
ಬೆಂಗಳೂರು, ನ.27: ಪೆಟ್ರೋಲ್‌ನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ E20 (ಶೇ. 20ರಷ್ಟು ಎಥನಾಲ್) ಮಿತಿಯನ್ನು ಮೀರಿ ಹೆಚ್ಚುವರಿ ಎಥನಾಲ್ ಮಿಶ್ರಣ ಮಾಡುತ್ತಿರುವ ಗಂಭೀರ ಪ್ರಕರಣ ಬೆಂಗಳೂರಿನ ದೇವನಗೊಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಟರ್ಮಿನಲ್‌ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಐಒಸಿಎಲ್ ಟರ್ಮಿನಲ್‌ನ ಉಸ್ತುವಾರಿ ಅಧಿಕಾರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಶುಕ್ರವಾರ (ನವೆಂಬರ್ 27) ಮಾಹಿತಿ ನೀಡಿದ್ದಾರೆ.
ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ನವೆಂಬರ್ 25ರಂದು ತೈಲ ಕಂಪನಿಗಳ ಟರ್ಮಿನಲ್‌ಗಳಲ್ಲಿನ ಮಾಸ್ ಫ್ಲೋ ಮೀಟರ್‌ಗಳ ಪರಿಶೀಲನೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ದೇವನಗೊಂದಿ ಐಒಸಿಎಲ್ ಟರ್ಮಿನಲ್‌ನ ಬೇ ನಂಬರ್ 9ರ ಮೀಟರ್ ಪರಿಶೀಲಿಸಿದಾಗ, ಪ್ರತಿ 3,000 ಲೀಟರ್‌ಗೆ 14 ಲೀಟರ್ ಹೆಚ್ಚುವರಿ ಎಥನಾಲ್ ಪೂರೈಕೆಯಾಗುತ್ತಿರುವುದು ಹಾಗೂ ಮೋಟಾರ್ ಗ್ಯಾಸೋಲಿನ್‌ನಲ್ಲಿ (ಪೆಟ್ರೋಲ್) 4 ರಿಂದ 6 ಲೀಟರ್ ಕೊರತೆ ಇರುವುದು ಪತ್ತೆಯಾಗಿದೆ. ಅದೇ ರೀತಿ ಬೇ ನಂಬರ್ 4ರ ಮೀಟರ್‌ನಲ್ಲೂ ಪ್ರತಿ 3,000 ಲೀಟರ್‌ಗೆ 3 ಲೀಟರ್ ಅಧಿಕ ಎಥನಾಲ್ ಮಿಶ್ರಣವಾಗುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ರಾಯಚೂರು ಕೃಷಿ ವಿವಿಯಲ್ಲಿ 75 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಆದೇಶ
ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥನಾಲ್ ಮಿಶ್ರಣ ಮತ್ತು ಗ್ಯಾಸೋಲಿನ್ ಕೊರತೆಯಿಂದಾಗಿ ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ಮಿತಿ ಮೀರಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಹಕರು, ಪೆಟ್ರೋಲ್ ಬಂಕ್ ವಿತರಕರು ಹಾಗೂ ಇತರೆ ಪಾಲುದಾರರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐಒಸಿಎಲ್ ಟರ್ಮಿನಲ್ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಏಳು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ. ಅಲ್ಲದೆ, ಅಳತೆ ವ್ಯವಸ್ಥೆಗಳ ನಿಖರತೆಯನ್ನು ದೃಢಪಡಿಸುವವರೆಗೆ ಸಂಬಂಧಪಟ್ಟ ಮೀಟರ್‌ಗಳ ವಾಣಿಜ್ಯ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ತೃಪ್ತಿಕರ ವಿವರಣೆ ನೀಡದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ