕಪ್ರಾಣಿಗಳೂ ತತ್ತರಿಸುತ್ತಿವೆ. ಮುಖ್ಯವಾಗಿ ಹುತ್ತದೊಳಗಿನ ಶಾಖ ತಾಳಲಾರದೆ ವಿಷಕಾರಿ ಹಾವುಗಳು (Snakes) ತಂಪಾದ ಜಾಗ ಹುಡುಕುತ್ತಾ ಮನೆಗಳಿಗೆ ನುಗ್ಗುತ್ತಿವೆ. ಶೂಗಳ ಒಳಗೆ, ಅಡುಗೆ ಮನೆ, ಬಾತ್‌ರೂಮ್ ಹಾಗೂ ವಾಹನಗಳ ಎಂಜಿನ್ ಭಾಗದಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ನಗರವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಹಾವುಗಳು ಮೊಟ್ಟೆಯಿಟ್ಟು ಮರಿ ಮಾಡುವ ಸಮಯ. ಹೀಗಾಗಿ ಈ ಅವಧಿಯಲ್ಲಿ ಹಾವುಗಳ ಸಂಚಾರ ಹೆಚ್ಚಾಗಿರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅಥವಾ ಯೂಟ್ಯೂಬ್ ನೋಡಿ ತಾವೇ ಹಾವು ಹಿಡಿಯಲು ಮುಂದಾಗುವವರ ಸಂಖ್ಯೆ ಹೆಚ್ಚಿದೆ. ಇದು ಅತ್ಯಂತ ಅಪಾಯಕಾರಿ. ಇದರಿಂದ ಹಾವುಗಳಿಗೆ ಹಾನಿಯಾಗುವುದಲ್ಲದೆ, ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಉರಗ ತಜ್ಞ ಮೋಹನ್ ಎಚ್ಚರಿಕೆ ನೀಡಿದ್ದಾರೆ.
ಶಾಲೆಗಳಿಗೆ ಬೇಸಿಗೆ ರಜೆ ನೀಡಿರುವುದರಿಂದ ಮಕ್ಕಳು ಮನೆಯಲ್ಲಿ ಅಥವಾ ಕಾಂಪೌಂಡ್ ಆವರಣದಲ್ಲಿ ಆಟವಾಡುತ್ತಿರುತ್ತಾರೆ. ಸಣ್ಣ ಮಕ್ಕಳಿಗೆ ಹಾವುಗಳ ಅಪಾಯದ ಬಗ್ಗೆ ಅರಿವಿರುವುದಿಲ್ಲ. ಪೋಷಕರು ಕೆಲಸಕ್ಕೆ ಹೋದಾಗ ಮಕ್ಕಳು ಒಂಟಿಯಾಗಿ ಆಟವಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಬಿಸಿಲು ಆರಂಭವಾದ ಮೇಲೆ ಮಕ್ಕಳನ್ನು ಹೊರಗೆ ಕಳಿಸಲು ಭಯವಾಗುತ್ತಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ