5 ದಿನಗಳಿಂದ 400 ಕೆವಿ ವಿದ್ಯುತ್ ಲೈನಲ್ಲಿ ಸಿಲುಕಿದ್ದ ಗಿಡುಗನ ರಕ್ಷಣೆ: ವಿದ್ಯುತ್ ಕಡಿತಗೊಳಿಸದೇ ನಡೆಯಿತು ರೋಚಕ ಕಾರ್ಯಾಚರಣೆ!

ಬನ್ನೇರುಘಟ್ಟ ಸಮೀಪ 400 ಕೆವಿ ಹೈಟೆನ್ಷನ್ ವಿದ್ಯುತ್ ಮಾರ್ಗದಲ್ಲಿ 90 ಅಡಿಗೂ ಹೆಚ್ಚು ಎತ್ತರದಲ್ಲಿ ಸಿಲುಕಿದ್ದ ಕಪ್ಪು ಗಿಡುಗವನ್ನು ಕೆಪಿಟಿಸಿಎಲ್‌ನ ವಿಶೇಷ ಲೈವ್‌ಲೈನ್ ನಿರ್ವಹಣಾ ವಾಹನದ ನೆರವಿನಿಂದ ರಕ್ಷಿಸಲಾಗಿದೆ. ವಿದ್ಯುತ್ ಪೂರೈಕೆಗೆ ಅಡ್ಡಿಯಾಗದಂತೆ ನಿರ್ವಹಣೆಗೆ ಬಳಸುವ, ಬ್ರೆಜಿಲ್‌ನಿಂದ ತರಿಸಿಕೊಂಡಿರುವ ಈ ವಾಹನದ ಇನ್ಸುಲೇಟೆಡ್ ಪ್ಲಾಟ್‌ಫಾರ್ಮ್ ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಯಿತು.

5 ದಿನಗಳಿಂದ 400 ಕೆವಿ ವಿದ್ಯುತ್ ಲೈನಲ್ಲಿ ಸಿಲುಕಿದ್ದ ಗಿಡುಗನ ರಕ್ಷಣೆ: ವಿದ್ಯುತ್ ಕಡಿತಗೊಳಿಸದೇ ನಡೆಯಿತು ರೋಚಕ ಕಾರ್ಯಾಚರಣೆ!
ಸಾಂದರ್ಭಿಕ ಚಿತ್ರ

Updated on: Nov 28, 2026 | 7:43 AM

ಮುಖ್ಯಾಂಶಗಳು

  • 400 ಕೆವಿ ವಿದ್ಯುತ್ ಮಾರ್ಗದಲ್ಲಿ ಸಿಲುಕಿದ್ದ ಗಿಡುಗ
  • 90 ಅಡಿಗೂ ಹೆಚ್ಚು ಎತ್ತರದಲ್ಲಿದ್ದ ವಿದ್ಯತ್ ಲೈನ್​ನಿಂದ ಗಿಡುಗ ರಕ್ಷಣೆ
  • ವಿದ್ಯುತ್ ಪೂರೈಕೆ ಸ್ಥಗಿತಗೊಳಿಸದೆ ನಡೆಯಿತು ರೋಚಕ ಕಾರ್ಯಾಚರಣೆ

ಬೆಂಗಳೂರು, ನವೆಂಬರ್ 28: 400 ಕೆವಿ ಹೈಟೆನ್ಷನ್ ವಿದ್ಯುತ್ ಮಾರ್ಗದಲ್ಲಿ ಸಿಲುಕಿಕೊಂಡು ಅಪಾಯದಲ್ಲಿದ್ದ ಕಪ್ಪು ಗಿಡುಗವೊಂದನ್ನು ಕೆಪಿಟಿಸಿಎಲ್‌ನ ವಿಶೇಷ ಲೈವ್‌ಲೈನ್ ನಿರ್ವಹಣಾ ವಾಹನದ ನೆರವಿನಿಂದ ಸುರಕ್ಷಿತವಾಗಿ ಬಚಾವ್ ಮಾಡುವಲ್ಲಿ ಬೆಸ್ಕಾಂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿದ್ಯುತ್ ಪೂರೈಕೆಗೆ ಅಡ್ಡಿಯಾಗದಂತೆ ನಿರ್ವಹಣಾ ಕಾರ್ಯ ನಡೆಸಲು ಬಳಸುವ ಈ ವಾಹನ, ಪಕ್ಷಿಯ ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಿದೆ.

ಬನ್ನೇರುಘಟ್ಟ ಸಮೀಪದ ಕೃಷಿ ಭೂಮಿಯ ಬಳಿ 90 ಅಡಿಗೂ ಹೆಚ್ಚು ಎತ್ತರದಲ್ಲಿರುವ ವಿದ್ಯುತ್ ಲೈನ್​ನಲ್ಲಿ ಕಪ್ಪು ಗಿಡುಗ ಸೋಮವಾರ ಮಧ್ಯಾಹ್ನದಿಂದ ಸಿಲುಕಿಕೊಂಡಿತ್ತು. ಗುರುವಾರ ಪಕ್ಷಿಯನ್ನು ರಕ್ಷಿಸುವಂತೆ ಏವಿಯನ್ ಆ್ಯಂಡ್ ರೆಪ್ಟೈಲ್ ರಿಹ್ಯಾಬಿಲಿಟೇಷನ್ ಸೆಂಟರ್ (ARRC)ಗೆ ಕರೆ ಬಂದಿತ್ತು.

Loading...

400 ಕೆವಿ ವಿದ್ಯುತ್ ಮಾರ್ಗದಲ್ಲಿ ಪಕ್ಷಿ ಸಿಲುಕಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಾಗಿತ್ತು. ಪಕ್ಷಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲು ಎಆರ್​ಆರ್​ಸಿ ತಂಡ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಆರಂಭದಲ್ಲಿ ರಾತ್ರಿ ವೇಳೆ ಮಾತ್ರ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಸಾಧ್ಯ ಎಂದು ತಿಳಿಸಲಾಗಿತ್ತು. ಈ ಮಾರ್ಗದಿಂದ ಬೆಂಗಳೂರಿನ ಸುಮಾರು 10 ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದ್ದರಿಂದ ಹಗಲಿನಲ್ಲಿ ವಿದ್ಯುತ್ ಸ್ಥಗಿತಗೊಳಿಸುವುದು ಕಷ್ಟವಾಗಿತ್ತು.

ಈ ನಡುವೆ, ಪಕ್ಷಿಯ ರಕ್ಷಣೆಗೆ ವಿಳಂಬವಾದರೆ ಮತ್ತಷ್ಟು ಹಾನಿಯಾಗಬಹುದು ಎಂಬ ಆತಂಕ ರಕ್ಷಣಾ ತಂಡದಲ್ಲಿತ್ತು. ಪಕ್ಷಿಯ ರಕ್ಷಣೆಗೆ ಸಾರ್ವಜನಿಕರು ಸ್ವತಃ ಪ್ರಯತ್ನಿಸುವ ಸಾಧ್ಯತೆಯ ಬಗ್ಗೆಯೂ ತಂಡ ಕಳವಳ ವ್ಯಕ್ತಪಡಿಸಿತ್ತು.

ಕೆಪಿಟಿಸಿಎಲ್‌ನ ಲೈವ್‌ಲೈನ್ ನಿರ್ವಹಣಾ ವಾಹನದ ವಿಶೇಷವೇನು?

ಇದಕ್ಕೆ ಪರ್ಯಾಯವಾಗಿ ಕೆಪಿಟಿಸಿಎಲ್‌ನ ಲೈವ್‌ಲೈನ್ ನಿರ್ವಹಣಾ ವಾಹನವನ್ನು ಬಳಸುವ ಆಲೋಚನೆ ಮೂಡಿತು. ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸದೆ ನಿರ್ವಹಣಾ ಕಾರ್ಯ ನಡೆಸಲು ಬ್ರೆಜಿಲ್‌ನಿಂದ ಈ ವಾಹನವನ್ನು ಆಮದು ಮಾಡಿಕೊಳ್ಳಲಾಗಿದೆ. ವಾಹನದಲ್ಲಿರುವ ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್‌ ಮೂಲಕ ಪಕ್ಷಿ ಸಿಲುಕಿದ್ದ ಎತ್ತರವನ್ನು ತಲುಪಲು ಸಾಧ್ಯವಾಯಿತು ಎಂದು ರಕ್ಷಣಾ ತಂಡ ತಿಳಿಸಿದೆ.

ಇದನ್ನೂ ಓದಿ: ಬೆಸ್ಕಾಂ ಗ್ರಾಹಕರಿಗೆ ಗುಡ್‌ನ್ಯೂಸ್! 2027ರ ಏಪ್ರಿಲ್‌ನಿಂದ ಪ್ರತಿ ಯೂನಿಟ್‌ಗೆ 35 ಪೈಸೆ ಮರುಪಾವತಿ

ಸಾಮಾನ್ಯವಾಗಿ ವಿದ್ಯುತ್ ಮಾರ್ಗಗಳ ನಿರ್ವಹಣೆಗೆ ಬಳಸುವ ವಿಶೇಷ ವಾಹನ, ಈ ಬಾರಿ ಅಪಾಯದಲ್ಲಿದ್ದ ಪಕ್ಷಿಯ ಜೀವ ಉಳಿಸುವ ಕಾರ್ಯಕ್ಕೆ ನೆರವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us