ಬೆಂಗಳೂರು ಮಹಾಲಕ್ಷ್ಮೀ ಕೊಲೆ: ಸಾವಿನ ಮನೆಯಲ್ಲಿ ಹಲವರ ಬೆರಳಚ್ಚು ಗುರುತು ಪತ್ತೆ, ಹೊರ ರಾಜ್ಯಗಳಲ್ಲೂ ಪೊಲೀಸರ ತಲಾಶ್
Bengaluru Mahalaxmi Murder Case: ದೆಹಲಿ ಶ್ರದ್ಧಾ ಕೊಲೆ ಮಾದರಿಯಲ್ಲಿ ಬೆಂಗಳೂರಿನಲ್ಲೂ ನಡೆದಿದೆ. ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್ನಲ್ಲಿ ತುಂಬಲಾಗಿತ್ತು. ಮಹಾಲಕ್ಷ್ಮೀಯನ್ನು ಕೊಲೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಲವು ವಿಚಾರಗಳು ತಿಳಿದಿವೆ.
ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ವೈಯಾಲಿಕಾವಲ್ ನಿವಾಸಿ ಮಹಾಲಕ್ಷ್ಮೀ ಕೊಲೆ (Bengaluru Mahalaxmi Murder Case) ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಹಲವು ತಂಡಗಳನ್ನು ರಚಿಸಿಕೊಂಡು ಹುಡುಕಾಟ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ಹೊರ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿರುವಾಗಲೇ ಹಲವು ವಿಚಾರಗಳು ಬಹಿರಂಗಗೊಂಡಿವೆ.
ಮಹಾಲಕ್ಷ್ಮೀಯನ್ನು 50 ತುಂಡಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿ ಇಟ್ಟು, ಆರೋಪಿ ಪರಾರಿಯಾಗಿದ್ದಾನೆ. ಕೊಲೆಯಾದ ಮಹಾಲಕ್ಷ್ಮೀ ಮನೆಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಆರೋಪಿಯ ಗುರುತಿಗಾಗಿ ಶೋಧ ನಡೆಸಿದಾಗ ಹಲವರ ಬೆರಳಚ್ಚು ಗುರುತು ಪತ್ತೆಯಾಗಿವೆ. ಈ ಮೂಲಕ, ಮಹಾಲಕ್ಷ್ಮೀಯನ್ನು ಹಲವರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.
ಈ ನಡುವೆ ಮಹಾಲಕ್ಷ್ಮಿಯ ತಾಯಿ ಮೀನಾ ಕೊಟ್ಟಿರುವ ದೂರಿನಲ್ಲಿ ಹಲವು ಸಂಗತಿಗಳು ಬಯಲಾಗಿವೆ. ಮೀನಾ ಅವರಿಗೆ ನಾಲ್ವರು ಮಕ್ಕಳು. ಈ ಪೈಕಿ ಮೊದಲ ಮಗಳು ಲಕ್ಷ್ಮೀ. ಲಕ್ಷ್ಮೀ, ಸೈಯದ್ ಇಮ್ರಾನ್ ಎಂಬುವುರ ಜೊತೆ ಲವ್ ಮ್ಯಾರೇಜ್ ಆಗಿದ್ದು, ಶಾಹೀದಾ ಬುಷುರ ಅಂತ ಹೆಸರು ಬದಲಿಸಿಕೊಂಡಿದ್ದಾಳೆ.
ಇದನ್ನೂ ಓದಿ: FSL ತಜ್ಞರಿಗೆ ತಲೆನೋವಾದ ಬೆಂಗಳೂರು ಮಹಾಲಕ್ಷ್ಮೀ ಕೊಲೆ, ಪತ್ತೆಯಾಗದ ರಕ್ತದ ಕಲೆ!
ಕೊಲೆಯಾದ ಈ ಮಹಾಲಕ್ಷ್ಮೀ ಎರಡನೇ ಮಗಳು. ಹೇಮಂತ್ ದಾಸ್ ಎಂಬುವುರ ಜೊತೆ ಅರೇಂಜ್ಡ್ ಮ್ಯಾರೆಜ್ ಆಗಿದ್ದರು. ಮೂರನೇಯವನು ಮಗ ಉಕ್ಕುಂ ಸಿಂಗ್, ಡೆಲಿವರಿ ಬಾಯ್ ಆಗಿದ್ದಾರೆ. ನಾಲ್ಕನೆಯವನು ನರೇಶ್, ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮಹಾಲಕ್ಷ್ಮೀ ಕಳೆದ ಒಂಬತ್ತು ತಿಂಗಳಿನಿಂದ ಪತಿಯಿಂದ ದೂರವಿದ್ದಳು. ಕಳೆದ ವರ್ಷ ಅಕ್ಟೋಬರ್ನಲ್ಲಿ ವೈಯಾಲಿಕಾವಲ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಳು. ಉಕ್ಕುಂ ಸಿಂಗ್ ಮತ್ತು ಆತನ ಪತ್ನಿ ಹಾಗೂ ಮಹಾಲಕ್ಷ್ಮೀ ಒಟ್ಟಿಗೆ ಇದ್ದರು. ಅಕ್ಕ ಮಹಾಲಕ್ಷ್ಮೀ, ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದಳು ಅಂತ ಉಕ್ಕುಂ ಸಿಂಗ್ ಬೇರೆ ಮನೆಗೆ ಮಾಡಿದರು. ಹೀಗೆ ಗಂಡನ ಜೊತೆಗಿನ ಜಗಳ, ಸಹೋದರನ ಜೊತೆಗಿನ ಮುನಿಸು, ಮನೆ ಬಿಟ್ಟು ಹೋಗಿದ್ದು ಎಲ್ಲವೂ ಬಯಲಾಗಿದೆ.
ಆದರೆ, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಹೇಳುವ ಪ್ರಕಾರ ಆರೋಪಿ ಹೊರ ರಾಜ್ಯದವನಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದನಂತೆ. ಆರೋಪಿ, ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಈ ಕೊಲೆ ಮಾಡಿದ್ದು ಒಬ್ಬನ್ನಾ ಅಥವಾ ಇಬ್ಬರಾ ಎಂಬವುದು ಪೊಲೀಸ್ ತನಿಖೆಯಿಂದ ಗೊತ್ತಾಗಲಿದೆ.
-ಪ್ರದೀಪ್ ಚಿಕ್ಕಾಟಿ ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 am, Wed, 25 September 24