ಸಾರಿಗೆ ನೌಕರರ ಮುಷ್ಕರ ಸಾಧ್ಯತೆ: ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತದ ಆತಂಕ
ಕೆಎಸ್ಆರ್ಟಿಸಿ ಕರ್ನಾಟಕದ, ಬಿಎಂಟಿಸಿ ಬೆಂಗಳೂರಿನ ಜನರ ಸಂಚಾರ ಜೀವನಾಡಿ. ಅರ್ಧಗಂಟೆ ಬಸ್ಸುಗಳು ಬರಲಿಲ್ಲ ಅಂದರೆ ರಾಜ್ಯದ ಜನರು ಪರದಾಡುತ್ತಾರೆ. ಅಂತಹದ್ದರಲ್ಲಿ ಇಡೀ ರಾಜ್ಯದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳ ಸಂಚಾರವೇ ಇರುವುದಿ ಅಂದರೆ ಜನರ ಪರಿಸ್ಥಿತಿ ಏನಾಗಬೇಡ ಹೇಳಿ!
ಬೆಂಗಳೂರು, ಸೆಪ್ಟೆಂಬರ್ 25: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೇರಿದಂತೆ, ಒಟ್ಟು ಆರು ಸಾರಿಗೆ ಸಂಘಟನೆಗಳು ಜತೆಗೂಡಿ ಮುಷ್ಕರಕ್ಕೆ ಸಿದ್ಧತೆ ಮಾಡಿಕೊಂಡಿವೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಸಾರಿಗೆ ಮುಷ್ಕರಕ್ಕೆ ಸಿದ್ಧರಾಗಲು ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ಕರೆ ನೀಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರಕ್ಕೆ ಈ ತಿಂಗಳ 26 ರ ವರೆಗೆ ಗಡುವು ನೀಡಲಾಗಿದೆ. ಈ ತಿಂಗಳ 26 ರೊಳಗೆ ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ, 27 ರಂದು ಸಭೆ ನಡೆಸಿ ಮುಷ್ಕರದ ದಿನಾಂಕ ಘೋಷಣೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮಾತಾನಾಡಿದ ಅನಂತ ಸುಬ್ಬರಾವ್, 27 ರಂದು ಸಭೆ ಮಾಡಿ ಮುಷ್ಕರ ದಿನಾಂಕ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.
ಸಾರಿಗೆ ನೌಕರರ ಬೇಡಿಕೆಗಳೇನು?
- ಈಗ ಸಾರಿಗೆ ನಿಗಮಗಳು ಬಾಕಿ ಇರಿಸಿರುವ ಮೊತ್ತವನ್ನು ಚುಕ್ತಾ ಮಾಡಲು ಸರ್ಕಾರವು 4,562 ಕೋಟಿ ರೂಪಾಯಿಗಳನ್ನು ಹಾಗೂ ಶಕ್ತಿ ಯೋಜನೆಯ ಬಾಕಿ ಹಣವಾದ 1,346 ಕೋಟಿ ರೂಪಾಯಿಗಳನ್ನು ನಿಗಮಗಳಿಗೆ ಕೊಡಬೇಕು.
- ಸರಬರಾಜುದಾರರಿಗೆ ಮತ್ತು ಇಂಧನ ಬಾಕಿ ಕಡೆಗೆ 998 ಕೋಟಿ ರೂಪಾಯಿಗಳನ್ನು ಸರ್ಕಾರವು ನಿಗಮಗಳಿಗೆ ಕೊಡಬೇಕು.
- ಶಕ್ತಿ ಯೋಜನೆ ಅನುಷ್ಠಾನದ ಕಡೆಗೆ ಪ್ರತಿ ತಿಂಗಳು ಸಾರಿಗೆ ನಿಗಮಗಳಿಗೆ ಖರ್ಚಾಗುವ ಹಣವನ್ನು ಮುಂದಿನ ತಿಂಗಳು ಮೊದಲನೆ ವಾರದಲ್ಲೇ ಕೊಡಬೇಕು.
- ವಿಶೇಷ ಸಮಿತಿಗಳ ಶಿಫಾರಸಿನಂತೆ, ಪ್ರಯಾಣ ದರ ನಿರ್ಧರಿಸಲು ತಜ್ಞರ ಸಮಿತಿ ರಚಿಸುವುದು.
- ಈ ಸೂಚನೆಯನ್ನು ಸರ್ಕಾರ ಒಪ್ಪದಿದ್ದ ಪಕ್ಷದಲ್ಲಿ, ಸಾರಿಗೆ ನಿಗಮಗಳ ಎಲ್ಲಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
- ಜಂಟಿ ಕ್ರಿಯಾ ಸಮಿತಿಯಿಂದ ದಿನಾಂಕ 25.01.2024 ರಂದು ಕೊಟ್ಟಿರುವ ದಿನಾಂಕ 01.01.2024 ರ ವೇತನ ಪರಿಷ್ಕರಣೆ, 01.01.2020ರಿಂದ 38 ತಿಂಗಳ ಬಾಕಿ ಪಾವತಿ, ನಿವೃತ್ತ ನೌಕರರಿಗೆ 27.06.2024 ರ ಆದೇಶದ ಪ್ರಕಾರ ಕೂಡಲೇ ಹಣ ಪಾವತಿಸುವುದು ಹಾಗೂ ಇತರೆ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು.
ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಲ್ಲಿ ಒಟ್ಟು 23,978 ಬಸ್ಸುಗಳಿದ್ದು, ಇವುಗಳಲ್ಲಿ 1,04,450 ನೌಕರರಿದ್ದಾರೆ. ಈಗಾಗಲೇ ಸಾರಿಗೆ ನೌಕರರು 2020 ರ ಡಿಸೆಂಬರ್ – 10 ರಿಂದ 14 ರ ವರೆಗೆ 5 ದಿನಗಳ ಕಾಲ ಮತ್ತು 2021 ರಲ್ಲಿ ಏಪ್ರಿಲ್- 7 ರಿಂದ 21 ರ ವರೆಗೆ 17 ದಿನಗಳ ಮುಷ್ಕರ ಮಾಡಿ ಅಂದಿನ ಬಿಜೆಪಿ ಸರ್ಕಾರಕ್ಕೆ ಸರಿಯಾಗಿ ಬಿಸಿ ಮುಟ್ಟಿಸಿದ್ದರು. ಇದೀಗ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಸಿದ್ಧರಾಗಲು ಕರೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ಮುಖಂಡರ ಜೊತೆಗೆ ಮಾತಾನಾಡಿ ಸಮಸ್ಯೆ ಬಗಹರಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿಂದು ವಿಚಾರಣೆ, ಸಿದ್ದರಾಮಯ್ಯಗಿದೆ ಸಾಲು ಸಂಕಷ್ಟ
ಒಟ್ಟಿನಲ್ಲಿ ಈಗಾಗಲೇ ಸಾರಿಗೆ ಮುಖಂಡರು 26 ರವರೆಗೆ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಗಡುವು ನೀಡಿದ್ದು, ಒಂದು ವೇಳೆ 26 ರೊಳಗೆ ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ 27 ರಂದು ಮುಷ್ಕರದ ದಿನಾಂಕ ಘೋಷಣೆ ಮಾಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ